ಬಿಬಿಎಂಪಿಯ 19 ಪದವಿ ಪೂರ್ವ ಕಾಲೇಜಿನ 2,345 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಈ ಪೈಕಿ 1,645 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ.70.15 ರಷ್ಟು ಫಲಿತಾಂಶ ಬಂದಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬೆಂಗಳೂರು : ಬಿಬಿಎಂಪಿಯ 19 ಪದವಿ ಪೂರ್ವ ಕಾಲೇಜಿನ 2,345 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಈ ಪೈಕಿ 1,645 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ.70.15 ರಷ್ಟು ಫಲಿತಾಂಶ ಬಂದಿದೆ ಎಂದು ಬಿಬಿಎಂಪಿ ತಿಳಿಸಿದೆ.
ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ 160 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚಿನ ಅಂಕ ಗಳಿಸುವುದರೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ. 19 ಕಾಲೇಜುಗಳ ಪೈಕಿ ಭೈರವೇಶ್ವರ ನಗರದ ಬಿಬಿಎಂಪಿಯ ಪದವಿ ಪೂರ್ವ ಕಾಲೇಜು ಶೇ.93.29 ರಷ್ಟು ಫಲಿತಾಂಶ ಗಳಿಸುವ ಮೂಲಕ ಪ್ರಥಮ ಸ್ಥಾನದಲ್ಲಿದೆ.
ಕಾವೇರಿ ನಗರದ ಕಾಲೇಜು ಶೇ.88.66 ರಷ್ಟು ಫಲಿತಾಂಶ ಪಡೆಯುವ ಮೂಲಕ 2ನೇ ಸ್ಥಾನದಲ್ಲಿ, ಪಾದರಾಯನಪುರದ ಕಾಲೇಜು ಶೇ.87.36 ರಷ್ಟು ಫಲಿತಾಂಶ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದಿದೆ.
ಇನ್ನು ಉತ್ತರಹಳ್ಳಿಯ ಬಿಬಿಎಂಪಿ ಪಿಯು ಕಾಲೇಜಿನ ಪಿ.ಪ್ರತೀಕ್ 585 (ಶೇ.97.50) ಅಂಕ ಪಡೆದಿದ್ದಾರೆ. ಕಸ್ತೂರಿ ಬಾ ರಸ್ತೆಯ ಡಿ.ಲಿಖಿತ 584 (ಶೇ.97.33) ಅಂಕ ಪಡೆದಿದ್ದಾರೆ. ಪಾದರಾಯನಪುರದ ಪಿಯು ಕಾಲೇಜಿನ ಹಾಧಿಯಾ ತನ್ವೀಮ್ 580 (ಶೇ.96.66) ಅಂಕ ಪಡೆದಿದ್ದಾರೆ.
ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದ ಎಲ್ಲಾ 160 ವಿದ್ಯಾರ್ಥಿಗಳಿಗೆ ಬಿಬಿಎಂಪಿಯಿಂದ ತಲಾ 35 ಸಾವಿರ ರು. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.