ಸಿಎಂ ಸಿದ್ದು ತಾಕೀತು ಬಳಿಕ ಗಣತಿಗೆ ವೇಗ- ಒಂದೇ ದಿನ 8.18 ಲಕ್ಷ ಮನೆ ಗಣತಿ

Published : Sep 28, 2025, 06:05 AM IST
 CM Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ದಿನ ಶೇ.10ರಷ್ಟು ಮನೆಗಳ ಸಮೀಕ್ಷೆಯ ಗುರಿ ನೀಡಿದ ಬೆನ್ನಲ್ಲೇ ಆಮೆಗತಿಯಲ್ಲಿ ಸಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ಕಾರ್ಯ ಶನಿವಾರ ವೇಗ ಪಡೆದಿದೆ. ಆದರೆ, ಮುಖ್ಯಮಂತ್ರಿ ನಿಗದಿಪಡಿಸಿದ ಗುರಿ ಮುಟ್ಟಲು ಸಾಧ್ಯವಾಗಿಲ್ಲ.

  ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ದಿನ ಶೇ.10ರಷ್ಟು ಮನೆಗಳ ಸಮೀಕ್ಷೆಯ ಗುರಿ ನೀಡಿದ ಬೆನ್ನಲ್ಲೇ ಆಮೆಗತಿಯಲ್ಲಿ ಸಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ಕಾರ್ಯ ಶನಿವಾರ ವೇಗ ಪಡೆದಿದೆ. ಆದರೆ, ಮುಖ್ಯಮಂತ್ರಿ ನಿಗದಿಪಡಿಸಿದ ಗುರಿ ಮುಟ್ಟಲು ಸಾಧ್ಯವಾಗಿಲ್ಲ.

ಶುಕ್ರವಾರದವರೆಗೆ ಒಟ್ಟು 4.36 ಲಕ್ಷ ಮನೆಗಳ ಸಮೀಕ್ಷೆ ಮಾತ್ರ ನಡೆದಿತ್ತು. ಮುಖ್ಯಮಂತ್ರಿಯವರ ಸೂಚನೆ ಬಳಿಕ ಶನಿವಾರ ಒಂದೇ ದಿನ ಸುಮಾರು 8.18 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಇದರೊಂದಿಗೆ ಸೆ.22ರಿಂದ 27ರವರೆಗೆ ಆರು ದಿನಗಳಲ್ಲಿ ಒಟ್ಟು 12.87 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಮುಗಿದಿದೆ.

ಮುಖ್ಯಮಂತ್ರಿ ಅವರು ನೀಡಿದ್ದ ಗುರಿ ಪ್ರಕಾರ ನಿತ್ಯ ಸುಮಾರು 12 ಲಕ್ಷ ಮನೆಗಳ ಸಮೀಕ್ಷೆ ನಡೆಸಬೇಕಿದೆ. ಶನಿವಾರ ನಡೆದಿದ್ದು 8.18 ಲಕ್ಷ ಮನೆಗಳ ಸಮೀಕ್ಷೆ ಮಾತ್ರ. ಇಷ್ಟು ವೇಗದಲ್ಲಿ ಸಮೀಕ್ಷೆ ನಡೆದರೂ ನಿಗದಿಯಂತೆ ಅ.7ರೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳುವುದು ಅನುಮಾನ.

ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಸಮೀಕ್ಷೆ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 1,43,77,978 ಮನೆಗಳನ್ನು ಸಮೀಕ್ಷಾ ಕಾರ್ಯಕ್ಕೆ ಗುರುತಿಸಿ ಜಿಯೋ ಟ್ಯಾಗ್‌ ನೀಡಲಾಗಿದೆ. ಸಮೀಕ್ಷೆಗೆ 1,18,705 ಶಿಕ್ಷಕರನ್ನು ನಿಯೋಜಿಸಲಾಗಿದೆ. ಪ್ರತಿ ಶಿಕ್ಷಕರಿಗೆ ತಲಾ 120ರಿಂದ 150 ಮನೆಗಳನ್ನು ಸಮೀಕ್ಷೆಗೆ ಹಂಚಿಕೆ ಮಾಡಲಾಗಿದೆ. ತನ್ಮೂಲಕ ನಿತ್ಯ 11.85 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆಸುವ ಗುರಿ ಹೊಂದಲಾಗಿದೆ. ಆ ಪ್ರಕಾರ, ಸಮೀಕ್ಷೆ ಆರಂಭವಾದ ಸೆ.22ರಿಂದ 26ರವರೆಗೆ 55 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಪೂರ್ಣಗೊಳ್ಳಬೇಕಿತ್ತು. ಆದರೆ, ಆಗಿದ್ದು ಕೇವಲ 4.36 ಲಕ್ಷ ಮನೆಗಳ ಸಮೀಕ್ಷೆ. ಇದರಿಂದ ಸಿಟ್ಟಾದ ಮುಖ್ಯಮಂತ್ರಿ ಅವರು, ಶನಿವಾರ ಅಧಿಕಾರಿಗಳ ಸಭೆ ನಡೆಸಿ ಯಾವುದೇ ಕಾರಣಕ್ಕೂ ಸಮೀಕ್ಷೆ ಅವಧಿ ವಿಸ್ತರಣೆ ಮಾಡುವುದಿಲ್ಲ. ನಿಗದಿಯಂತೆ ಅ.7ರೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು. ಇದಕ್ಕಾಗಿ ಶನಿವಾರದಿಂದ ಸಮೀಕ್ಷೆಗೆ ಬಾಕಿ ಇರುವ ಒಟ್ಟಾರೆ ಮನೆಗಳ ಪೈಕಿ ಪ್ರತಿ ದಿನ ಶೇ.10ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಗುರಿ ನೀಡಿದ್ದರು.

ಕೋರ್ಟ್‌ ಹೇಳಿದಂತೆ

ಸಮೀಕ್ಷೆ ಮಾಡುತ್ತೇವೆ

ಸಮೀಕ್ಷೆ ತಡೆಯಲು ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ, ನ್ಯಾಯಾಲಯ ತಡೆ ನೀಡಿಲ್ಲ. ಈ ಕುರಿತು ನ್ಯಾಯಾಲಯ ನೀಡಿರುವ ನಿರ್ದೇಶನಗಳಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗುವುದು.

ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Read more Articles on

Recommended Stories

ಬೆಂಗಳೂರು : ಕನ್ನಡ ಮಾತಾಡಿದ್ದಕ್ಕೆ ಎಸ್‌ಐಗೆ ಅವಾಜ್‌!
ಲಿಂಗಾಯತ, ವೀರಶೈವ ಬೇರೆ ಬೇರೆ, ಆಚರಣೆ ಭಿನ್ನ : ಎಂಬಿಪಾ