;Resize=(412,232))
ಬೆಂಗಳೂರು : ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ‘ಕುಕ್ಕರ್ ಬಾಂಬ್ ಸ್ಫೋಟ’ (ಐಇಡಿ) ಪ್ರಕರಣದ ಅಪರಾಧಿ ಮೊಹಮ್ಮದ್ ಶಾರೀಕ್‌ಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 92 ಸಾವಿರ ರು. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಪುರಸ್ಕರಿಸಿ ಆತನನ್ನು ದೋಷಿ ಎಂದು ಪರಿಗಣಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯವು, ಸೋಮವಾರ ಆತನಿಗೆ ಐಪಿಸಿ ಸೆಕ್ಷನ್ 120 ಬಿ, 121 ಎ, 122, 307, 326, 465, 471, ಯುಎಪಿಎ ಕಾಯ್ದೆಯ ಸೆಕ್ಷನ್ 6(ಬಿ), 17, 18, 20, 38, 39, 40 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3(ಎ), 5(ಎ) ಅಡಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಈಗಾಗಲೇ ಕಳೆದ ಮೂರೂವರೆ ವರ್ಷದಿಂದ ಜೈಲಿನಲ್ಲೇ ಇರುವ ಶಾರೀಕ್, ಬಾಕಿ ಆರೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕು.
ಪ್ರಕರಣದ ತನಿಖೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಯಾಸೀನ್ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಮತ್ತು 170 ಮಂದಿ ಸಾಕ್ಷಿಗಳ ಹೇಳಿಕೆ ಉಲ್ಲೇಖಿಸಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಶಾರೀಕ್ ತಪ್ಪೊಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ. ಈ ಪ್ರಕರಣದ ಎರಡನೇ ಆರೋಪಿ ಸೈಯದ್ ಯಾಸೀನ್ ವಿರುದ್ಧದ ಆರೋಪಗಳ ಸಂಬಂಧ ತನಿಖೆ ಮುಂದುವರೆಯಲಿದೆ.
ಮಂಗಳೂರಿನ ಕಂಕನಾಡಿ ಬಳಿ 2022ರ ನ.19ರಂದು ಸಂಜೆ ಸುಮಾರು 4.40ಕ್ಕೆ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟ ಸಂಭವಿಸಿತ್ತು. ಈ ವೇಳೆ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಪ್ರಯಾಣಿಕ ಮೊಹಮ್ಮದ್ ಶಾರೀಕ್ ಗಂಭೀರವಾಗಿ ಗಾಯಗೊಂಡಿದ್ದರು. ಕಂಕನಾಡಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ ಪರಿಶೀಲಿಸಿದಾಗ ಆಟೋರಿಕ್ಷಾದೊಳಗೆ ಸ್ಫೋಟಗೊಂಡಿದ್ದ ಪ್ರೆಷರ್ ಕುಕ್ಕರ್, ಡಿಟೋನೇಟರ್, ಸರ್ಕಿಟ್ ಸೇರಿದಂತೆ ಕೆಲ ವಸ್ತುಗಳು ಪತ್ತೆಯಾಗಿದ್ದವು. ಈ ಸ್ಫೋಟ ಕೃತ್ಯದ ಹಿಂದೆ ಉಗ್ರ ಸಂಘಟನೆ ಕೈವಾಡದ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರೀಕ್ ಐಸಿಸ್ ಮತ್ತು ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ. ಪ್ರೇಮ್‌ರಾಜ್ ಹುಟಗಿ ಅಲಿಯಾಸ್ ಪ್ರೇಮರಾಜ್, ಗೌಲಿ ಅರುಣ್ ಕುಮಾರ್ ಎಂಬ ಹೆಸರಿನಲ್ಲಿ ರಾಜ್ಯದ ಧರ್ಮಸ್ಥಳ, ಕದ್ರಿ ಮಂಜುನಾಥ ದೇವಾಲಯ, ತಮಿಳುನಾಡಿನ ವೇಲೂರಿನ ದೇವಾಲಯ, ಕನ್ಯಾಕುಮಾರಿ ಸೇರಿ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದು ಈತನ ಸಂಚಿನ ಭಾಗವಾಗಿತ್ತು. ಈ ಸ್ಥಳಗಳಿಗೆ ಭೇಟಿ ಕೂಡ ಮಾಡಿದ್ದ ಎಂಬುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಆನ್‌ಲೈನ್ ವಿಡಿಯೋ ನೋಡಿಕೊಂಡು ಸುಧಾರಿತ ಬಾಂಬ್ ತಯಾರಿಸುವುದನ್ನು ಕಲಿತಿದ್ದ ಶಾರೀಕ್, ಮಂಗಳೂರು ಸಮೀಪದ ಕದ್ರಿ ಮಂಜುನಾಥಸ್ವಾಮಿ ದೇವಾಲಯದ ಬಳಿ ಕುಕ್ಕರ್ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ. ಅದರಂತೆ ಕುಕ್ಕರ್ ಬಾಂಬ್ ತಯಾರಿಸಿಕೊಂಡು 2022ರ ನ.19ರಂದು ಸಂಜೆ ಪುರುಷೋತ್ತಮ ಪೂಜಾರಿ ಅವರ ಆಟೋರಿಕ್ಷಾದಲ್ಲಿ ಕದ್ರಿ ಮಂಜುನಾಥನ ದೇವಸ್ಥಾನದತ್ತ ಹೊರಟಿದ್ದ. ಮಾರ್ಗ ಮಧ್ಯೆ ಕಂಕನಾಡಿ ಬಳಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಶಾರೀಕ್ ಆ ಕುಕ್ಕರ್ ಬಾಂಬ್ ಸ್ಫೋಟಗೊಳ್ಳಲು 90 ನಿಮಿಷ ನಿಗದಿಪಡಿಸುವ ಬದಲು 9 ನಿಮಿಷ ನಿಗದಿಗೊಳಿಸಿದ್ದ. ಹೀಗಾಗಿ ಮಾರ್ಗ ಮಧ್ಯೆಯೇ ಆ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿತ್ತು.
ಶಿವಮೊಗ್ಗ ಐಸಿಸ್ ಮಾಡ್ಯೂಲ್:
ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಾರೀಕ್ ವಿಚಾರಣೆ ವೇಳೆ ಶಿವಮೊಗ್ಗ ಐಸಿಸ್ ಮಾಡ್ಯೂಲ್ ಸೇರಿದಂತೆ ಕೆಲ ಸ್ಫೋಟ ವಿಚಾರಗಳೂ ಬೆಳಕಿಗೆ ಬಂದಿದ್ದವು.
2020ರಲ್ಲಿ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಈ ಮೊಹಮ್ಮದ್ ಶಾರೀಕ್‌ನನ್ನು ಬಂಧಿಸಲಾಗಿತ್ತು. ಸುಮಾರು 10 ತಿಂಗಳು ಜೈಲಿನಲ್ಲಿದ್ದ ಈತ ಬಿಡುಗಡೆ ಬಳಿಕ ಸುಮಾರು 12 ಮಂದಿಯ ತಂಡವನ್ನು ಕಟ್ಟಿದ್ದ. 2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಬಾಂಬ್ ಸ್ಫೋಟ ನಡೆಸಿದ್ದ ವಿಚಾರವೂ ಬೆಳಕಿಗೆ ಬಂದಿತ್ತು. 2024ರ ಮಾ.1ರಂದು ಬೆಂಗಳೂರಿನ ಬ್ರೂಕ್‌ಫೀಲ್ಡ್‌ನ ರಾಮೇಶ್ವರ ಕೆಫೆ ಸ್ಫೋಟದ ರೂವಾರಿಗಳು ಈ ಮೊಹಮ್ಮದ್ ಶಾರೀಕ್‌ನ ಸಹಚರರು ಎಂಬುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಸ್ಫೋಟಕ್ಕೆ ಪಶ್ಚಾತ್ತಾಪ
ಪ್ರಕರಣದ ವಿಚಾರಣೆ ಹಂತದಲ್ಲೇ ತಪ್ಪೊಪ್ಪಿಕೊಂಡಿದ್ದ ಮೊಹಮ್ಮದ್ ಶಾರೀಕ್, ಕುಕ್ಕರ್ ಬಾಂಬ್ ಸ್ಫೋಟಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದ. ನಮ್ಮದು ಬಡ ಕುಟುಂಬ. ಮನೆಯಲ್ಲಿ ಚಿಕ್ಕ ವಯಸ್ಸಿನ ತಂಗಿ ಇದ್ದಾಳೆ. ಕುಟುಂಬ ನಿರ್ವಹಣೆ ಜವಾಬ್ದಾರಿ ನಾನೇ ನಿರ್ವಹಿಸಬೇಕು. ಹೀಗಾಗಿ ನನಗೆ ಕಡಿಮೆ ಶಿಕ್ಷೆ ಕೊಡಿ ಎಂದು ತಪ್ಪೊಪ್ಪಿಗೆ ಅರ್ಜಿಯಲ್ಲಿ ಮನವಿ ಮಾಡಿದ್ದ. ಈ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಈಗಾಗಲೇ ಕಳೆದ ಮೂರೂವರೆ ವರ್ಷದಿಂದ ಜೈಲಿನಲ್ಲೇ ಇರುವ ಶಾರೀಕ್, ಬಾಕಿ ಆರೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕು.
ಶಿಕ್ಷೆ ಹೆಚ್ಚಳಕ್ಕೆ ಮೇಲ್ಮನವಿ:
ಪ್ರಕರಣದ ವಿಚಾರಣೆ ವೇಳೆ ಎನ್ಐಎ ಪರ ಪ್ರಬಲವಾದ ಮಂಡಿಸಿದ್ದ ಸರ್ಕಾರಿ ವಿಶೇಷ ಅಭಿಯೋಜಕ ಪಿ.ಪ್ರಸನ್ನಕುಮಾರ್ ಅವರು ಅಪರಾಧಿಗೆ ಜೀವಾವಧಿ ಅಥವಾ ಕನಿಷ್ಠ 25 ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ದರು. ಆದರೆ, ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ಹೆಚ್ಚಿನ ಶಿಕ್ಷೆ ವಿಧಿಸುವಂತೆ ಎನ್‌ಐಎ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಬಾಂಬ್ ಇಡುವಾಗ ನೆನಪಾಗದ ತಂದೆ-ತಾಯಿ ಈಗ ನೆನಪು!
ಎನ್‌ಐಎ ವಿಶೇಷ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ಬಳಿಕ ದೋಷಿ ಮೊಹಮ್ಮದ್ ಶಾರೀಕ್ ಭಾವುಕನಾಗಿ ಕಣ್ಣೀರಿಟ್ಟ ಪ್ರಸಂಗ ಜರುಗಿತು. ‘ನನ್ನ ಕುಟುಂಬ ಶಿವಮೊಗ್ಗದಲ್ಲಿದೆ. ತಂದೆ-ತಾಯಿಗೆ ವಯಸ್ಸಾಗಿದೆ. ಅವರು ನನ್ನನ್ನು ನೋಡಲು ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಬರಲು ಕಷ್ಟವಾಗುತ್ತಿದೆ. ಹೀಗಾಗಿ ನನ್ನನ್ನು ಶಿವಮೊಗ್ಗ ಜೈಲಿಗೆ ವರ್ಗಾವಣೆ ಮಾಡಿ’ ಎಂದು ಮನವಿ ಮಾಡಿದ. ಆದರೆ, ನ್ಯಾಯಾಧೀಶರು ಈ ಮನವಿ ತಿರಸ್ಕರಿಸಿದರು.