ಬೆಂಗಳೂರು : ರಾಜ್ಯದಲ್ಲಿ ಸಮಗ್ರ ಭೂಸ್ವಾಧೀನ ನೀತಿಯನ್ನು ಎಲ್ಲ ವಾರಸುದಾರರ ಜೊತೆ ಚರ್ಚಿಸಿ ಸ್ಪಷ್ಟ ಕಾಲಮಿತಿಯಲ್ಲಿ ಜಾರಿಗೊಳಿಸುವಂತೆ ಒತ್ತಾಯ ಸೇರಿ ಕರ್ನಾಟಕ ಜನಮುಖಿ ಚಿಂತಕರು ಮತ್ತು ಸಾಂಸ್ಕೃತಿಕ ದನಿಗಳ ವೇದಿಕೆ ನಾಲ್ಕು ಪ್ರಮುಖ ನಿರ್ಣಯ ಕೈಗೊಂಡಿದೆ.
ಬುಧವಾರ ವೇದಿಕೆಯ ವತಿಯಿಂದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಸಮತೋಲನ ಅಭಿವೃದ್ಧಿಗೆ ಸಮಗ್ರ ಭೂ ಸ್ವಾದೀನ ನೀತಿ, ನಿಲುವು - ವಾರಸುದಾರರ ಸಂವಾದ’ ಕಾರ್ಯಕ್ರಮದಲ್ಲಿ ಕೃಷಿ ತಜ್ಞರು, ರೈತ ಪರ ಹೋರಾಟಗಾರರು, ಕೈಗಾರಿಕೋದ್ಯಮಿಗಳು ಅಭಿಪ್ರಾಯ, ಸಲಹೆ ಪಡೆದು ನಿರ್ಣಯ ಕೈಗೊಳ್ಳಲಾಯಿತು.
ಸಲಹಾ ನಿಯೋಗವೊಂದನ್ನು ರಚಿಸಿ ಶಾಸಕ ಬಿ.ಆರ್.ಪಾಟೀಲ್ ಮತ್ತು ನಿವೃತ್ತ ಐಎಎಸ್ ಅಕಾರಿ ಎಲ್.ಕೆ.ಅತೀಕ್ ಅವರ ಮುಖೇನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಿರ್ಣಯಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಶಾಸಕ ಬಿ.ಆರ್.ಪಾಟೀಲ್, ‘ಮೊದಲಿಂದಲೂ ಕೆಐಎಡಿಬಿಯಿಂದ ಭೂಸ್ವಾದೀನ, ಅದರ ಉಪಯೋಗ ಆರೋಗ್ಯಕರ ರೀತಿಯಲ್ಲಿ ಆಗುತ್ತಿಲ್ಲ. ಇದರ ನಡುವೆ ಇತ್ತಿಚಿಗೆ ಸರ್ಕಾರಗಳಿಗೆ ವಿಮಾನ ನಿಲ್ದಾಣಗಳ ಹುಚ್ಚು ಹಿಡಿದಿದೆ. ಯಾವುದು ಅಗತ್ಯ, ಯಾವುದು ಬೇಡ ಎಂಬುದೇ ಗೊತ್ತಿಲ್ಲದೆ ನಿರ್ಣಯ ಮಾಡಲಾಗುತ್ತಿದೆ’ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್, ‘ಸಮತೋಲನದ ಅಭಿವೃದ್ಧಿಗೆ ಕೃಷಿ ಜತೆಗೆ ಕೈಗಾರಿಕೆಯೂ ಮುಖ್ಯ. ಉದ್ಯೋಗ ಸೃಷ್ಟಿಗೆ ಕೈಗಾರಿಕೆ ಸ್ಥಾಪನೆ ಆಗಬೇಕಾಗುತ್ತದೆ. ಸರ್ಕಾರ ಕೈಗಾರಿಕೆ ಮತ್ತು ಮೂಲಸೌಕರ್ಯ ಯಾವುದೇ ಅಭಿವೃದ್ಧಿ ಚಟುವಟಿಕೆಗೆ ಭೂಸ್ವಾದೀನಕ್ಕೆ ಮುಂದಾಗಬೇಕಾದರೆ ಭೂಮಾಲೀಕರ ಜತೆಗೆ ಸಮಾಲೋಚಿಸಿ ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು, ಶೀಘ್ರ ಪಾರದರ್ಶಕ ಪರಿಹಾರ ನೀಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಸಮಗ್ರ ಭೂಸ್ವಾದೀನ ನೀತಿ ರೂಪಿಸುವ ಅಗತ್ಯವಿದೆ’ ಎಂದರು.
ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿದರು. ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದರು. ರೈತ ಹೋರಾಟಗಾರರಾದ ಬಡಗಲಪುರ ನಾಗೇಂದ್ರ, ಕೆ.ಟಿ.ಗಂಗಾಧರ್, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಕ್ರಾಸ್ಟ, ಹಿರಿಯ ಪತ್ರಕರ್ತೆ ವಿಜಯಮ್ಮ, ಕಾರಳ್ಳಿ ಶ್ರೀನಿವಾಸ್, ಏ.ಬಿ.ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಿರ್ಣಯಗಳು:
1) ಸಮಗ್ರ ಭೂಸ್ವಾದೀನ ನೀತಿಯನ್ನು ಎಲ್ಲ ವಾರಸುದಾರರ ಜೊತೆ ಚರ್ಚಿಸಿ ಸ್ಪಷ್ಟ ಕಾಲಮಿತಿಯಲ್ಲಿ ತರಬೇಕು.
2) ಸರ್ಕಾರ ಕೆಐಎಡಿಬಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತಿತರ ಸಂಸ್ಥೆಗಳ ಮೂಲಕ ಕೈಗೊಂಡ ಭೂಸ್ವಾದೀನದ ಬಳಕೆ ಮತ್ತು ದುರ್ಬಳಕೆ ಉದ್ಯೋಗ ವಿತರಣೆ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.
3) ಈ ಶ್ವೇತಪತ್ರ ಹೊರಡಿಸುವ ತನಕ ರಾಜ್ಯದಲ್ಲಿ ಯಾವುದೇ ಭೂಸ್ವಾದೀನ ಕೈಗೊಳ್ಳಬಾರದು.
4) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಭರವಸೆಯಂತೆ ಹಿಂದೆ ಬಿಜೆಪಿ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಂದ ಮಾರಕ ತಿದ್ದುಪಡಿಯನ್ನು ಹಿಂಪಡೆಯಬೇಕು.