ಬುಧವಾರ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ ಕುಲ್ಗಾಮ್ ಜಿಲ್ಲೆಯ ಖೇರ್ವಾನ್ ನಿವಾಸಿ, ಲಷ್ಕರ್ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್, ಕಾಲೇಜು ಬಿಟ್ಟು ಬಡಗಿ ಕೆಲಸ ಮಾಡುತ್ತಿದ್ದ. ಆದರೆ ಒಂದು ವರ್ಷದ ಹಿಂದೆ ಆ ಕೆಲಸವನ್ನೂ ಬಿಟ್ಟು ಲಷ್ಕರ್ ಎ ತೊಯ್ಬಾ ಸೇರಿಕೊಂಡಿದ್ದ!
* (ಪು1) ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ಹತ್ಯೆ
- ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿ ರೂವಾರಿ ಫಿನಿಶ್- ಕುಲ್ಗಾ ಮಸೀದಿಯಲ್ಲಿ ಅಡಗಿ ಕುಳಿತಿದ್ದ ಕುಖ್ಯಾತ ಉಗ್ರ- ವಿಡಿಯೋ ಕಾಲ್‌ನಲ್ಲಿ ಶರಣಾಗಲು ಸೂಚಿಸಿದ ಯೋಧರು- ನಿರಾಕರಿಸಿ ದಾಳಿ ಮಾಡಿದ ಭಟ್ । ಪ್ರತಿದಾಳಿಯಲ್ಲಿ ಹತ್ಯೆ
- ಕಾಶ್ಮೀರದ ಕೊನೆಯ ಸಕ್ರಿಯ ಉಗ್ರ ನಾಯಕ ಆಗಿದ್ದ ಭಟ್- ಯೋಧರಿಗೆ ರಾಷ್ಟ್ರದ ನಮನ: ಗೃಹ ಸಚಿವ ಅಮಿತ್ ಶಾ ಖುಷಿ- ಕೆಲವನ್ನು ತಣ್ಣಗೇ ಮುಗಿಸಬೇಕು: ಸಿಆರ್‌ಪಿಎಫ್ ಮುಖ್ಯಸ್ಥ- ಇಂಥ ದಿನ ಬರುತ್ತೆ ಎಂದುಕೊಂಡಿರಲಿಲ್ಲ: ಕಾಶ್ಮೀರ ಪೊಲೀಸ್
ಪಿಟಿಐ ಶ್ರೀನಗರಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಲತೀಫ್ ಭಟ್ (20) ಹತನಾಗಿದ್ದಾನೆ. ಈತ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಉಗ್ರ ಎನ್ನಲಾಗಿದೆ. ಹೀಗಾಗಿ ಈ ಕಾರ್ಯಾಚರಣೆಯನ್ನು ‘ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಒಂದು ದೊಡ್ಡ ಯಶಸ್ಸು’ ಎಂದು ಭದ್ರತಾ ಪಡೆಗಳು ಬಣ್ಣಿಸಿವೆ.ಸೋಮವಾರ ನಡೆದ ಕಾರ್ಯಾಚರಣೆ ವೇಳೆ ಈತ ಪರಾರಿಯಾಗಿದ್ದ. ಆದರೆ ಪುನಃ ಸಿಕ್ಕ ಖಚಿತ ಗುಪ್ತಚರ ಮಾಹಿತಿ ಆಧರಿಸಿ ಬುಧವಾರ ಬೆಳಗಿನಜಾವ ಕುಲ್ಗಾಂ ಜಿಲ್ಲೆಯ ದೇವ್‌ಸರ್ ಪ್ರದೇಶದ ಜಂಗಲ್ ಪೋರಾ ಗ್ರಾಮದಲ್ಲಿ ಸೇನೆ ಮತ್ತು ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆಗ ಈತ ಹತನಾಗಿದ್ದಾನೆ.ಶರಣಾಗತಿಗೆ ಸೇನೆ ಅವಕಾಶ, ವಿಡಿಯೋ ಕಾಲ್:
ಗ್ರಾಮದ ಮಸೀದಿಯೊಂದರಲ್ಲಿ ಅಡಗಿದ್ದ ಲತೀಫ್ ಭಟ್‌ನನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದವು. ಕಾರ್ಯಾಚರಣೆಗೂ ಮುನ್ನ ಸೇನಾಧಿಕಾರಿಗಳು ವಿಡಿಯೋ ಕಾಲ್ ಮೂಲಕ ಲತೀಫ್‌ನನ್ನು ಸಂಪರ್ಕಿಸಿ, ಶಸ್ತ್ರ ತ್ಯಜಿಸಿ ಶರಣಾಗುವಂತೆ ಮನವಿ ಮಾಡಿದ್ದರು.ಆದರೆ ಸೇನೆಯ ಮನವಿಯನ್ನು ತಿರಸ್ಕರಿಸಿದ ಉಗ್ರನು ಗುಂಡಿನ ದಾಳಿ ನಡೆಸಿದ್ದ. ನಂತರ ಸೈನ್ಯವು ಅತನನ್ನು ಅಡಗಿಕೊಂಡ ಸ್ಥಳದಿಂದ ಹೊರಗೆಳೆಯಲು ಅಶ್ರುವಾಯು ಪ್ರಯೋಗಿಸಿ ಗುಂಡು ಹಾರಿಸಿತು. ಆಗ ಪ್ರತಿದಾಳಿಯಲ್ಲಿ ಹತನಾಗಿದ್ದಾನೆ.ಒಂದೇ ವರ್ಷದಲ್ಲಿ ಮೋಸ್ಟ್ ವಾಂಟೆಡ್ ಉಗ್ರ:ಕುಲ್ಗಾಮ್ ಜಿಲ್ಲೆಯ ಖೇರ್ವಾನ್ ನಿವಾಸಿ ಮೊಹಮ್ಮದ್ ಲತೀಫ್ ಭಟ್ ಕಾಲೇಜು ಬಿಟ್ಟು ಬಡಗಿ ಕೆಲಸ ಮಾಡುತ್ತಿದ್ದ. ಆದರೆ ಒಂದು ವರ್ಷದ ಹಿಂದೆ ಕೆಲಸ ಬಿಟ್ಟು ಲಷ್ಕರ್ ಎ ತೊಯ್ಬಾ ಸೇರಿಕೊಂಡಿದ್ದ. ಅವನಿಗೆ ಗಡಿಯಾಚೆಯಿಂದ ಕಾಶ್ಮೀರದಲ್ಲಿ ಶಾಂತಿ ಭಂಗಗೊಳಿಸಲು, ಪ್ರವಾಸೋದ್ಯಮಕ್ಕೆ ಹಾನಿ ಮಾಡಲು ಮತ್ತು ಆರ್ಥಿಕತೆಗೆ ಹಾನಿ ಮಾಡಲು ನಿರ್ದೇಶನಗಳು ಬರುತ್ತಿದ್ದವು. ಹೀಗಾಗಿ ಒಂದೇ ವರ್ಷದಲ್ಲಿ ‘ಎ’ ಕೆಟಗರಿಯ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ. ಭಟ್ ತಲೆಯ ಮೇಲೆ ಭದ್ರತಾ ಪಡೆಗಳು ₹15 ಲಕ್ಷ ಬಹುಮಾನ ಘೋಷಿಸಿದ್ದವು.
ಕಳೆದ ನವೆಂಬರ್ 11ರಂದು ಕುಲ್ಗಾಂನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆದ ದಾಳಿಯಲ್ಲಿ ಈತ ಭಾಗಿಯಾಗಿದ್ದ. ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು.ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಈತನ ಸಹಚರ ಉಮರ್ ನಿಸಾರ್ ದಾರ್‌ನನ್ನು ಸೋಮವಾರ (ನವೆಂಬರ್ 16) ಲಾರು ಬೈಪಾಸ್ ಬಳಿ ಹತ್ಯೆ ಮಾಡಲಾಗಿತ್ತು, ಆದರೆ ಆ ವೇಳೆ ಲತೀಫ್ ತಪ್ಪಿಸಿಕೊಂಡಿದ್ದ.ಜುಲೈ 22ರಂದು ಅನಂತನಾಗ್‌ನಲ್ಲಿ ಹೆಡ್ ಕಾನ್‌ಸ್ಟೇಬಲ್ ಅಶಿಕ್ ಹುಸೇನ್ ಖುರೇಷಿ ಅವರ ಹತ್ಯೆ ಹಾಗೂ ಜುಲೈ 31 ರಂದು ಕುಲ್ಗಾಂನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿ ಪ್ರಕರಣಗಳಲ್ಲೂ ಈತ ಬೇಕಾಗಿದ್ದ.ಅಮಿತ್ ಶಾ ಅಭಿನಂದನೆ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವ ಉಗ್ರ ಮೊಹಮ್ಮದ್ ಲತೀಫ್ ಭಟ್ ಹತ್ಯೆಯಾದ ಬೆನ್ನಲ್ಲೇ ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದಾರೆ. ‘ಭಟ್ ಕಾಶ್ಮೀರದ ಕೊನೆಯ ಸಕ್ರಿಯ ಸ್ಥಳೀಯ ಉಗ್ರ ನಾಯಕನಾಗಿದ್ದ. ಜಮ್ಮು-ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಮತ್ತು ಗುಪ್ತಚರ ಸಂಸ್ಥೆಗಳ ಧೈರ್ಯಶಾಲಿ ಯೋಧರಿಗೆ ರಾಷ್ಟ್ರವು ನಮಿಸುತ್ತದೆ’ ಎಂದು ಹೇಳಿದ್ದಾರೆ.
ಕೆಲವನ್ನು ತಣ್ಣಗೇ ಮುಗಿಸಬೇಕು: ಸಿಆರ್‌ಪಿಎಫ್ ಮುಖ್ಯಸ್ಥಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಗೆ ತಲೆನೋವಾಗಿದ್ದ ಲಷ್ಕರ್ ಉಗ್ರ ಲತೀಫ್ ಭಟ್ ಎನ್‌ಕೌಂಟರ್ ಕುರಿತು ಸಿಆರ್‌ಪಿಎಫ್ ಮುಖ್ಯಸ್ಥ ಜಿಪಿ ಸಿಂಗ್ ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ವ್ಯಾಪಕ ವೈರಲ್ ಆಗುತ್ತಿದೆ.‘ಅಭಿನಂದನೆಗಳು ಗೆಳೆಯರೇ. ಕೆಲವು ಲೆಕ್ಕಾಚಾರಗಳನ್ನು ಚಳಿಯ ವಾತಾವರಣದಲ್ಲೂ ತಣ್ಣಗಾಗಿಯೇ ಮುಗಿಸುವುದು ಉತ್ತಮ’ ಎಂದು ಸಿಂಗ್ ಪೋಸ್ಟ್ ಮಾಡಿದ್ದಾರೆ. ಇದು ಉಗ್ರನ ಹತ್ಯೆಯನ್ನು ಉಲ್ಲೇಖಿಸಿ ಮಾಡಿರುವ ಪರೋಕ್ಷ ಹೇಳಿಕೆ ಎಂದು ವಿಶ್ಲೇಷಿಸಲಾಗಿದೆ.
ಜಮ್ಮು-ಕಾಶ್ಮೀರ ಪೊಲೀಸರು ಕೂಡ ’ನೀವು ಓಡಿಹೋಗಬಹುದು, ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ’ ಎಂದು ಟ್ವೀಟಿಸಿದ್ದಾರೆ. ‘2026 ರಲ್ಲಿ ಇದಕ್ಕಿಂತ ದೊಡ್ಡ ಯಶಸ್ಸು ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ’ ಎಂದು ಕುಲ್ಗಾಂ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅನಯತ್ ಅಲಿ ಚೌಧರಿ ಹೇಳಿದ್ದಾರೆ.