;Resize=(412,232))
ಬೆಂಗಳೂರು : ರಾಜ್ಯದಲ್ಲಿ ಗೌರವಯುತ ಮತ್ತು ದೃಢವಾದ ವೈವಾಹಿಕ ಸಂಬಂಧಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಜಂಟಿ ಸಹಯೋಗದಲ್ಲಿ ''ತೇರೆ- ಮೇರೇ ಸಪ್ನೆ-ಕೂಡಿ ಬಾಳೋಣ'' ವಿವಾಹ ಪೂರ್ವ ಸಂವಹನ ಯೋಜನೆ (ಪಿಎಂಸಿಸಿ) ಜಾರಿಗೆ ತರಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.
ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸಾಂತ್ವನ ಕೇಂದ್ರಗಳ ಸಲಹೆಗಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಯುವಜನರು ಮದುವೆಗೂ ಮುನ್ನ ಅಗತ್ಯ ಜೀವನ ಕೌಶಲ್ಯ ರೂಢಿಸಿಕೊಳ್ಳುವುದು, ಆರ್ಥಿಕ ಯೋಜನೆ ಮಾಡುವುದು ಹಾಗೂ ದೈನಂದಿನ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಕೇಂದ್ರಗಳು ಮಾರ್ಗದರ್ಶನ ನೀಡಲಿವೆ. ರಾಜ್ಯದ 178 ಸಾಂತ್ವನ ಕೇಂದ್ರಗಳ ಮೂಲಕ ಪಿಎಂಸಿಸಿ ಸ್ಥಾಪಿಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ರಹತ್ಕರ್ ಮಾತನಾಡಿ, ರಾಜ್ಯದ 178 ಕೇಂದ್ರಗಳ ಸೇರ್ಪಡೆಯೊಂದಿಗೆ, ರಾಷ್ಟ್ರೀಯ ಮಹಿಳಾ ಆಯೋಗ ದೇಶದ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 285ಕ್ಕೂ ಹೆಚ್ಚು ಕೇಂದ್ರಗಳಿಗೆ ಮಾರ್ಗದರ್ಶನ ನೀಡಿದಂತಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ನಡುವೆ ತಿಳಿವಳಿಕೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ನಿರ್ದೇಶಕಿ ಸ್ನೇಹಾ, ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್. ರೂಪಾ ಉಪಸ್ಥಿತರಿದ್ದರು.