ಹೊಸ ವರ್ಷ ಸಂಭ್ರಮ ವೇಳೆ ಅವಘಡ : ಕೆರೆಗೆ ಕಾಲು ಜಾರಿ ಬಿದ್ದು ಇಬ್ಬರು । ರಸ್ತೆ ಅಪಘಾತಕ್ಕೆ 7 ಮಂದಿ ಬಲಿ

ಸಾರಾಂಶ

ಹೊಸ ವರ್ಷಾಚರಣೆಯ ಸಂಭ್ರಮದ ವೇಳೆ ಮಂಗಳವಾರ ರಾತ್ರಿ ಸಂಭವಿಸಿದ ವಿವಿಧ ಅವಘಡಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರು : ಹೊಸ ವರ್ಷಾಚರಣೆಯ ಸಂಭ್ರಮದ ವೇಳೆ ಮಂಗಳವಾರ ರಾತ್ರಿ ಸಂಭವಿಸಿದ ವಿವಿಧ ಅವಘಡಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. 8 ಮಂದಿ ಗಾಯಗೊಂಡಿದ್ದಾರೆ. ಹಾಸನದಲ್ಲಿ ಕೆರೆಗೆ ಬಿದ್ದು ಇಬ್ಬರು, ಹಂಪಿ, ಕುಣಿಗಲ್‌ , ಮಾಗಡಿ, ಗುಂಡ್ಲುಪೇಟೆ, ದಾವಣಗೆರೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 7 ಮಂದಿ ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಲಸಾವರ ಗ್ರಾಮದಲ್ಲಿ ಲಕ್ಷ್ಮೀಪುರ ಕೆರೆಯ ಏರಿ ಮೇಲೆ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ವೇಳೆ ಜಾರಿ ಬಿದ್ದು ಅಜಿತ್ ( 30 ) ಹಾಗೂ ಅಶೋಕ್ (35) ಎಂಬುವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹಂಪಿಯ ಮಾಲ್ಯವಂತ ರಘುನಾಥ ದೇವಾಲಯದ ಬಳಿ ಆಟೋದಿಂದ ಬಿದ್ದು ಮಧ್ಯಪ್ರದೇಶದ ಪ್ರವಾಸಿಗ ಬಿನೋಬ್‌ ಠಾಕೂರ್‌ (62) ಎಂಬುವರು ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ವಡ್ಡರಕುಪ್ಪೆ ಬಳಿ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆಗಾಗಿ ಬಿರಿಯಾನಿ ತರಲು ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿಯಾಗಿ ಮಣಿಕಪ್ಪೆ ಗ್ರಾಮದ ಮಧು (28) ಎಂಬುವರು ಮೃತಪಟ್ಟಿದ್ದಾರೆ.

ಬುಧವಾರ ನಸುಕಿನ ವೇಳೆ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ತೆರಳುತ್ತಿದ್ದಾಗ ಮಾಗಡಿ ಸಮೀಪದ ಹೊಸಪಾಳ್ಯ ಜನತಾ ಕಾಲೋನಿ ಬಳಿ ತಿರುವಿನಲ್ಲಿ ಕಾರು ಪಲ್ಟಿಯಾಗಿ ಬೆಂಗಳೂರು ದಕ್ಷಿಣ ತಾಲೂಕಿನ ಗಂಗಪ್ಪನಹಳ್ಳಿ ಮಂಜು(31) ಮತ್ತು ಹೊಸಪಾಳ್ಯದ ಕಿರಣ್ (30) ಎಂಬುವರು ಮೃತಪಟ್ಟಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಂಬಾರಗುಂಡಿ ಬಳಿ ಬುಧವಾರ ನಸುಕಿನ ಜಾವ ಹೊಸ ವರ್ಷದ ಪಾರ್ಟಿ ಮುಗಿಸುಕೊಂಡು ಬರುತ್ತಿದ್ದಾಗ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಬೊಮ್ಮಲಾಪುರ ಸೆಸ್ಕ್‌ ಕಚೇರಿಯ ಕಿರಿಯ ಪವರ್‌ ಮ್ಯಾನ್‌ ಎಚ್.ಪಿ.ಪ್ರತಾಪ್‌ ಕುಮಾರ್‌ (28) ಹಾಗೂ ಕೊಡಸೋಗೆ ಗ್ರಾಮದ ಕೊಂಗಳಯ್ಯ (46) ಎಂಬುವರು ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಗೊಂಡಿದ್ದಾನೆ. ದಾವಣಗೆರೆಯ ವಿದ್ಯಾನಗರದ ಕಾಫಿ ಡೇ ಎದುರು ಪಾರ್ಟಿ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ವೇಗವಾಗಿ ಬರುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ನಗರದ ಹೊಸ ಬಡಾವಣೆಯ ನಿವಾಸಿ ಕಾರ್ತಿಕ್ (19) ಎಂಬುವರು ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಗಾಯಗೊಂಡಿದ್ದಾನೆ.

Share this article