ದೊಡ್ಡಬಳ್ಳಾಪುರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಎವರ್‌ಬ್ಲೂ ಅಪೆರಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ಸಂಬಳ ಹೆಚ್ಚಳ ಮತ್ತು ಬೋನಸ್‌ಗಾಗಿ ಒತ್ತಾಯಿಸಿ ಮಹಿಳಾ ಕಾರ್ಮಿಕರು ಶನಿವಾರ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.
ಮಹಿಳಾ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಪ್ರತಿಭಟನೆಯಲ್ಲಿ ಪಾಲ್ಗೊಂಡು ಸ್ಥಳೀಯ ಮಹಿಳಾ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಮಾತನಾಡಿ, ಬೆಳಗ್ಗಿನಿಂದಲೂ ನೂರಾರು ಮಹಿಳಾ ಕಾರ್ಮಿಕರು, ಜಡಿ ಮಳೆಯಲ್ಲೇ ಕುಳಿತು ಧರಣಿ ನಡೆಸುತ್ತಿದ್ದಾರೆ. ಆದರೆ ಈವರೆಗೆ ಆಡಳಿತ ಮಂಡಲಿ ಕನಿಷ್ಠ ಸೌಜನ್ಯಕ್ಕೂ ಮಾತುಕತೆಗೆ ಬರದೆ ಉದ್ದಟತನ ತೋರುತ್ತಿದ್ದಾರೆ. ಕಳೆದ 6 ತಿಂಗಳಿಂದಲೂ ಸಂಬಳ ಹೆಚ್ಚಳಕ್ಕೆ ಆಗ್ರಹಿಸಿದರೂ ಪ್ರತಿಕ್ರಿಯೆ ನೀಡಿಲ್ಲ. ಪ್ರಶ್ನೆ ಮಾಡಿದರೆ ಅಂತಹವರನ್ನು ಗುರಿ ಮಾಡಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.ವಲಸಿಗ ಕಾರ್ಮಿಕರಿಗೆ ಮಣೆ ಹಾಕುವ ಕಾರ್ಖಾನೆಗಳು ಸ್ಥಳೀಯರನ್ನು ಜೀತದಾಳುಗಳಂತೆ ಕಾಣುತ್ತಾರೆ. 10-15 ವರ್ಷಗಳಿಂದ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ ಈವರೆಗೆ 13 ರಿಂದ 14 ಸಾವಿರ ರೂಪಾಯಿ ಸಂಬಳವನ್ನಷ್ಟೇ ನೀಡುತ್ತಿರುವುದು ಕನಿಷ್ಠ ಕೂಲಿ ನಿಯಮಾವಳಿಯನ್ನು ಉಲ್ಲಂಘಿಸಲಾಗಿದೆ. ಕಂಪನಿ ಸಂಕಷ್ಟದಲ್ಲಿದೆ ಎಂದು ಹೇಳುವ ಅವರು, ಕೆಲವೇ ದಿನಗಳ ಹಿಂದೆ ಮತ್ತೆರಡು ಘಟಕಗಳನ್ನು ಸ್ಥಾಪಿಸಿದ್ದಾರೆ. ಮಹಿಳಾ ಕಾರ್ಮಿಕರ ಹಕ್ಕೊತ್ತಾಯ ನ್ಯಾಯಸಮ್ಮತವಾಗಿದ್ದು, ಕೂಡಲೇ ಅವರ ಬೇಡಿಕೆಗಳನ್ನು ಆಡಳಿತ ಮಂಡಲಿ ಈಡೇರಿಸಬೇಕು. ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗಿದ್ದು ಎಷ್ಟೇ ದಿನ ಹೋರಾಟ ನಡೆದರೂ ಕರವೇ ಜೊತೆಗಿರಲಿದೆ ಎಂದು ಹೇಳಿದರು.
ಸಂತ್ರಸ್ಥ ಕಾರ್ಮಿಕರು ಮಾತನಾಡಿ, ತಮಗೆ ನ್ಯಾಯ ಸಿಗಬೇಕು. ಬೆವರು ಹರಿಸಿ ದುಡಿಯುವ ನಮಗೆ ಕನಿಷ್ಠ ಕೂಲಿಯನ್ನಾದರೂ ನೀಡಬೇಕು. ಸಂಬಳ ಕೇಳಿದರೆ ದುರಹಂಕಾರದಿಂದ ವರ್ತಿಸುವ ಅಧಿಕಾರಿಗಳ ಧೋರಣೆ ಬದಲಾಗಬೇಕು ಎಂದು ಆಗ್ರಹಿಸಿದರು.8ಕೆಡಿಬಿಪಿ1-
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಎವರ್‌ಬ್ಲೂ ಅಪೆರಲ್ ಕಾರ್ಖಾನೆ ಮಹಿಳಾ ಕಾರ್ಮಿಕರು ಸಂಬಳ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.