ಆಂತರಿಕಾ ಭದ್ರತಾ ವಿಭಾಗದ ಐಜಿಪಿ ಐಪಿಎಸ್‌ ರೂಪಾ ವಿರುದ್ಧ ಐಪಿಎಸ್‌ ವರ್ತಿಕಾ ದೂರು

Published : Mar 03, 2025, 10:51 AM IST
threat of transfers not deter her from duties ips roopa d moudgil inspiring story kpt

ಸಾರಾಂಶ

ರಾಜ್ಯ ಪೊಲೀಸ್‌ ಇಲಾಖೆಯ ಆಂತರಿಕಾ ಭದ್ರತಾ ವಿಭಾಗದ (ಐಎಸ್‌ಡಿ) ಐಜಿಪಿ ಡಿ.ರೂಪಾ ವಿರುದ್ಧ ಅದೇ ವಿಭಾಗದ ಡಿಐಜಿಪಿ ವರ್ತಿಕಾ ಕಟಿಯಾರ್‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

 ಬೆಂಗಳೂರು : ರಾಜ್ಯ ಪೊಲೀಸ್‌ ಇಲಾಖೆಯ ಆಂತರಿಕಾ ಭದ್ರತಾ ವಿಭಾಗದ (ಐಎಸ್‌ಡಿ) ಐಜಿಪಿ ಡಿ.ರೂಪಾ ವಿರುದ್ಧ ಅದೇ ವಿಭಾಗದ ಡಿಐಜಿಪಿ ವರ್ತಿಕಾ ಕಟಿಯಾರ್‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಆಂತರಿಕಾ ಭದ್ರತಾ ವಿಭಾಗ(ಐಎಸ್‌ಡಿ)ದ ಐಜಿಪಿ ಡಿ.ರೂಪಾ ಅವರ ಆದೇಶದ ಮೇರೆಗೆ ಇಬ್ಬರು ಕೆಳ ಹಂತದ ಸಿಬ್ಬಂದಿ ಅನಧಿಕೃತವಾಗಿ ತಮ್ಮ ಕೊಠಡಿ ಬಾಗಿಲು ತೆರೆದು ಕೆಲ ಕಡತಗಳನ್ನು ಇರಿಸಿ ಆ ಕಡತಗಳ ಫೋಟೋ ತೆಗೆದು ಡಿ.ರೂಪಾ ಅವರಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ವಿವರ:

ಹೆಡ್‌ಕಾನ್ಸ್‌ಟೇಬಲ್‌ ಟಿ.ಎಸ್‌.ಮಂಜುನಾಥ ಮತ್ತು ಹೋಂ ಗಾರ್ಡ್‌ ಮಲ್ಲಿಕಾರ್ಜುನ್‌(ಐಜಿಪಿ ಕಚೇರಿ ಸೆಂಟ್ರಿ) ಅವರು 2024ರ ಸೆ.6ರಂದು ನಮ್ಮ ಅನುಮತಿ ಇಲ್ಲದೆ ಡಿ.ರೂಪಾ ಅವರ ಆದೇಶದಂತೆ ಕಂಟ್ರೋಲ್‌ ರೂಮ್‌ನಿಂದ ನಮ್ಮ ಕಚೇರಿ ಕೊಠಡಿ ಕೀ ತೆಗೆದುಕೊಂಡು ಬಾಗಿಲನ್ನು ತೆರೆದಿದ್ದಾರೆ. ಬಳಿಕ ಹೆಡ್‌ಕಾನ್ಸ್‌ಟೇಬಲ್‌ ಮಂಜುನಾಥ ಅವರು ಕೆಲ ಕಡತಗಳನ್ನು ನಮ್ಮ ಕಚೇರಿಯಲ್ಲಿ ಇರಿಸಿ ಫೋಟೋ ತೆಗೆದು ವಾಟ್ಸಾಪ್‌ ಮುಖಾಂತರ ಐಜಿಪಿ ಡಿ.ರೂಪಾ ಅವರಿಗೆ ಕಳುಹಿಸಿದ್ದಾರೆ.

ಇದಕ್ಕೂ ಮುನ್ನ ನಮ್ಮ ಆಪ್ತ ಸಹಾಯಕ ಎಚ್‌.ಕಿರಣ್‌ ಕುಮಾರ್‌ ಅವರು ಡಿಐಜಿಪಿ ಗಮನಕ್ಕೆ ಬಾರದಂತೆ ಕಚೇರಿಯ ಕೊಠಡಿ ಬಾಗಿಲು ತೆರೆಯಬಾರದು ಎಂದು ಮಂಜುನಾಥ್‌ಗೆ ಹೇಳಿದ್ದಾರೆ. ಆದರೂ ಮಂಜುನಾಥ್‌ ಅವರು ಐಜಿಪಿ ಡಿ.ರೂಪಾ ಅವರ ಆದೇಶದಂತೆ ಕಡತಗಳನ್ನು ನಮ್ಮ ಕಚೇರಿಯಲ್ಲಿ ಇರಿಸಿ ಫೋಟೋ ತೆಗೆದು ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾರೆ.

ಈ ವಿಚಾರ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಕಿರಣ್‌ ಕುಮಾರ್‌, ಮಂಜುನಾಥ ಮತ್ತು ಮಲ್ಲಿಕಾರ್ಜುನ್‌ ಅವರನ್ನು ಕರೆದು ವಿಚಾರಿಸಿದಾಗ, ಐಜಿಪಿ ಡಿ.ರೂಪಾ ಅವರ ಆದೇಶದ ಮೇರೆಗೆ ಕೊಠಡಿ ತೆರೆದು ಅನಧಿಕೃತವಾಗಿ ಪ್ರವೇಶಿಸಿ ಕಡತ ಇರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ನಮ್ಮ ಕಚೇರಿಯಲ್ಲಿ ಗೌಪ್ಯ ದಾಖಲೆ ಸೇರಿದಂತೆ ಕಚೇರಿಗೆ ಸಂಬಂಧಿಸಿದ ಇತರೆ ದಾಖಲೆಗಳನ್ನು ಇರಿಸಲಾಗಿದೆ. ಕಚೇರಿ ಅವಧಿ ಮುಗಿದ ನಂತರ ಹಾಗೂ ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಅನುಮತಿ ಇಲ್ಲದೆ ನಮ್ಮ ಕಚೇರಿ ಕೊಠಡಿ ಬೀಗ ತೆರೆದು ಅನಧಿಕೃತ ಪ್ರವೇಶ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಘಟನೆಯು ಕಾನೂನು ಬಾಹಿರ ಚಟುವಟಿಕೆಯಾಗಿದ್ದು, ಉದ್ದೇಶಪೂರ್ವಕವಾಗಿ ದುರ್ಬಕೆ ಮಾಡಿಕೊಂಡಿದ್ದಾರೆ.

ಅಹಿತಕರ ಘಟನೆ ನಡೆದರೆ ರೂಪಾ ನೇರ ಹೊಣೆ:

ಈ ಒಂದು ಘಟನೆ ನನ್ನ ಗಮನಕ್ಕೆ ಬಂದಿದ್ದು, ಈ ಹಿಂದೆ ಇಂತಹ ಎಷ್ಟೋ ಘಟನೆಗಳು ನಡೆದಿರಬಹುದು. ಅದು ನನ್ನ ಗಮನಕ್ಕೆ ಬಂದಿಲ್ಲ. ಮುಂದೆಯೂ ಇಂತಹ ಘಟನೆಗಳು ನಡೆಯಬಹುದಾಗಿದೆ. ಈ ರೀತಿಯ ಘಟನೆಗಳು ಕಚೇರಿಯ ವಾತಾವರಣ ಮತ್ತು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳ ಮನಸ್ಥಿತಿಗೆ ಹಾನಿಯುಂಟು ಮಾಡಬಹುದಾಗಿದೆ. ಇನ್ನು ಮುಂದೆ ನನ್ನ ಕಚೇರಿ ಕೊಠಡಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ್ದಲ್ಲಿ ಅದಕ್ಕೆ ಡಿ.ರೂಪಾ ಅವರೇ ನೇರ ಹೊಣೆಗಾರರಾಗಿರುತ್ತಾರೆ.

ಈ ಹಿಂದೆ ರೂಪಾ ನನಗೆ ಬೆದರಿಕೆ ಹಾಕಿದ್ದರು:

ಈ ರೀತಿ ಅಧಿಕಾರಿಗಳ ಕೊಠಡಿಗೆ ಅನಧಿಕೃತ ಪ್ರವೇಶ ಮಾಡಿಸಿರುವ ಡಿ.ರೂಪಾ ಅವರು ಈ ಪರಿಸ್ಥಿತಿಯನ್ನು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ, ಈ ಹಿಂದೆ ಡಿ.ರೂಪಾ ಅವರು ನನ್ನ ವಾರ್ಷಿಕ ವರದಿ ಹಾಳು ಮಾಡುವುದಾಗಿ ಹಾಗೂ ತಾವು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಪದೋನ್ನತಿ ಹೊಂದಿದಾಗ ನನ್ನನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಇದೇ ರೀತಿ ಆಂತರಿಕಾ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಅಧಿಕಾರಿ-ಸಿಬ್ಬಂದಿಗಳಿಗೆ ಹಾಗೂ ಲಿಪಿಕ ಅಧಿಕಾರಿ-ಸಿಬ್ಬಂದಿಗಳಿಗೂ ಹೆದರಿಸಿದ್ದಾರೆ. ನಾನು ಹೇಳಿದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಅನಧಿಕೃತ ಕಾರ್ಯಗಳನ್ನು ಮಾಡಿಸಿದ್ದಾರೆ. ಹೀಗಾಗಿ ಡಿ.ರೂಪಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನನಗೆ ನ್ಯಾಯ ಒದಗಿಸಬೇಕು ಎಂದು ಡಿಐಜಿಪಿ ವರ್ತಿಕಾ ಕಟೀರ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ