;Resize=(412,232))
ಬೆಂಗಳೂರು : ಕರ್ನಾಟಕ ಬಂದ್ ವೇಳೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವುದು, ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಎಚ್ಚರಿಸಿದ್ದಾರೆ.
ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಯಾರನ್ನೂ ಬಂದ್‌ನಲ್ಲಿ ಭಾಗವಹಿಸುವಂತೆ ಮತ್ತು ಅಂಗಡಿ-ಮುಂಗಟ್ಟು ಅಥವಾ ಇತರೆ ಸಂಸ್ಥೆಗಳನ್ನು ಮುಚ್ಚುವಂತೆ ಹಾಗೂ ವಾಹನಗಳ ಸಂಚಾರವನ್ನು ತಡೆಯುವಂತೆ ಅಥವಾ ಅವರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸುವುದು, ಬೆದರಿಸುವುದು ಅಥವಾ ಬಲವಂತಪಡಿಸುವುದು ಸರಿಯಲ್ಲ. ಒಂದೇ ವೇಳೆ ಬಲವಂತವಾಗಿ ಬಂದ್ ಮಾಡಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ವತಿಯಿಂದ ನಗರದಾದ್ಯಂತ ಅಗತ್ಯ ಮುಂಜಾಗ್ರತಾ ಮತ್ತು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಮುಖ ಹಾಗೂ ಸೂಕ್ತ ಸ್ಥಳಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್, ಗಸ್ತು ಮತ್ತು ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.
ಶಾಲಾ-ಕಾಲೇಜುಗಳು, ಕಚೇರಿಗಳು, ಅಂಗಡಿ-ಮುಂಗಟ್ಟುಗಳು ಹಾಗೂ ವಾಣಿಜ್ಯ ಸಂಸ್ಥೆಗಳು, ಸಾರ್ವಜನಿಕ ಸಾರಿಗೆ ಮತ್ತು ಇತರೆ ಸಾಮಾನ್ಯ ಚಟುವಟಿಕೆಗಳು ಎಂದಿನಂತೆ ನಡೆಯುವ ನಿರೀಕ್ಷೆಯಿದೆ. ಸಾರ್ವಜನಿಕರು ಯಾವುದೇ ಭಯ ಅಥವಾ ಆತಂಕಕ್ಕೆ ಒಳಗಾಗದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಎಂದಿನಂತೆ ಮುಂದುವರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.