ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖವೇ 6 ನಕ್ಸಲೀಯರು ಗೃಹ ಕಚೇರಿಗೇ ಬಂದು ಸರೆಂಡರ್‌

Published : Jan 09, 2025, 08:08 AM IST
Siddaramaiah

ಸಾರಾಂಶ

ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸತತ ಎರಡು ದಶಕಕ್ಕೂ ಹೆಚ್ಚಿನ ಕಾಲ ಸಶಸ್ತ್ರವಾಗಿ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿದ್ದ 6 ಮಂದಿ ನಕ್ಸಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬುಧವಾರ ಶರಣಾದರು.

 ಬೆಂಗಳೂರು : ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸತತ ಎರಡು ದಶಕಕ್ಕೂ ಹೆಚ್ಚಿನ ಕಾಲ ಸಶಸ್ತ್ರವಾಗಿ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿದ್ದ 6 ಮಂದಿ ನಕ್ಸಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬುಧವಾರ ಶರಣಾದರು.

ಶರಣಾದ ನಕ್ಸಲರಿಗೆ ಮುಖ್ಯಮಂತ್ರಿಗಳು ಸಂವಿಧಾನ ಪುಸ್ತಕ ಮತ್ತು ಗುಲಾಬಿ ನೀಡುವ ಮೂಲಕ ಅವರ ಶರಣಾಗತಿಯನ್ನು ಅಂಗೀಕರಿಸಿದರು. ಆ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವವರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾದಂತಾಗಿದೆ.

2024ರ ನವೆಂಬರ್‌ನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ನಂತರ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವವರು ಶಸ್ತ್ರತ್ಯಾಗ ಮಾಡಿ ಶರಣಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ನಕ್ಸಲ್‌ ಪುನರ್ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಮತ್ತಿತರ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಸಕ್ರಿಯರಾಗಿದ್ದ ನಕ್ಸಲೀಯರೊಂದಿಗೆ ಮಾತುಕತೆ ನಡೆಸಿ ಸಮಾಜದ ಮುಖ್ಯವಾಹಿನಿಯೊಂದಿಗೆ ಬರುವಂತೆ ಮಾತುಕತೆ ನಡೆಸಿದ್ದರು. ಅವರ ಮಾತುಕತೆ ಫಲವಾಗಿ ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿ ಒಟ್ಟು 6 ಮಂದಿ ಶರಣಾಗತಿಗೆ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಬುಧವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಆಗಮಿಸಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾದರು.

ಬೆಂಗಳೂರಲ್ಲೇ ಶರಣಾಗಿದ್ದೇಕೆ?

- ನಕ್ಸಲರ ಶರಣಾಗತಿ ವಿಷಯ ತಿಳಿದು ಚಿಕ್ಕಮಗಳೂರು ಡೀಸಿ ಕಚೇರಿ ಎದುರು ಜನ ಜಮಾವಣೆ

- ಜತೆಗೆ ಸಿಎಂ ಅವರನ್ನು ಭೇಟಿ ಮಾಡಲು ನಕ್ಸಲರು ಬಯಸಿದ ಕಾರಣ ಬೆಂಗಳೂರಿಗೆ ಆಗಮನ

ಮುಂದೇನು?

- ಸಿಎಂ ಬಳಿ ಶರಣಾದ ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕಾನೂನು ಪ್ರಕ್ರಿಯೆ ಆರಂಭವಾಗಲಿದೆ

- ನಕ್ಸಲರ ವಿರುದ್ಧದ ಎಲ್ಲ ಪ್ರಕರಣಗಳ ತನಿಖೆ ನಡೆಸಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಿದ್ದಾರೆ

- ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಅವಕಾಶ ಸರ್ಕಾರಕ್ಕಿದೆ

- ನಕ್ಸಲರ ವಿರುದ್ಧದ ಪ್ರಕರಣಗಳು ರದ್ದಾಗುವುದಿಲ್ಲ. ಶಿಕ್ಷೆಯಾದರೆ ಅದರ ಪ್ರಮಾಣ ಕಡಿಮೆ ಇರುವಂತೆ ಮಾಡಲಾಗುತ್ತದೆ

ನಕ್ಸಲ್‌ ಮುಕ್ತ ಗುರಿಗೆ ಯಶಸ್ಸು

ರಾಜ್ಯವನ್ನು ನಕ್ಸಲ್‌ ಚಟುವಟಿಕೆಯಿಂದ ಮುಕ್ತವಾಗಿಸುವುದು ನಮ್ಮ ಗುರಿಯಾಗಿದೆ. ಅದರಲ್ಲಿ ಬಹುತೇಕ ಯಶಸ್ಸು ಕಂಡಿದ್ದೇವೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಮವಸ್ತ್ರ ಸಿಎಂಗೆ ಕೊಟ್ಟ ನಕ್ಸಲರು

ಮುಖ್ಯವಾಹಿನಿಗೆ ಬರಲು ಆಹ್ವಾನಿಸಿದ್ದಕ್ಕೆ ಸಿಎಂಗೆ ತಮ್ಮ ಸಮವಸ್ತ್ರವನ್ನು ನಕ್ಸಲರು ಒಪ್ಪಿಸಿದರು. ಸಂವಿಧಾನ ಪುಸ್ತಕ, ಗುಲಾಬಿ ಹೂವನ್ನು ನಕ್ಸಲರಿಗೆ ಸಿಎಂ ನೀಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ