ನಟ ಕಿಚ್ಚ ಸುದೀಪ್ ತಾಯಿ ಸರೋಜ ನಿಧನ - ಚಿತ್ರರಂಗದ ಗಣ್ಯರು, ಅಭಿಮಾನಿಗಳಿಂದ ಅಂತಿಮ ನಮನ

Published : Oct 21, 2024, 12:07 PM IST
Kiccha Sudeep Mother Passes Away

ಸಾರಾಂಶ

ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ (80) ಭಾನುವಾರ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಶನಿವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ

ಬೆಂಗಳೂರು : ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ (80) ಭಾನುವಾರ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಶನಿವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಜೆಪಿ ನಗರದಲ್ಲಿರುವ ಸುದೀಪ್‌ ಅವರ ನಿವಾಸದಲ್ಲಿ ಸರೋಜ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು. ಸಾವಿರಾರು ಸಂಖ್ಯೆಯಲ್ಲಿ ಸುದೀಪ್ ಅ‍ವರ ಅಭಿಮಾನಿಗಳು ನೆರೆದಿದ್ದರು. ಪಾರ್ಥಿವ ಶರೀರದ ಬಳಿಯೇ ದುಃಖಿತರಾಗಿ ಕಿಚ್ಚ ಸುದೀಪ್ ನಿಂತಿದ್ದರು. ಕುಟುಂಬ ವರ್ಗದ ನೋವನ್ನು ಕಂಡು ಬಂಧುಬಳಗ, ಅಭಿಮಾನಿ ಸಮೂಹ ಕಣ್ಣೀರುಗರೆದಿದ್ದು ಕಂಡುಬಂತು.

ಸಂಜೆ 6 ಗಂಟೆ ನಂತರ ಜೆಪಿ ನಗರದ ಸುದೀಪ್‌ ಅವರ ನಿವಾಸದಿಂದ ಮೆರವಣಿಗೆ ಮೂಲಕ ವಿಲ್ಸನ್ ಗಾರ್ಡನ್‌ ಚಿತಾಗಾರಕ್ಕೆ ಮೃತ ದೇಹವನ್ನು ತರಲಾಯಿತು. ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಿತು.

ಮೃತ ಸರೋಜ ಅವರು ಪತಿ ಸಂಜೀವ್, ಮೂವರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಧ್ರುವ ಸರ್ಜಾ, ರಾಘವೇಂದ್ರ ರಾಜ್‌ಕುಮಾರ್‌, ಎನ್.ಎಂ.ಸುರೇಶ್‌, ಸಾ.ರಾ.ಗೋವಿಂದು, ರಾಕ್‌ಲೈನ್‌ ವೆಂಕಟೇಶ್‌, ಉಮೇಶ್‌ ಬಣಕಾರ್‌, ಜಯಮಾಲ, ತಾರಾ, ರಕ್ಷಿತಾ, ಪ್ರೇಮ್‌, ದೇವರಾಜ್‌, ಡಾಲಿ ಧನಂಜಯ, ಯುವ ರಾಜ್‌ಕುಮಾರ್‌, ವಿನಯ್‌ ರಾಜ್‌ಕುಮಾರ್‌, ಲೂಸ್‌ ಮಾದ ಯೋಗೀಶ್‌, ಬಿಗ್‌ಬಾಸ್‌ ವಿನ್ನರ್‌ ಮಹೇಶ್‌, ಎನ್‌.ಕುಮಾರ್‌, ಸೂರಪ್ಪ ಬಾಬು, ನಾಗಣ್ಣ, ಕೀರ್ತಿರಾಜ್‌, ಸೃಜನ್‌ ಲೋಕೇಶ್‌ ಸೇರಿದಂತೆ ಹಲವು ಗಣ್ಯರು ಆಗಮಿಸಿ ಸರೋಜ ಅವರ ಅಂತಿಮ ದರ್ಶನ ಪಡೆದುಕೊಂಡರು.

ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಸಂತಾಪ

ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌ ಅವರು ನಟ ಸುದೀಪ್‌ ಅವರ ತಾಯಿಯ ನಿಧನಕ್ಕೆ ಸಂತಾಪ ಸಲ್ಲಿಸಿದ್ದಾರೆ. ಕನ್ನಡದಲ್ಲೇ ಸಂತಾಪ ಪತ್ರ ಬರೆದಿರುವ ಅವರು, ‘ಖ್ಯಾತ ನಟ ಸುದೀಪ್‌ ಅವರ ತಾಯಿ ನಿಧನರಾಗಿದ್ದಾರೆಂದು ತಿಳಿದು ಅತೀವ ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ತಮ್ಮ ಕುಟುಂಬದ ಬೆಳವಣಿಗೆಯಲ್ಲಿ ತಾಯಿಯ ಪ್ರಭಾವ ಹೆಚ್ಚು ಎಂದು ಸುದೀಪ್‌ ಹೇಳಿಕೊಂಡಿದ್ದರು. ಈಗ ತಾಯಿಯನ್ನು ಕಳೆದುಕೊಂಡ ದುಃಖದಿಂದ ಸುದೀಪ್‌ ಆದಷ್ಟು ಬೇಗ ಚೇತರಿಸಿಕೊಳ್ಳಲಿ’ ಎಂದಿದ್ದಾರೆ.

PREV

Recommended Stories

ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ