ಕಲಬುರಗಿ ಜೈಲು ಸಿಬ್ಬಂದಿಗೆ ಈಗ ಅಗ್ನಿ ಪರೀಕ್ಷೆ : ಎರಡೂ ಗ್ಯಾಂಗ್ ಸೇರಿಬಿಟ್ರೆ ಟೆನ್ಶನ್

Published : Mar 03, 2025, 11:16 AM IST
Jail

ಸಾರಾಂಶ

ಅಂಕಪಟ್ಟಿ ಕೊಡೋನು, ಪರೀಕ್ಷೆ ಪಾಸು ಮಾಡಿಸೋರಿಬ್ಬರೂ ಅಲ್ಲೇ ಸೇರಿಬಿಟ್ರು, ಮುಂದೇನು ಗತಿ? ಎಂದು ಸುದ್ದಿಗಾರರ ಪ್ರಶ್ನೆಗೆ ಪೊಲೀಸ್‌ ಕಮೀಷನರ್ ಸಾಹೇಬ್ರು ತುಸು ವಿಚಲಿತರಾದವರಂತೆ ಕಂಡರೂ ತಕ್ಷಣ ಅಧಿಕಾರಿಗಳನ್ನ ಕರೆದು ಈ ಡೆಡ್ಲಿ ಕಾಂಬಿನೇಷನ್ ಬಗ್ಗೆ ಎಚ್ಚರವಹಿಸಲು ಸೂಚಿಸಿದರೆನ್ನಿ

ಅಂಕಪಟ್ಟಿ ಕೊಡೋನು, ಪರೀಕ್ಷೆ ಪಾಸು ಮಾಡಿಸೋರಿಬ್ಬರೂ ಅಲ್ಲೇ ಸೇರಿಬಿಟ್ರು, ಮುಂದೇನು ಗತಿ? ಎಂದು ಸುದ್ದಿಗಾರರ ಪ್ರಶ್ನೆಗೆ ಪೊಲೀಸ್‌ ಕಮೀಷನರ್ ಸಾಹೇಬ್ರು ತುಸು ವಿಚಲಿತರಾದವರಂತೆ ಕಂಡರೂ ತಕ್ಷಣ ಅಧಿಕಾರಿಗಳನ್ನ ಕರೆದು ಈ ಡೆಡ್ಲಿ ಕಾಂಬಿನೇಷನ್ ಬಗ್ಗೆ ಎಚ್ಚರವಹಿಸಲು ಸೂಚಿಸಿದರೆನ್ನಿ,

ಏನಕೇನ ಕಾರಣಗಳಿಂದಾಗಿ ಸುದ್ದಿಯಲ್ಲಿರುವ ಕಲಬುರಗಿ ಕಿಂಗ್‌ಪಿನ್‌ಗಳಿಬ್ಬರ ಸಂಗಮದಿಂದಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಎನ್ನಿ! ತಮ್ಮ ಕೈಚಳಕದಿಂದ ಹಲವು ಯೂನಿವರ್ಸಿಟಿಗಳ ನಕಲಿ ಅಂಕಪಟ್ಟಿ ಮಾರಾಟಮಾಡ್ತಾ, ಪಿಎಪರೀಕ್ಷೆ-ನೇಮಕಾತಿಗಳನ್ನೂ ಸಲೀಸಾಗಿ ಮಾಡ್ತಾ ಇಡೀ ದೇಶದ ಗಮನ ಸೆಳೆದಂತಹ ಖತರ್‌ನಾಕ್‌ ವಂಚಕರ ಜೋಡಿ ಇದೀಗ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂಗಮಿಸಿದೆ. ಬ್ಲೂಟೂತ್ ಬಳಸಿ ಗೋಲ್ಮಾಲ್ ಮಾಡ್ತಾ ಪಿಎಸೈ ಸೇರಿದ್ದಂಗೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನೇ ಪಾಸು (ನೇಮಕಾತಿ) ಮಾಡಿಸಿ, ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಗಳನ್ನೇ ಬುಡಮೇಲು ಮಾಡಿದ ಕುಖ್ಯಾತಿಯ ಅಫಜಲ್ಪುರ ಮೂಲದ ಆರ್.ಡಿ. ಪಾಟೀಲ್‌ ಪಿಎಸ್ಸೆ ಪರೀಕ್ಷಾ ಹಗರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಕಲಬುರಗಿ ಕಾರಾಗೃಹದಲ್ಲಿ ಬಂಧಿಯಾಗಿದ್ದಾನೆ.

ಇದೀಗ ದೇಶದ ಹಲವು ವಿವಿಗಳ ನಕಲಿ ಅಂಕಪಟ್ಟಿ ಸಿದ್ಧಪಡಿಸಿ ಮಾರಾಟ ಮಾಡ್ತಾ ಇದೇ ಮೊದಲ ಬಾರಿಗೆ ಕಲಬುರಗಿ ಖಾಕಿ ಕೈಗೆ ಸಿಕ್ಕಿಬಿದ್ದಿರುವ ದೆಹಲಿ ಮೂಲದ ರಾಜೀವ್ ಸಿಂಗ್ ಅರೋರಾ ಎಂಬ ವಂಚಕನೂ ಇದೇ ಕಲಬುರಗಿ ಬಂದೀಖಾನೆ ಸೇರಿದ್ದಾನೆ! ಈಗ ಹೇಳಿ, ವಂಚಕರಿಬ್ಬರ ಸಮಾಗಮ ಕಲಬುರಗಿ ನಗರ ಪೊಲೀಸ್‌ ಹಾಗೂ ಸೆರೆಮನೆ ಸಿಬ್ಬಂದಿಯಲ್ಲಿ ಅದೆಂತಹ ಸಂಚಲನ ಸೃಷ್ಟಿಸಿರಬಹುದೆಂದು!? ನಕಲಿ ಅಂಕಪಟ್ಟಿ ಜಾಲ ಭೇದಿಸಿದ್ದೇವೆಂದು ಕಲಬುರಗಿ ಪೊಲೀಸ್ ಕಮೀಶ್ವರ್ ಡಾ. ಶರಣಪ್ಪಢಗೆ ಸುದ್ದಿಗೋಷ್ಠಿಯಲ್ಲಿ ದೆಹಲಿ ಮೂಲದ ಆರೋಪಿಯನ್ನ ಬಂಧಿಸಿ ಕಲಬುರಗಿ ಜೈಲಿಗಟ್ಟಿದ್ದೇವೆಂದಾಗ ಸುದ್ದಿಗಾರರು ದಂಗು!

ಅಂಕಪಟ್ಟಿ ಕೊಡೋನು, ಪರೀಕ್ಷೆ ಪಾಸು ಮಾಡಿಸೋರಿಬ್ಬರೂ ಅಲ್ಲೇ ಸೇರಿಬಿಟ್ಟು, ಮುಂದೇನು ಗತಿ? ಎಂದು ಸುದ್ದಿಗಾರರ ಪ್ರಶ್ನೆಗೆ ಪೊಲೀಸ್ ಕಮೀಶ್ವರ್ ಸಾಹೇಬ್ರು ತುಸು ವಿಚಲಿತರಾದವರಂತೆ ಕಂಡರೂ ತಕ್ಷಣ ಅಧಿಕಾರಿಗಳನ್ನ ಕರೆದು ಈ ಡೆಡ್ಲಿ ಕಾಂಬಿನೇಷನ್ ಬಗ್ಗೆ ಎಚ್ಚರವಹಿಸಲು ಸೂಚಿಸಿದರೆ ಹಲವು ಅಪಸವ್ಯಗಳಿಂದಾಗಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಕಲಬುರಗಿ ಸೆರೆಮನೆಯಲ್ಲೀಗ ಬಂದೀಖಾನೆ ಇಲಾಖೆ ಕೈಗೊಂಡ ಬಿಗಿ ಕ್ರಮಗಳಿಂದಾಗಿ ನಿಧಾನಕ್ಕೆ ಬದಲಾವಣೆ ಗಾಳಿ ಬೀಸುತ್ತಿದೆ, ಅದ್ಯಾವುದಕ್ಕೂ ಕಿಂಗ್‌ಪಿನ್ ಜೋಡಿ ಮೋಡಿ ಮಾಡದಂತೆ ಖಾಕಿಪಡೆ ಹದ್ದಿನಕಣ್ಣಂತೂ ಇಟ್ಟಿರೋದು ಸಮಾಧಾನದ ಸಂಗತಿ ಅನ್ನಬಹುದು.

ರೆಕ್ಕೆಧಾರಿ ಡಿ.ಕೆ.ಶಿವಕುಮಾರ್ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡ್ತಾರೆ ಎಂಬುದು ಹಳೆಯ ಮಾತು. ಒಂದು ಕಡೆ ನಿಲ್ಲದೆ ಯಾವುದೋ ಉದ್ದೇಶ, ಗುರಿ, ಲಾಭ ಇಟ್ಟುಕೊಂಡೇ ವೈಯಕ್ತಿಕ ಬದುಕು ಪಕ್ಕಕ್ಕಿಟ್ಟು ಸಂಚರಿಸುವರನ್ನು ನೋಡಿ ಈ ಮಾತು ಬಂದಿದೆ. ಆದರೆ ಈ ಮಾತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮಾತ್ರ ಸುತರಾಂ ಅನ್ವಯ ಆಗಲ್ಲ ಬಿಡಿ. ಯಾಕೆಂದರೆ ಡಿ.ಕೆ. ಶಿವಕುಮಾರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಲು 24 ಗಂಟೆ ಸಾಕಾಗೋದೇ ಇಲ್ಲ. ಬದಲಾಗಿ ರೆಕ್ಕೆ ಕಟ್ಟಿಕೊಂಡು ಸಂಚರಿಸುವ ಲೋಕಸಂಚಾರಿ ಆಗಿದ್ದಾರೆ. ಉಪಮುಖ್ಯ ಮಂತ್ರಿ ಸ್ಥಾನಕ್ಕೆ ಒಂದು ರೀತಿಯ ಖದರ್ ತಂದುಕೊಟ್ಟ ಡಿ.ಕೆ. ಶಿವಕುಮಾರ್ ಬೆಳಗ್ಗೆ ತಮ್ಮ ಮನೆಯಿಂದ ಹೊರಟರೆ ಶುರುವಾಗುತ್ತದೆ ನಾನ್ ಸ್ಟಾಪ್ ಲೋಕಸಂಚಾರ.

ಅದ್ಯಾವುದೋ ಉದ್ಘಾಟನೆ, ಶಂಕುಸ್ಥಾಪನೆ, ಸಮ್ಮೇಳನದಲ್ಲಿ ಭಾಗಿಯಾಗುತ್ತಾರೆ. ಸಾರ್ವಜನಿಕ ಕಾರ್ಯಕ್ರಮ ಇಲ್ಲವೆಂದರೆ ಇಲಾಖೆಗಳ ಸಭೆ, ಗಣ್ಯರ ಭೇಟಿ, ಮುಖಂಡರ ಜೊತೆ ಮಾತುಕತೆ ಇದ್ದೇ ಇರುತ್ತದೆ. ಈ ಮಧ್ಯ ಪಕ್ಷದ ಸಭೆ ಸಹ ನಡೆಸಿಬಿಡುತ್ತಾರೆ. ಯಾವ ಕಾರ್ಯಕ್ರಮ ಇಲ್ಲವೆಂದರೆ ಬೆಂಗಳೂರು ಪ್ರದಕ್ಷಿಣೆ ಶುರು ಮಾಡಿಬಿಡುತ್ತಾರೆ. ಇದೆಲ್ಲಾ ಲೋಕಲ್ ಸಂಚಾರವಾಗಿದ್ದರೆ, ಲೋಕಸಂಚಾರ ಬೇರೆ ರೀತಿಯದ್ದೇ ಆಗಿದೆ. ಬೆಳ್ಳಂ ಬೆಳಗ್ಗೆ ದೆಹಲಿಗೆ ಪುರ್‌ ಎಂದು ಹಾರಿ ಹೋಗುವಉಪಮುಖ್ಯಮಂತ್ರಿಗಳು, ಅದೇವೇಗದಲ್ಲಿ ಬೆಂಗಳೂರಿಗೆ ಆಗಮಿಸಿ, ಮತ್ತೇರಾಜ್ಯದ ಯಾವುದೋ ಮೂಲೆಗೆ ಹಾರಿಬಿಡುತ್ತಾರೆ. ಯಾವುದೋ ದೇವಸ್ಥಾನ, ಪೂಜೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾಗಿ ಬಿಡುತ್ತಾರೆ.

ಈ ಮಧ್ಯ ಪ್ರೀತಿಯಿಂದ ಕರೆದವರ ಮದುವೆಗೂ ಹೋಗಿ ಹಾರೈಸುವುದನ್ನು ಮಾತ್ರ ತಪ್ಪಿಸುವುದಿಲ್ಲ. ಮತ್ತೊಂದು ವಿಶೇಷವೆಂದರೆ ಕಾರ್ಯಕ್ರಮಕ್ಕೆ ತಕ್ಕಂತೆ ವೇಷಭೂಷಣ ಧರಿಸುವುದು ಉಪಮುಖ್ಯಮಂತ್ರಿಗಳ ಇತ್ತೀಚಿನ ಸ್ಪೆಷಾಲಿಟಿ. ನ್ಯಾಷನಲ್, ಇಂಟರ್ ನ್ಯಾಷನಲ್ ಕಾರ್ಯಕ್ರಮವಾದರೆ ಫುಲ್ ಸೂಟ್‌, ಪಕ್ಷದ ಕಾರ್ಯಕ್ರಮವಾದರೆ, ಖಾದಿ ಧರಿಸು ಮೇಲೊಂದು ಶಾಲು, ಧಾರ್ಮಿಕ ಕಾರ್ಯಕ್ರಮವಾದರೆ ಪಂಚೆ, ಜುಬ್ಬಾಧಾರಿಯಾಗುತ್ತಾರೆ. ಅನೇಕ ಸಂದರ್ಭಗಳಲ್ಲಿ ಅವರೇ ತಾವು ವೃತ್ತಿಯಲ್ಲಿ ಉದ್ಯಮಿ, ಆಸಕ್ತಿಯಲ್ಲಿ ರಾಜಕಾರಣಿ ಎಂದುಹೇಳಿದ್ದಾರೆ. ಹಾಗಾಗಿ ಲಾಭ, ದೂರದೃಷ್ಟಿಯಿಂದಲೇ ಈ ಎಲ್ಲ ಲೋಕಸಂಚಾರ ಎಂಬ ಮಾತು ತಳ್ಳಿ ಹಾಕುವಂತಿಲ್ಲ.

ಹೆಂಡ್ತಿ ಬರ್ಥಡೇ ಡೇಟ್ ಕೇಳಿ ಸಭೆಯಲ್ಲಿ ಕೂತಲ್ಲೇ ಬೆಚ್ಚಿದ ಗಂಡ! ಇತ್ತೀಚೆಗೆ ರೋಟರಿ ಸಂಸ್ಥೆಯೊಂದರ ಮಹತ್ವದ ಕಾರ್ಯಕ್ರಮ ದಕ್ಷಿಣ ಕನ್ನಡದ ತಾಲೂಕು ಕೇಂದ್ರದ ಸಭಾಭವನವೊಂದರಲ್ಲಿ ಆಯೋಜನೆಯಾಗಿತ್ತು. ಆತಿಥ್ಯ ವಹಿಸಿದ ರೋಟರಿ ಕ್ಲಬ್ ಸೇರಿದಂತೆ ಹಲವು ರೋಟರಿ ಕ್ಲಬ್‌ಗಳ ಸದಸ್ಯರೂ ಆದಿನಸಮಾವೇಶಗೊಂಡಿದ್ದರು. ಮಹಿಳೆಯರು ಒಂದೆಡೆ, ಪುರುಷರು ಮತ್ತೊಂದು ಕಡೆ. ಸಂಪ್ರದಾಯದಂತೆ ವೇದಿಕೆ ಮೇಲಿದ್ದ ಅತಿಥಿ ಗಣ್ಯರ ಭಾಷಣ, ಅಧ್ಯಕ್ಷರ ಭಾಷಣದ ಬಳಿಕ ಆ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸುವ ರೋಟರಿ ಸದಸ್ಯರು ಹಾಗೂ ಅವರ ಕುಟುಂಬಿಕರ ಹೆಸರನ್ನು ನಿರೂಪಕರುಓದಿಹೇಳುತ್ತಿದ್ದಂತೆಯೇ, ಅವರು ಬಂದು ಅತಿಥಿಗಳಿಂದ ಗುಲಾಬಿ ಹೂ ನೀಡಿ ಗೌರವಿಸುತ್ತಿದ್ದರು. ಹೀಗಿರುವಾಗ ನಿರೂಪಕರು, ಮಹಿಳೆಯೊಬ್ಬರ ಹೆಸರು ಹೇಳುತ್ತಿದ್ದಂತೆಯೇ ಸಭೆಯಲ್ಲಿ ಕುಳಿತ್ತಿದ್ದ ವ್ಯಕ್ತಿಯೊಬ್ಬರು ಒಮ್ಮೆಲೇ ಬೆಚ್ಚಿಬಿದ್ದರು.

'ಅಯ್ಯೋ.. 'ಎಂಬ ಉದ್ಧಾರದ ಜೊತೆಗೆ ಅವರ ಮುಖ ಬಿಳಚಿಕೊಂಡಿತು. ತನ್ನ ಮೊಬೈಲ್‌ನಲ್ಲಿ ಕ್ಯಾಲೆಂಡರ್‌ ತೆರೆದು ದಿನಾಂಕ ನೋಡಿದರು, ಪಕ್ಕದಲ್ಲಿ ಕುಳಿತ ಸ್ನೇಹಿತರಲ್ಲಿ ಇಲ್ಲ, ಇನ್ನು ಬರಬೇಕಷ್ಟೇ. ನನ್ನೆಂಡ್ತಿ ಬರ್ತ್ ಡೇ ನಾಡಿದ್ದು ಎಂದು ತನ್ನನ್ನು ತಾನೇ ಸಮಾಧಾನಪಡಿಸಿ ಕೊಂಡರು. ಪಕ್ಕದಲ್ಲಿದ್ದ ಸ್ನೇಹಿತರೂ ಕಡಿಮೆ ಇರಲಿಲ್ಲ. ಎಂತರೀ ಹೆದರಿದ್ರಾ? ಅಡ್ವಾನ್ಸ್ ವಿಶ್ ಮಾಡಿದ್ದಾರೆ, ಡೋಂಟ್ ವರಿ ಎಂದರು. ಹಾಗಲ್ಲ, ನಾನೆಲ್ಲಿ ಹೆಂಡ್ತಿ ಬರ್ತ್ ಡೇ ಮರ್ತು ಬಿಟ್ಟೆನಾ ಅಂತ ಹೆದರಿಕೆ ಆಯ್ತು ಎಂದು ತನ್ನ ಸ್ನೇಹಿತರಲ್ಲಿ ನಿಜ ವಿಚಾರ ತಿಳಿಸುತ್ತಲೇ, ಸ್ಟೇಜ್ ನಲ್ಲಿ ಅತಿಥಿ ಕೈಯಿಂದ ಗುಲಾಬಿ ಹೂ ಪಡೆದ ತನ್ನ ಪತ್ನಿಗೆ ಥಂಬ್ ಸಿಗ್ನಲ್ ತೋರಿಸಿ ಮುಗುಲ್ನಕ್ಕು, ಬೆವರೊರೆಸಿಕೊಂಡರು!

ಶೇಷಮೂರ್ತಿ ಅವಧಾನಿ 

ಚಂದ್ರಮೌಳಿ 

ಎಂ.ಆರ್. ಮೌನೇಶ ವಿಶ್ವಕರ್ಮ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ