;Resize=(412,232))
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಆರೋಗ್ಯದ ಕುರಿತಾದ ವೈದ್ಯಕೀಯ ವರದಿಯನ್ನು ಜೈಲಾಧಿಕಾರಿಗಳು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ವರದಿಯನ್ನು ಪರಿಶೀಲಿಸಿದ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶೆ ಸುಜಾತ ಎಂ. ಸಾಂಬ್ರಾಣಿ, ಆರೋಪಿಯ ಬೆನ್ನು ನೋವು ಉಪಶಮನಕ್ಕೆ ನಿಯಮಿತವಾಗಿ ಅಗತ್ಯ ಚಿಕಿತ್ಸೆ ನೀಡಬೇಕು. ಅಗತ್ಯ ಬಿದ್ದರೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಜೈಲಿನ ಮುಖ್ಯ ವೈದ್ಯಾಧಿಕಾರಿಗೆ ಸೂಚಿಸಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಿದರು.
ಇದೇ ವೇಳೆ ದರ್ಶನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ದರ್ಶನ್ ಪರ ವಕೀಲ ಹಸ್ಮತ್ ಪಾಷಾ ವಾದ ಮಂಡಿಸಿ, ಕಳೆದ 20 ದಿನಗಳಲ್ಲಿ ಕೇವಲ ಮೂರ್ನಾಲ್ಕು ಬಾರಿ ಮಾತ್ರ ದರ್ಶನ್‌ಗೆ ಫಿಸಿಯೋಥೆರಪಿ ಮಾಡಲಾಗಿದೆ. ಜೈಲಿನಲ್ಲಿನ ಸಮಸ್ಯೆ ಹೇಳಿಕೊಳ್ಳಲು ಯಾರು ಇಲ್ಲ. ದರ್ಶನ್‌ಗೆ ಅಗತ್ಯವಿರುವ ಇಂಜಕ್ಷನ್ ನೀಡಲು ಜೈಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.
ಕಳೆದ ಕೆಲ ವಾರಗಳಿಂದ ಬೆನ್ನು ನೋವಾಗುತ್ತಿದೆ. ಜೈಲಿನಲ್ಲಿ ಅಗತ್ಯವಾದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಗ್ಯ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಿತ್ತು. ಅದರಂತೆ ತಪಾಸಣೆ ನಡೆಸಿರುವ ವೈದ್ಯರು ಗುರುವಾರ ವರದಿ ಸಲ್ಲಿಸಿದ್ದಾರೆ.