;Resize=(412,232))
ಬೆಂಗಳೂರು : ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮವು ಗ್ರಾಮೀಣ ಮಹಿಳೆಯರಿಂದ ತಯಾರಿಸಲ್ಪಟ್ಟ 6000 ಮ್ಯಾಟ್‌ಗಳು ಹಾಗೂ ತೆಂಗಿನ ನಾರಿನ ಇತರೆ ಉತ್ಪನ್ನಗಳನ್ನು ಜೈಪುರಕ್ಕೆ ಸರಬರಾಜು ಮಾಡುವ ವಾಹನಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಶನಿವಾರ ವಿಧಾನಸೌಧದ ಮುಂಭಾಗ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಿಗಮವು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಂದ ಪರಿಸರ ಸ್ನೇಹಿ ತೆಂಗಿನ ನಾರಿನ ಉತ್ಪನ್ನಗಳನ್ನು ತಯಾರಿಕೆ ಮಾಡಿಸುತ್ತಿರುವುದು. ಜೊತೆಗೆ ನಿಗಮದಿಂದಲೂ ವಿಶೇಷ ಮ್ಯಾಟ್‌ಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿರುವುದು ಉತ್ತಮ ಕಾರ್ಯ. ಇದು ಗ್ರಾಮೀಣ ಆರ್ಥಿಕತೆಗೆ ಶಕ್ತಿ ನೀಡುವಂತಹ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರದಿಂದ ಇಂತಹ ಪರಿಸರ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದರು.
ನಿಗಮದ ಅಧ್ಯಕ್ಷ ನಟರಾಜ್ ಜಾನಕಿರಾಮ್ ಮಾತನಾಡಿ, ನಿಗಮದ ಉತ್ಪನ್ನಗಳಲ್ಲಿ ಡಚ್ ಮ್ಯಾಟ್‌ಗಳು ಅತ್ಯಂತ ಜನಪ್ರಿಯ. ಅವುಗಳಿಗೆ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಬೇಡಿಕೆ ಇದೆ. ಹಾಗಾಗಿ ಹೆಚ್ಚಿನ ಮಟ್ಟದಲ್ಲಿ ತಯಾರಿಸಿ ಹೊರ ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿದೆ. 18ನೇ ಶತಮಾನದಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ತಯಾರಿಸಲ್ಪಟ್ಟ ಕಯರ್ ಮ್ಯಾಟ್ ಗಳನ್ನು ಡಚ್ ವ್ಯಾಪಾರಿಗಳು ಯುರೋಪಿಗೆ ರಫ್ತು ಮಾಡುತ್ತಿದ್ದರು, ಆದ್ದರಿಂದ ಈ ಮ್ಯಾಟ್ ಗಳು ಡಚ್ ಮ್ಯಾಟ್ ಎಂದೇ ಜನಪ್ರಿಯವಾಗಿವೆ ಎಂದು ಹೇಳಿದರು.
ನಿಗಮದ ಡಚ್ ಮ್ಯಾಟ್ ಗಳು ಬಲಿಷ್ಠ, ದೀರ್ಘಕಾಲಿಕ, ಪರಿಸರ ಸ್ನೇಹಿ ಹಾಗೂ ಅಲಂಕಾರಿಕ ಗುಣಗಳನ್ನು ಹೊಂದಿರುವುದರಿಂದ ಇವುಗಳು ದೇಶಾದ್ಯಂತ ಜನಪ್ರಿಯವಾಗಿವೆ ಮತ್ತು ಉಪ ಹಿಮಾಲಯ ರಾಜ್ಯಗಳಲ್ಲಿ ಡಚ್ ಮ್ಯಾಟ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ, ಮುಖ್ಯಮಂತ್ರಿಗಳ ಆಶಯದಂತೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರ ಮಾರ್ಗದರ್ಶನದಲ್ಲಿ ಹಸ್ತಚಾಲಿತ ಮ್ಯಾಟ್ ಫ್ರೇಮ್ ಬಳಸಿ ಸುಮಾರು 700 ಗ್ರಾಮೀಣ ಉದ್ಯೋಗ ಸೃಷ್ಟಿಸಲು ಕ್ರಮವಹಿಸಲಾಗುತ್ತಿದೆ ಎಂದು ವಿವರಿಸಿದರು. ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.