ಸರ್ಕಾರದ ಹಣಕಾಸು ಪರಿಸ್ಥಿತಿ ಅವಲೋಕಿಸಿ, ಗುತ್ತಿಗೆದಾರರಿಗೆ ಏಪ್ರಿಲ್‌ನಲ್ಲಿ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬೆಂಗಳೂರು : ಸರ್ಕಾರದ ಹಣಕಾಸು ಪರಿಸ್ಥಿತಿ ಅವಲೋಕಿಸಿ, ಗುತ್ತಿಗೆದಾರರಿಗೆ ಏಪ್ರಿಲ್‌ನಲ್ಲಿ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬಾಕಿ ಬಿಲ್ ಪಾವತಿ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ವಿಧಾನಸೌಧದಲ್ಲಿ ತಮ್ಮನ್ನು ಸೋಮವಾರ ಭೇಟಿಯಾದ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ, ಹಂತಹಂತವಾಗಿ ಬಾಕಿ ಬಿಲ್ ಪಾವತಿಸುವುದಾಗಿ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಾಕಿ ಬಿಲ್ ಮೊತ್ತದಲ್ಲಿ 15 ಸಾವಿರ ಕೋಟಿ ರು. ಪಾವತಿಸುವಂತೆ ಗುತ್ತಿಗೆದಾರರು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಆಧಾರಿಸಿ ಬಾಕಿ ಬಿಲ್ ಪಾವತಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗುವುದು. ಏಪ್ರಿಲ್‌ನಲ್ಲಿ ಸಾಧ್ಯವಾದಷ್ಟು ಬಾಕಿ ಬಿಲ್‌ಗಳನ್ನು ಪಾವತಿಸುವುದಾಗಿ ತಿಳಿಸಿದ್ದೇನೆ ಎಂದರು.
ಬಾಕಿ ಬಿಲ್ ಪಾವತಿಸದಿದ್ದರೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ದೂರು ನೀಡುತ್ತೇವೆ ಎಂಬ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಭೇಟಿಯಾದರೆ ಭೇಟಿಯಾಗಲಿ. ನಮ್ಮದೇನೂ ತಕರಾರಿಲ್ಲ. ಹಣಕಾಸು ಪರಿಸ್ಥಿತಿ ನೋಡಿಕೊಂಡು ನಾವು ಬಿಲ್ ಪಾವತಿಸುತ್ತೇವೆ ಎಂದರು.
ಇನ್ನು ಅಧಿಕಾರಿಗಳ ಮಟ್ಟದಲ್ಲಿ ಕಮಿಷನ್ ಪಡೆಯಲಾಗುತ್ತಿದೆ ಎಂಬ ದೂರಿಗೆ ಉತ್ತರಿಸಿ, ಯಾರೇ ಆಗಲಿ ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಅಪರಾಧ. ಗುತ್ತಿಗೆದಾರರು ಕಮಿಷನ್ ಕೊಡುವುದನ್ನು ನಿಲ್ಲಿಸಿ. ನಾನು ಈವರೆಗೆ ಹಣ ಬಿಡುಗಡೆಗಾಗಿ ಯಾರಿಂದಲೂ ದುಡ್ಡು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ತಪ್ಪುಗಳಿಗೆ ನಾವು ಹೊಣೆಯಲ್ಲ
ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ಮೀಸಲಿಡದೆಯೇ ಟೆಂಡರ್ ಪ್ರಕ್ರಿಯೆ ನಡೆಸಿ ಗುತ್ತಿಗೆದಾರರಿಂದ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದಾಗಿ ಬಾಕಿ ಬಿಲ್ ಮೊತ್ತ ಹೆಚ್ಚಳವಾಗಿದೆ. ಅವರ ಈ ಅವೈಜ್ಞಾನಿಕ ಕ್ರಮಕ್ಕೆ ಈಗಿನ ಸರ್ಕಾರ ಹೊಣೆಯಾಗಲು ಸಾಧ್ಯವಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ.