ಬೈಕ್‌ ಮೇಲೆ ಮರದ ಕೊಂಬೆ ಬಿದ್ದು ಯುವಕನ ತಲೆ ಚಿಪ್ಪು 12 ಚೂರು : ಸಾವು-ಬದುಕಿನ ಮಧ್ಯೆ ಹೋರಾಟ

Published : Jun 16, 2025, 05:45 AM IST
Bengaluru rain

ಸಾರಾಂಶ

ಬೈಕ್‌ನಲ್ಲಿ ಚಲಿಸುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬನಶಂಕರಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ಭಾನುವಾರ ನಡೆದಿದೆ.

  ಬೆಂಗಳೂರು :  ಬೈಕ್‌ನಲ್ಲಿ ಚಲಿಸುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬನಶಂಕರಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ಭಾನುವಾರ ನಡೆದಿದೆ.

ಮಧ್ಯಾಹ್ನ 1.15ರ ಸುಮಾರಿಗೆ ಘಟನೆ ನಡೆದಿದ್ದು, ಬೈಕ್‌ ಸವಾರ ಶ್ರೀನಗರದ ನಿವಾಸಿ ಅಕ್ಷಯ್‌ (29) ಗಾಯಗೊಂಡಿದ್ದಾನೆ. ಮರದ ಕೊಂಬೆ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿ ಭಾರೀ ರಕ್ತ ಸ್ರಾವವಾಗಿದ್ದು, ಸ್ಥಳೀಯರು ತಕ್ಷಣ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಅಕ್ಷಯ್‌ ಭಾನುವಾರ ತಂದೆಯ ಜನ್ಮದಿನದ ಹಿನ್ನೆಲೆಯಲ್ಲಿ ಮಟನ್‌ ತೆಗೆದುಕೊಂಡು ಬರುವುದಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸುಮಾರು 4 ಗಂಟೆಗೂ ಅಧಿಕ ಕಾಲ ಗಾಯಗೊಂಡ ಅಕ್ಷಯ್‌ಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ತಲೆ ಚಿಪ್ಪು ಸುಮಾರು 12 ಚೂರುಗಳಾಗಿವೆ. ಅಕ್ಷಯ್‌ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಜೆ ಮಜದಲ್ಲಿ ಬಿಬಿಎಂಪಿ ಅಧಿಕಾರಿಗಳು:

ಮಧ್ಯಾಹ್ನ 1.15ರ ಸುಮಾರಿಗೆ ಘಟನೆ ನಡೆದರೂ ಬಿಬಿಎಂಪಿಯ ಅಧಿಕಾರಿಗಳು ಸಂಜೆವರೆಗೆ ಧಾವಿಸಲಿಲ್ಲ. ಶಸ್ತ್ರ ಚಿಕಿತ್ಸೆಗೆ 2.5 ಲಕ್ಷ ರು. ಪಾವತಿ ಮಾಡುವಂತೆ ಆಸ್ಪತ್ರೆ ತಿಳಿಸಿದ ಹಿನ್ನೆಲೆಯಲ್ಲಿ 1.5 ಲಕ್ಷ ರು. ಪಾವತಿ ಮಾಡಿರುವ ಕುಟುಂಬ ಸದಸ್ಯರು ಬಾಕಿ ಹಣಕ್ಕೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಸಂಜೆಯ ಬಳಿಕ ಬಿಬಿಎಂಪಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಬಿಬಿಎಂಪಿಯಿಂದ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.

ಬಿಬಿಎಂಪಿಯ ಅಧಿಕಾರಿಗಳಿಗೆ ತರಾಟೆ:

ಬಿಬಿಎಂಪಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆ ಅಕ್ಷಯ್‌ ಕುಟುಂಬ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಕ್ಷಯ್‌ ಅಜ್ಜಿ ಸಾವಿತ್ರಮ್ಮ, ಅಕ್ಷಯ್‌ ಸಂಪೂರ್ಣ ಗುಣಮುಖನಾಗುವವರೆಗೆ ಬಿಬಿಎಂಪಿಯ ಅಧಿಕಾರಿಗಳು ಇರಬೇಕು. ತಪ್ಪಿಸಿಕೊಂಡು ಹೋಗುವಂತಿಲ್ಲ ಎಂದು ಆಗ್ರಹಿಸಿದರು.

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿಯ ಉಪ ಅರಣ್ಯಸಂರಕ್ಷಣಾಧಿಕಾರಿ ಬಿಎಲ್‌ಜಿ ಸ್ವಾಮಿ, ತಂದೆಯ ಹುಟ್ಟುಹಬ್ಬ ಆಚರಣೆ ಮಾಡುವುದಕ್ಕೆ ಮಟನ್‌ ತೆಗೆದುಕೊಂಡು ಬರುವುದಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಈ ಅವಘಡ ಉಂಟಾಗಿದೆ. ಭಾನುವಾರ ರಭಸವಾದ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಒಣಗಿದ ಸಣ್ಣ ಕೊಂಬೆ ಬಿದ್ದು ಅನಾಹುತವಾಗಿದೆ. ಚಿಕಿತ್ಸೆಯ ವೆಚ್ಚವನ್ನು ಬಿಬಿಎಂಪಿಯು ಭರಿಸಲಿದೆ ಎಂದು ತಿಳಿಸಿದ್ದಾರೆ.

PREV
Read more Articles on

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ