ಮದುವೆಯಾಗಿ ವರದಕ್ಷಿಣೆ ಕೇಸ್‌ ದಾಖಲಿಸುವ ಗ್ಯಾಂಗ್‌! - ಮತ್ತೊಂದು ಪ್ರಕರಣಕ್ಕೆ ಸಾಕ್ಷಿಯಾದ ಹೈಕೋರ್ಟ್‌

Published : Sep 30, 2024, 11:16 AM ISTUpdated : Sep 30, 2024, 11:17 AM IST
Karnataka highcourt

ಸಾರಾಂಶ

ಮಹಿಳೆಯೊಬ್ಬರು ಹಲವು ಪುರುಷರನ್ನು ಮದುವೆಯಾಗಿ, ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕ್ರೌರ್ಯ ಅಪರಾಧಗಳ ಸಂಬಂಧ ದೂರು ನೀಡಿ ಕಿರುಕುಳ ನೀಡುವಂತಹ ಮತ್ತೊಂದು ಪ್ರಕರಣಕ್ಕೆ ಹೈಕೋರ್ಟ್‌ ಸಾಕ್ಷಿಯಾಗಿದೆ.

ವೆಂಕಟೇಶ್‌ ಕಲಿಪಿ

  ಬೆಂಗಳೂರು : ಮಹಿಳೆಯೊಬ್ಬರು ಹಲವು ಪುರುಷರನ್ನು ಮದುವೆಯಾಗಿ, ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕ್ರೌರ್ಯ ಅಪರಾಧಗಳ ಸಂಬಂಧ ದೂರು ನೀಡಿ ಕಿರುಕುಳ ನೀಡುವಂತಹ ಮತ್ತೊಂದು ಪ್ರಕರಣಕ್ಕೆ ಹೈಕೋರ್ಟ್‌ ಸಾಕ್ಷಿಯಾಗಿದೆ.

ಮಹಿಳೆಯೊಬ್ಬಳು 7 ಪುರುಷರನ್ನು, ಇನ್ನೊಬ್ಬ ಮಹಿಳೆ ಬರೋಬ್ಬರಿ 10 ಪುರುಷರನ್ನು ಮದುವೆಯಾಗಿ ವಂಚಿಸಿದ್ದಲ್ಲದೆ, ಅವರ ಹಾಗೂ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಅಲೆದಾಡಿಸಿದ ಘಟನೆಗಳು ಇತ್ತೀಚೆಗೆ ಹೈಕೋರ್ಟ್‌ ಮುಂದೆ ಬಂದು ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದವು. ಅಂಥದ್ದೇ ಮತ್ತೊಂದು ಪ್ರಕರಣ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ಸದ್ದು ಮಾಡಿದೆ.

ಈ ಪ್ರಕರಣದಲ್ಲಿ ಮಹಿಳೆಯೊಬ್ಬರು ಮೂರು ಮದುವೆಯಾಗಿದ್ದಾರೆ. ಆ ಮಹಿಳೆಯು 9 ಜನರ ಗುಂಪು ರಚಿಸಿಕೊಂಡಿದ್ದಾರೆ. ಉಳಿದ ಎಂಟು ಜನರನ್ನು ತನ್ನ ಸಂಬಂಧಿಕರೆಂದು ಹೇಳಿಕೊಂಡು ಮದುವೆಗೆ ವರನನ್ನು ನೋಡಿ, ಮದುವೆಯಾಗುತ್ತಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ತವರು ಮನೆಗೆ ಹೋಗುತ್ತಾರೆ. ಮನೆಗೆ ಬರುವಂತೆ ಒತ್ತಾಯಿಸಿದರೆ, ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರಕುಳ, ಕ್ರೌರ್ಯ, ಕೌಟುಂಬಿಕ ದೌರ್ಜನ್ಯ ಕೇಸ್‌ ದಾಖಲಿಸುತ್ತಾರೆ. ನಂತರ ಪ್ರಕರಣ ಹಿಂಪಡೆಯಲು ಪರಿಹಾರ ಕೋರುತ್ತಾರೆ.

ಇಂತಹ ಮಹಿಳೆಯಿಂದ ನೊಂದ ಆಕೆಯ ಪತಿ ಹೈಕೋರ್ಟ್‌ ಮೊರೆ ಹೋಗಿದ್ದರು. ಆತನ ಅಳಲು ಆಲಿಸಿದ ಹೈಕೋರ್ಟ್‌, ಮಹಿಳೆ ಕಾನೂನನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ಜೊತೆಗೆ, ಮೂರನೇ ಪತಿ ಮತ್ತವರ ತಂದೆ-ತಾಯಿ ವಿರುದ್ಧದ ಮಹಿಳೆ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ಕುರಿತ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದೆ.

 ಪ್ರಕರಣವೇನು?: 

ಅಶೋಕ್‌ ಎಂಬಾತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತಾನು ಮತ್ತು ಮಂಜುಳಾ 2022ರ ಮೇ 5ರಂದು ಮದುವೆಯಾಗಿದ್ದೆವು. ಮದುವೆಯಾದ ಕೆಲವೇ ದಿನಗಳಲ್ಲಿ ತವರು ಮನೆಗೆ ಹೋದ ಪತ್ನಿ, ವ್ಯಾಸಂಗದ ಮೇಲೆ ಗಮನಕೊಡಬೇಕಿದೆ ಎಂದೇಳಿ ನನ್ನ ಮನೆಗೆ ಹಿಂದಿರುಗಲಿಲ್ಲ. ಇದರಿಂದ ಅನುಮಾನಗೊಂಡು ಪತ್ನಿಯ ಪೂರ್ವಾಪರ ವಿಚಾರಿಸಿದೆ. ನನ್ನ ಮದುವೆಯಾಗುವ ಮುನ್ನೇ ಮಂಜುಳಾ 2018ರ ಏಪ್ರಿಲ್‌ನಲ್ಲಿ ಇಬ್ಬರು ವ್ಯಕ್ತಿಗಳನ್ನು ಮದುವೆಯಾಗಿರುವುದು ತಿಳಿಯಿತು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಹಾಗೂ ನನ್ನ ಪೋಷಕರ ವಿರುದ್ಧ ವರದಕ್ಷಿಣೆ ಕಿರುಕುಳ, ಕ್ರೌರ್ಯ ಆರೋಪದಡಿ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ನಮ್ಮ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳು, ಏನ್ರಿ ಇದು ನಾಲ್ಕು ಗಂಡಂದಿರು ಎಂದು ನಗುತ್ತಾ ಅರ್ಜಿದಾರರ ಪರ ವಕೀಲ ಎನ್‌. ಅರವಿಂದ್‌ ಅವರನ್ನು ಕೇಳಿದರು.

ವಕೀಲ ಅರವಿಂದ್‌ ಉತ್ತರಿಸಿ, ಸ್ವಾಮಿ, ದೂರುದಾರೆ ಮಂಜುಳಾಗೆ ಅರ್ಜಿದಾರ\B \Bಅಶೋಕ್‌ 3ನೇ ಗಂಡ. ಆತನನ್ನು ಮದುವೆಯಾಗುವುದಕ್ಕೂ ಮುನ್ನವೇ ಇತರೆ ಇಬ್ಬರನ್ನು ಮಂಜುಳಾ ಮದುವೆಯಾಗಿ ವಂಚಿಸಿದ್ದಾರೆ. ದೂರುದಾರೆಯದು 9 ಜನರ ಗ್ಯಾಂಗ್‌ ಇದೆ. ಗ್ಯಾಂಗಿನಲ್ಲಿನ ಯಾರೂ ಸಹ ದೂರುದಾರೆಯ ಪೋಷಕರು/ಸಂಬಂಧಿಕರಲ್ಲ. ವ್ಯಕ್ತಿಯೋರ್ವನನ್ನು ಹುಡುಕುವುದು, ಮದುವೆಯಾಗಿ ವಂಚಿಸುವುದೇ ಗ್ಯಾಂಗಿನ ಕೆಲಸ ಎಂದರು.

ಅದಕ್ಕೆ ನ್ಯಾಯಮೂರ್ತಿಗಳು ಅಚ್ಚರಿಯಿಂದ, ‘ಗ್ಯಾಂಗೇ, ಅವರೆಲ್ಲರೂ ಐಪಿಸಿ ಸೆಕ್ಷನ್‌ 498 (ಪತಿ ಮತ್ತವರ ಸಂಬಂಧಿಕರ ವಿರುದ್ಧ ಕ್ರೌರ್ಯ ಪ್ರಕರಣ ದಾಖಲಿಸುವ) ಗ್ಯಾಂಗೇ’ ಎಂದು ಪ್ರಶ್ನಿಸಿದರು.

ಅರ್ಜಿದಾರರ ವಕೀಲರು, ಹೌದು ಸ್ವಾಮಿ.. ಹಿಂದೆಯೂ ಈ ಗ್ಯಾಂಗ್‌ ಪ್ರಕರಣ ದಾಖಲಿಸಿ ಪರಿಹಾರ ಪಡೆದಿದ್ದಾರೆ. ಮಂಜುಳಾ ದೂರು ದಾಖಲಿಸಿದಾಗ ಪೊಲೀಸರು ನನ್ನನ್ನು ಠಾಣೆಗೆ ಕರೆದರು. ನಾನೂ ಎಲ್ಲಾ ವಾಸ್ತವಾಂಶ ವಿವರಿಸಿದಾಗ ಬಿ ರಿಪೋರ್ಟ್‌ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದರು. ಎಸ್ಪಿಯೇ ಠಾಣೆಗೆ ಕರೆಯಿಸಿ ವಿಚಾರಿಸಿದರು. ನಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದರು.

ಬಿ ರಿಪೋರ್ಟ್‌ ಹಾಕುವುದಾಗಿ ಹೇಳಿದ ಪೊಲೀಸರು ಏಕೆ ದೋಷಾರೋಪ ಪಟ್ಟಿ ಸಲ್ಲಿಸಿದರು ಎಂದು ಸರ್ಕಾರಿ ಅಭಿಯೋಜಕರನ್ನು ಕೇಳಿದ ನ್ಯಾಯಮೂರ್ತಿಗಳು, ದೂರುದಾರೆಯ ನಡೆ ಕಾನೂನಿನ ಸಂಪೂರ್ಣ ದುರ್ಬಳಕೆ ಎಂದು ಅಭಿಪ್ರಾಯಪಟ್ಟರು.

ಅರ್ಜಿದಾರರ ವಕೀಲರು ಮುಂದುವರಿದು, ಮಂಜುಳಾ ವಿರುದ್ಧ ಪೊಲೀಸರು ಏನೂ ಕ್ರಮ ಜರುಗಿಸದಕ್ಕೆ ಅಶೋಕ್‌ ಖುದ್ದು ತನಿಖೆ ನಡೆಸಿದ್ದಾರೆ. ಪತ್ನಿ ಬಗ್ಗೆ ದಾಖಲೆ ಸಂಗ್ರಹಿಸಿ ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಕೋರ್ಟ್‌ ಸೂಚನೆ ಮೇರೆಗೆ ಮಂಜುಳಾ ಆ್ಯಂಡ್‌ ಗ್ಯಾಂಗ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ವಿವರಿಸಿದರು. ಅದನ್ನು ಪರಿಗಣಿಸಿದ ಹೈಕೋರ್ಟ್‌, ಅರ್ಜಿದಾರರ ವಿರುದ್ಧ ಮಂಜುಳಾ ದಾಖಲಿಸಿದ್ದ ದೂರಿಗೆ ತಡೆಯಾಜ್ಞೆ ನೀಡಿತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ