;Resize=(412,232))
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ, ಪದವೀಧರ ಮತ್ತು ಪ್ರೌಢ ಶಾಲಾ ಶಿಕ್ಷಕ ವೃಂದದ 15,000 ಹುದ್ದೆಗಳ ಭರ್ತಿಗೆ ಸರ್ಕಾರ ವೇಳಾಪಟ್ಟಿ ಸಹಿತ ಅಧಿಸೂಚನೆ ಹೊರಡಿಸಿದೆ. ಬರುವ ಸೆಪ್ಟೆಂಬರ್ ತಿಂಗಳ ಬೇರೆ ಬೇರೆ ದಿನಾಂಕಗಳಲ್ಲಿ ಶಿಕ್ಷಕ ಹುದ್ದೆ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಆ.18 ರಿಂದ ಸೆ.7ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ), ಪದವೀಧರ ಶಿಕ್ಷಕರು(6ರಿಂದ 8ನೇ ತರಗತಿ) ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರು(9ರಿಂದ 10ನೇ ತರಗತಿ), ದೈಹಿಕ ಶಿಕ್ಷಣ ಶಿಕ್ಷಕರ (ಗ್ರೇಡ್-1), ದೈಹಿಕ ಶಿಕ್ಷಣ ಶಿಕ್ಷಕರ (ಗ್ರೇಡ್-2) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯು ಅಧಿಸೂಚನೆ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಪರೀಕ್ಷೆಯು ವಸ್ತುವಿಷಯ ಮಾದರಿಯಲ್ಲಿದ್ದು, ಒಎಂಅರ್ ಶೀಟ್‌ನಲ್ಲಿ ಉತ್ತರಿಸಬೇಕಾಗುತ್ತದೆ. ಒಎಂಆರ್ ಉತ್ತರ ಪತ್ರಿಕೆ ಭರ್ತಿ ಮಾಡುವಾಗ ಎಚ್ಚರಿಕೆ ವಹಿಸಬೇಕು. ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯವಿರುವ ಅಥವಾ ದೈಹಿಕ ಅಸಮರ್ಥತೆ ಹೊಂದಿರುವ ಅಭ್ಯರ್ಥಿಗಳು ನಿಯಮಾನುಸಾರ ಲಿಪಿಕಾರರ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಅಗತ್ಯ ವಿದ್ಯಾರ್ಹತೆ, ಮೀಸಲಾತಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ https://schooleducation.karnataka.gov.in/ ಗೆ ಭೇಟಿ ನೀಡಿ ಸಂಪೂರ್ಣ ವಿವರಗಳನ್ನು ಪಡೆಯಬಹುದು. ಅಥವಾ ಕೇಂದ್ರೀಯ ದಾಖಲಾತಿ ಘಟಕದ ಸಹಾಯವಾಣಿ :080-22483145, 22483140, 9483024723 ಸಂಪರ್ಕಿಸಬಹುದು.