ಬೆಂಗಳೂರಿನಲ್ಲಿ ಮಳೆಗೆ ಗೋಡೆ ಕುಸಿದು 7 ಜನ ದಾರುಣ ಸಾವು

Published : Apr 30, 2026, 05:47 AM IST
Bengaluru Rain tragedy

ಸಾರಾಂಶ

 ಬೆಂಗಳೂರಲ್ಲಿ ಭಾರಿ ಗಾಳಿ, ಆಲಿಕಲ್ಲು ಸಹಿತ ಸುಮಾರು ಒಂದೂವರೆ ತಾಸು ಸುರಿದ ಮಳೆಗೆ ಬೌರಿಂಗ್ ಆಸ್ಪತ್ರೆ ನಿರ್ಮಾಣ ಹಂತದ ತಡೆಗೋಡೆ ಕುಸಿದು ಇಬ್ಬರು ಮಕ್ಕಳು, ಮಹಿಳೆಯರು ಸೇರಿ ಒಟ್ಟು ಏಳು ಮಂದಿ ಹಾಗೂ ವಿದ್ಯುತ್ ತಂತಿ ತಗುಲಿ ಜೆ.ಪಿ.ನಗರದಲ್ಲಿ ವ್ಯಕ್ತಿಯೊಬ್ಬರು ಸೇರಿ ಎಂಟು ಮಂದಿ ಸಾವಿಗೀಡಾಗಿದ್ದಾರೆ.

 ಬೆಂಗಳೂರು :  ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರು ನಗರದಲ್ಲಿ ಸಂಜೆ ವೇಳೆ ಭಾರಿ ಗಾಳಿ, ಆಲಿಕಲ್ಲು ಸಹಿತ ಸುಮಾರು ಒಂದೂವರೆ ತಾಸು ಸುರಿದ ಮಳೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆ ಕುಸಿದು ಇಬ್ಬರು ಮಕ್ಕಳು, ಮಹಿಳೆಯರು ಸೇರಿ ಒಟ್ಟು ಏಳು ಮಂದಿ ಹಾಗೂ ವಿದ್ಯುತ್ ತಂತಿ ತಗುಲಿ ಜೆ.ಪಿ.ನಗರದಲ್ಲಿ ವ್ಯಕ್ತಿಯೊಬ್ಬರು ಸೇರಿ ಎಂಟು ಮಂದಿ ಸಾವಿಗೀಡಾಗಿದ್ದಾರೆ.

ಗೋಡೆ ಕುಸಿದು ಮೃತಪಟ್ಟವರನ್ನು ನಗರದ ಜೆ.ಸಿ.ನಗರ ನಿವಾಸಿ ಮಹಮದ್ ಅಬ್ದುಲ್ ಹಕ್ (52), ಡಿ.ಜೆ.ಹಳ್ಳಿಯ ಫಯಾಜ್ ಅಹಮದ್ (39), ಕೆ.ಜಿ.ಹಳ್ಳಿಯ ಮುಸಾವೀರ್ (6), ಕೇರಳದ ಕೆ.ಕೆ.ಲತಾ(57), ಸ್ಮಿತಾ (47), ಉತ್ತರ ಪ್ರದೇಶದ ಮಹಮದ್ ಸಲಾವುದ್ದೀನ್ (36), ಅಸ್ಸಾಂನ ನಸೀಮುಲ್ಲಾ (19) ಎಂದು ಗುರುತಿಸಲಾಗಿದೆ. ಜೆ.ಪಿ.ನಗರದಲ್ಲಿ ಬಸ್ ನಿಲ್ದಾಣವೊಂದರಲ್ಲಿ ಅಳವಡಿಸಿದ್ದ ಜಾಹೀರಾತು ಬೋರ್ಡ್‌ನ ವಿದ್ಯುತ್ ತಗುಲಿ ರಘು (34) ಎಂಬವರು ಸಾವಿಗೀಡಾಗಿದ್ದಾನೆ.

ಬಿರುಗಾಳಿ ಸಹಿತ ಮಳೆ:

ಬುಧವಾರ ಸಂಜೆ ಜನ ಇನ್ನೇನು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಭಾರಿ ಗಾಳಿ ಬೀಸಲು ಆರಂಭವಾಗಿ ಕೆಲವೇ ಸಮಯದಲ್ಲಿ ಮೋಡ ಕವಿದು ನಗರದ ವಾತಾವರಣವೇ ಕ್ಷಣಕಾಲ ಬದಲಾಗಿ ಹೋಯಿತು. ಆಲಿಕಲ್ಲು ಮಳೆ ಆರಂಭವಾಯಿತು. ಮಳೆಯಿಂದ ತಪ್ಪಿಸಿಕೊಳ್ಳಲು ಹತ್ತಿರದ ಸ್ಥಳಗಳಲ್ಲಿ ಜನ ಆಶ್ರಯ ಪಡೆದುಕೊಂಡರು.

ಇದೇ ರೀತಿ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಸಮೀಪ ಮಳೆಯಿಂದ ಆಶ್ರಯ ಪಡೆಯಲು ತಡೆಗೋಡೆಗೆ ಹಾಕಿದ್ದ ಟಾರ್ಪಾಲ್ ಕೆಳಗೆ ಹಲವರು ನಿಂತಿದ್ದರು. ಈ ವೇಳೆ ರಭಸದಿಂದ ಮಳೆ ಸುರಿಯಲು ಆರಂಭಿಸುತ್ತಿದ್ದಂತೆ ಅಷ್ಟೇನು ಭದ್ರವಿಲ್ಲದ ತಡೆಗೋಡೆ ಕುಸಿದುಬಿತ್ತು. ಕೆಳಗೆ ಟಾರ್ಪಾಲ್‌ನಡಿ ನಿಂತಿದ್ದವರು ಅವಶೇಷಗಳಡಿ ಸಿಕ್ಕಿಬಿದ್ದರು, ಉಸಿರಾಡಲು ಸಾಧ್ಯವಾಗದೆ ಎಲ್ಲರೂ ಸ್ಥಳದಲ್ಲೇ ಮೃತಪಟ್ಟರು. ಘಟನೆ ವೇಳೆ ಕೆಲವರನ್ನು ಹೊರಗೆಳೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿಜಿಪಿ ಎಂ.ಎ.ಸಲೀಂ ಅಹಮದ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ-ಪೊಲೀಸ್ ಆಯುಕ್ತ ರಮೇಶ್ ಬಾನೊತ್ ಸೇರಿ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳಪರಿಶೀಲನೆ ನಡೆಸಿದರು.

ಭಾರೀ ಮಳೆಗೆ ವಾಹನ ಸವಾರರ ಪರದಾಟ

ಸಂಜೆ 5.05ರಿಂದ 6.35ರವರೆಗೆ ಸುರಿದ ಭೀಕರ ಮಳೆಗೆ ರಸ್ತೆಯಲ್ಲೆಲ್ಲಾ ನೀರು ತುಂಬಿ ವಾಹನ ಸವಾರರು, ಕಾರು ಹಾಗೂ ಆಟೋಗಳು ಮುಂದೆ ಹೋಗಲು ಸಾಧ್ಯವಾಗದೆ ನಿಂತಲ್ಲೇ ನಿಲ್ಲಬೇಕಾಯಿತು. ವಾಹನಗಳಲ್ಲಿದ್ದವರು ಕೆಳಗೆ ಇಳಿಯಲೂ ಆಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಧಾರಾಕಾರ ಮಳೆಯಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯ ಜೈಲುವಾರ್ಡ್ ಗೆ ನೀರು ನುಗ್ಗಿ ಅಲ್ಲಿ ರೋಗಿಗಳು ಪರದಾಡುವಂತಾಗಿತ್ತು. ಭಾರೀ ಮಳೆಗೆ 170ಕ್ಕೂ ಹೆಚ್ಚು ಮರಗಳು ಮುರಿದು ಬಿದ್ದಿವೆ.

ಏನಾಯ್ತು?

ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಆಲಿಕಲ್ಲುಸಹಿತ ದಿಢೀರ್‌ ಧಾರಾಕಾರ ಮಳೆ. ಆಶ್ರಯ ಪಡೆಯಲು ಟಾರ್ಪಾಲ್‌ ಕೆಳಕ್ಕೆ ಓಡಿದ ಜನ. ಆ ವೇಳೆ ಗೋಡೆ ಕುಸಿದು 7 ಬಲಿ

ಎಲ್ಲಿ?

ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಪಕ್ಕ

ಯಾವಾಗ?

ನಿನ್ನೆ ಸಂಜೆ

₹5 ಲಕ್ಷ ಪರಿಹಾರ

ಘೋಷಿಸಿದ ಸಿಎಂ

ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಿಂದ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದರು. ಅಲ್ಲದೆ, ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದರು.

ಶಾಪಿಂಗ್‌ಗೆ ಬಂದಿದ್ದ

ಕೇರಳ ಸ್ತ್ರೀಯರು ಬಲಿ

ಕೇರಳದ ಎರ್ನಾಕುಲಂ ನಿವಾಸಿಗಳಾದ ಲತಾ (57) ಹಾಗೂ ಸ್ಮಿತಾ (47) ಶಿವಾಜಿನಗರಕ್ಕೆ ಬಟ್ಟೆ ಖರೀದಿಸಲು ಶಿವಾಜಿನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ದಿಢೀರ್‌ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದಾಗ ಬೌರಿಂಗ್ ಆಸ್ಪತ್ರೆ ನಿರ್ಮಾಣ ಹಂತದಲ್ಲಿದ್ದ ಕಾಂಪೌಂಡ್‌ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಿಡಿಗೇಡಿತನಕ್ಕೆ ಕ್ಷಮೆ ಇಲ್ಲ: ಹೈಕೋರ್ಟ್‌ ಕಿಡಿ
112 ಎಐ ಬಹುಭಾಷ ಆಯ್ಕೆ ವ್ಯವಸ್ಥೆಗೆ ಡಾ.ಜಿ.ಪರಮೇಶ್ವರ್‌ ಚಾಲನೆ