ಅಪಘಾತ: ಮೃತ ಅವಿವಾಹಿತನ ಒಡಹುಟ್ಟಿದವ್ರಿಗೂ ಪರಿಹಾರ

Published : Oct 03, 2025, 07:51 AM IST
Karnataka Highcourt

ಸಾರಾಂಶ

ಅಪಘಾತದಲ್ಲಿ ಮೃತ ಯುವಕ ಅವಿವಾಹಿತ ಎಂಬ ಕಾರಣಕ್ಕೆ ಆತನ ಕುಟುಂಬ ಸದಸ್ಯರಿಗೆ ಅವಲಂಬನೆಯ ನಷ್ಟ ಪರಿಹಾರ ಕಲ್ಪಿಸದ ಅಧೀನ ನ್ಯಾಯಾಲಯದ ಆದೇಶ ಮಾರ್ಪಡಿಸಿರುವ ಹೈಕೋರ್ಟ್‌, ಕುಟುಂಬದ ಆದಾಯಕ್ಕೆ ಮೃತನೂ ಸಹ ಕೊಡುಗೆ ನೀಡುತ್ತಿದ್ದ ಅಂಶ ಪರಿಗಣಿಸಿ 22.88 ಲಕ್ಷ ರು. ಪರಿಹಾರ ಘೋಷಿಸಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು :  ಅಪಘಾತದಲ್ಲಿ ಮೃತ ಯುವಕ ಅವಿವಾಹಿತ ಎಂಬ ಕಾರಣಕ್ಕೆ ಆತನ ಕುಟುಂಬ ಸದಸ್ಯರಿಗೆ ಅವಲಂಬನೆಯ ನಷ್ಟ ಪರಿಹಾರ ಕಲ್ಪಿಸದ ಅಧೀನ ನ್ಯಾಯಾಲಯದ ಆದೇಶ ಮಾರ್ಪಡಿಸಿರುವ ಹೈಕೋರ್ಟ್‌, ಕುಟುಂಬದ ಆದಾಯಕ್ಕೆ ಮೃತನೂ ಸಹ ಕೊಡುಗೆ ನೀಡುತ್ತಿದ್ದ ಅಂಶ ಪರಿಗಣಿಸಿ 22.88 ಲಕ್ಷ ರು. ಪರಿಹಾರ ಘೋಷಿಸಿದೆ.

ತಂದೆ,ತಾಯಿ ಮಾತ್ರವಲ್ಲದೆ ಆತನ ಸಹೋದರಿಯರು ಮತ್ತು ಸಹೋದರ ಸಹ ಮೃತನ ಅವಲಂಬಿತರಾಗಿರುತ್ತಾರೆ ಎಂದು ಆದೇಶಿಸಿರುವ ಹೈಕೋರ್ಟ್‌, ಪರಿಹಾರ ಮೊತ್ತವನ್ನು ಪ್ರಕರಣದಲ್ಲಿ ಮೃತಪಟ್ಟಿರುವ ಯುವಕನ ಕುಟುಂಬದ ಸದಸ್ಯರು ಸಮಾನವಾಗಿ ಪಡೆಯಲು ಅರ್ಹರಿದ್ದಾರೆ ಎಂದು ಹೇಳಿದೆ. ಆ ಮೂಲಕ ಮೃತನ ಪೋಷಕರೊಂದಿಗೆ ಒಡಹುಟ್ಟಿದವರಿಗೆ ಪರಿಹಾರ ಕಲ್ಪಿಸಿರುವ ಅಪರೂಪದ ಪ್ರಕರಣ ಇದಾಗಿದೆ.

ಬಿ.ಕಾಂ. ಪದವಿ ಪೂರೈಸಿ ಉದ್ಯೋಗ ನಿರ್ವಹಿಸುತ್ತಿದ್ದ ತನ್ನ 24 ವರ್ಷದ ಅವಿವಾಹಿತ ಪುತ್ರ ರೋಷನ್‌ ಅಪಘಾತದಿಂದ ಸಾವಿಗೀಡಾಗಿದ್ದರೂ ಆತನ ಮೇಲೆ ಅಲಂಬಿತರಾಗಿದ್ದ ನಮಗೆ ಮೋಟಾರು ವಾಹನ ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ ಪರಿಹಾರ ಕಲ್ಪಿಸಿಲ್ಲ ಎಂದು ಆಕ್ಷೇಪಿಸಿ ಕಲಬುರಗಿಯ ನಿವಾಸಿ ಕಲ್ಪನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರ ನೇತೃತ್ವದ ವಿಭಾಗೀಯ ಪೀಠ, ಸದ್ಯ ಕಾನೂನು ವಿಕಸನಗೊಂಡಿದೆ. ಸಮಾಜ ರೂಪಾಂತರಗೊಂಡಿದೆ. ಭಾರತೀಯ ಸಮಾಜದಲ್ಲಿ ಕುಟುಂಬ ಸಾಮಾನ್ಯವಾಗಿ ಪೋಷಕರು ಮತ್ತು ಮಕ್ಕಳನ್ನು ಒಳಗೊಂಡಿರುತ್ತದೆ. ಪ್ರಕರಣದಲ್ಲಿ ಪೋಷಕರು, ಸಹೋದರ ಮತ್ತು ಸಹೋದರಿಯೊಂದಿಗೆ ಮೃತ ರೋಷನ್‌ ವಾಸಿಸುತ್ತಿದ್ದ. ಆತ ಅವಿವಾಹಿತನಾಗಿದ್ದ. ಅವಿವಾಹಿತರು ಸಹ ತನ್ನ ಆದಾಯವನ್ನು ಕುಟುಂಬಕ್ಕಾಗಿ ಕೊಡುಗೆ ನೀಡುತ್ತಾರೆ. ಅದನ್ನು ಸಾಮಾಜಿಕ ಅಭಿವೃದ್ಧಿಗಾಗಿ ಕುಟುಂಬದ ಆದಾಯವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

ಅವಿವಾಹಿತನ ಆದಾಯ ಇಡೀ ಕುಟುಂಬದ ಆದಾಯದ ಮೂಲವಾಗಿರುತ್ತದೆ. ಇದು ಸಹೋದರಿಯರು, ಸಹೋದರರು ಹಾಗೂ ಪೋಷಕರನ್ನು ಒಳಗೊಂಡಿರುವ ಕುಟುಂಬಕ್ಕೆ ಪ್ರಯೋಜನಕಾರಿ. ಮೃತರ ಆದಾಯವನ್ನು ವಿವಾಹಿತ ಪುತ್ರರು, ವಿವಾಹಿತ ಹೆಣ್ಣುಮಕ್ಕಳು ಮತ್ತು ಅವಲಂಬಿತ ಅತ್ತೆಯಂದಿರು (ಇವರು ಮೃತನ ಆದಾಯವನ್ನು ಅಲಂಬಿಸಿರದ) ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಹಾಗಾಗಿ, ಪ್ರಕರಣದಲ್ಲಿ ಮೃತನ ಪೋಷಕರು, ಸಹೋದರಿಯರು ಮತ್ತು ಸಹೋದರನೊಂದಿಗೆ ವಾಸವಾಗಿದ್ದರಿಂದ ಅವಲಂಬನೆಯ ನಷ್ಟ ನೀಡಬಹುದಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದಲ್ಲಿ ಮೃತನು ಮಾಸಿಕ 12 ಸಾವಿರ ರು. ದುಡಿಯುತ್ತಿದ್ದ ಎಂದು ಪೋಷಕರು ಹೇಳುತ್ತಾರೆ. ಅದನ್ನು ದೃಢೀಕರಿಸುವ ದಾಖಲೆ ಇಲ್ಲವಾಗಿದೆ. ಆದರೂ ಪರಿಹಾರ ಘೋಷಿಸುವುದು ನ್ಯಾಯಾಲಯದ ಕರ್ತವ್ಯ. ಅದರಂತೆ ಕಾನೂನು ಸೇವೆಗಳ ಪ್ರಾಧಿಕಾರ ಸಿದ್ಧಪಡಿಸಿರುವ ಕಾಲ್ಪನಿಕ ಆದಾಯ ಪಟ್ಟಿಯ ಅನುಸಾರ ಮೃತ ರೋಷನ್‌ ಆದಾಯವನ್ನು ಮಾಸಿಕ 13,750 ರು. ಎಂದು ಪರಿಗಣಿಸಬಹುದು. ಅದಕ್ಕೆ ಮೃತಟ್ಟಾಗ ರೋಷನ್‌ ವಯಸ್ಸು, ಭವಿಷ್ಯದಲ್ಲಿ ದುಡಿಯಬಹುದಾದ ಆದಾಯವೆಲ್ಲವನ್ನೂ ಪರಿಶೀಲಿಸಿದಾಗ ಶೇ.6ರಷ್ಟು ಬಡ್ಡಿದರಲ್ಲಿ 22,88,000 ರು. ಪರಿಹಾರ ನಿಗದಿಪಡಿಸಬಹುದಾಗಿದೆ. ಅದರಂತೆ ರೋಷನ್‌ ತಾಯಿ ಮೃತಪಟ್ಟಿರುವುದರಿಂದ ಆತನ ತಂದೆ, ಇಬ್ಬರು ಸಹೋದರಿಯರು ಮತ್ತು ಸಹೋದರ ಸಮಾನವಾಗಿ ಪರಿಹಾರ ಪಡೆಯಬಹುದು ಎಂದು ಹೈಕೊರ್ಟ್‌ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿವರ:

ಕೆಲಸದ ನಿಮಿತ್ತ 2020ರ ಜ.23ರಂದು ಕಲಬುರಗಿಯಿಂದ ಹುಮ್ನಾಬಾದ್‌ಗೆ ತೆರಳಿ ವಾಪಸಾಗುತ್ತಿದ್ದಾಗ ಮಧ್ಯರಾತ್ರಿ 12.30ರಂದು ಸಂಭವಿಸಿದ ಅಪಘಾತದಲ್ಲಿ ರೋಷನ್‌ ಮೃತಪಟ್ಟಿದ್ದ. ಪರಿಹಾರ ಕೋರಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದ ಮೃತನ ತಾಯಿ, ರೋಷನ್‌ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಬಿ.ಕಾಂ. ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದ. ಮಾಸಿಕ 12,000 ರು. ಸಂಪಾದನೆ ಮಾಡುತ್ತಿದ್ದ ಎಂದು ತಿಳಿಸಿದ್ದರು.

ಮೃತನು ಅವಿವಾಹಿತನಾಗಿದ್ದ ಎಂಬ ಅಂಶ ಪರಿಗಣಿಸಿದ್ದ ನ್ಯಾಯಾಧಿಕರಣ, ಕೇವಲ ಅಂತ್ಯಕ್ರಿಯೆ ಮತ್ತು ಮೃತದೇಹ ಸಾಗಣೆಗೆ ಮಾತ್ರ 77 ಸಾವಿರ ರು. ಪರಿಹಾರ ಕಲ್ಪಿಸಿತ್ತು. ಆದರೆ, ರೋಷನ್‌ ಅಲಂಬಿತರಿಗೆ ಉಂಟಾಗಿರುವ ನಷ್ಟ ಆಧರಿಸಿ ಕುಟುಂಬದ ಸದಸ್ಯರಿಗೆ ಪರಿಹಾರ ಕಲ್ಪಿಸಲು ನಿರಾಕರಿಸಿ 2023ರ ಜು.11ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರೋಷನ್‌ ತಾಯಿ, ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

PREV
Read more Articles on

Recommended Stories

‘ರಾಜ್ಯದ ಗಣತಿ ಹಿಂದುಗಳನ್ನು ಮತಾಂತರಕ್ಕೆ ಪ್ರೋತ್ಸಾಹಿಸುತ್ತೆ’ : ಜೋಶಿ
ಅಂತಾರಾಷ್ಟ್ರೀಯ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ‘ಶಕ್ತಿ’ ಯೋಜನೆ!