ನೆಡುತೋಪಿಗಾಗಿ ತಂದಿದ್ದ 5 ಲಕ್ಷ ಸಸಿಗಳು ನಾಶ : ಅರಣ್ಯ ಇಲಾಖೆಯಿಂದ ನಡೆಸಲಾದ ಸರ್ವೇ

ಸಾರಾಂಶ

ಅರಣ್ಯ ಸಚಿವರ ಸೂಚನೆ ಮೇರೆಗೆ ಅರಣ್ಯ ಇಲಾಖೆಯಿಂದ 2023-24ನೇ ಸಾಲಿನಲ್ಲಿ ನಿರ್ಮಿಸಲಾದ ನೆಡುತೋಪಿನ ಸರ್ವೇ ನಡೆಸಲಾಗಿದ್ದು, ಅದರಲ್ಲಿ ಕೇವಲ ಶೇ. 2.5ರಷ್ಟು ಸಸಿಗಳು ಒಂದು ವರ್ಷದಲ್ಲಿ ನಾಶವಾಗಿರುವುದು ಕಂಡು ಬಂದಿದೆ.

ಗಿರೀಶ್‌ ಗರಗ

 ಬೆಂಗಳೂರು : ರಾಜ್ಯದಲ್ಲಿ ಅರಣ್ಯ ಪ್ರಮಾಣ ಹೆಚ್ಚಿಸಲು ಅರಣ್ಯ ಇಲಾಖೆಯಿಂದ ಪ್ರತಿವರ್ಷ ಲಕ್ಷಾಂತರ ಸಸಿಗಳನ್ನು ನೆಟ್ಟು ನೆಡುತೋಪು ನಿರ್ಮಿಸಲಾಗುತ್ತದೆ. ಆದರೆ, ಆ ನೆಡುತೋಪುಗಳ ನಿರ್ವಹಣೆ ಕುರಿತಂತೆ ಸಮರ್ಪಕ ಮಾಹಿತಿ ದೊರೆಯುವುದಿಲ್ಲ. ಹೀಗಾಗಿ ಅರಣ್ಯ ಸಚಿವರ ಸೂಚನೆ ಮೇರೆಗೆ ಅರಣ್ಯ ಇಲಾಖೆಯಿಂದ 2023-24ನೇ ಸಾಲಿನಲ್ಲಿ ನಿರ್ಮಿಸಲಾದ ನೆಡುತೋಪಿನ ಸರ್ವೇ ನಡೆಸಲಾಗಿದ್ದು, ಅದರಲ್ಲಿ ಕೇವಲ ಶೇ. 2.5ರಷ್ಟು ಸಸಿಗಳು ಒಂದು ವರ್ಷದಲ್ಲಿ ನಾಶವಾಗಿರುವುದು ಕಂಡು ಬಂದಿದೆ.

ರಾಜ್ಯದ ಭೂ ಪ್ರದೇಶಕ್ಕೆ ತಕ್ಕಂತೆ ರಾಜ್ಯದಲ್ಲಿ ಶೇ.33ರಷ್ಟು ಅರಣ್ಯ ಹೊದಿಕೆ ಅಥವಾ ಹಸಿರು ಹೊದಿಕೆ ಇರಬೇಕು. ಆದರೆ, ಸದ್ಯ ರಾಜ್ಯದಲ್ಲಿ ಶೇ. 22ರಷ್ಟು ಮಾತ್ರ ಅರಣ್ಯ ಹೊದಿಕೆಯಿದೆ. ಅದನ್ನು ಹೆಚ್ಚಿಸುವ ಸಲುವಾಗಿ ಅರಣ್ಯ ಇಲಾಖೆ ಪ್ರತಿವರ್ಷ ಲಕ್ಷಾಂತರ ಸಸಿಗಳನ್ನು ನೆಟ್ಟು ನೆಡು ತೋಪು ನಿರ್ಮಿಸುತ್ತದೆ. ಅದರಂತೆ 2023-24ನೇ ಸಾಲಿನಲ್ಲಿ 2 ಕೋಟಿಗೂ ಹೆಚ್ಚಿನ ಸಸಿಗಳನ್ನು ನೆಟ್ಟು ನೆಡುತೋಪು ನಿರ್ಮಿಸಲಾಗಿದೆ. ಆದರೆ, ಈ ನೆಡುತೋಪುಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಎಲ್ಲ ನೆಡುತೋಪುಗಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ವಿಭಾಗವಾರು ಅಥವಾ ಅರಣ್ಯ ಇಲಾಖೆ ವೃತ್ತವಾರು ಪರಿಶೀಲನೆ ನಡೆಸಿ, ವರದಿ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಆ ವರದಿಯಲ್ಲಿರುವಂತೆ 5 ಲಕ್ಷಕ್ಕೂ ಹೆಚ್ಚಿನ ಸಸಿಗಳು ನಿರ್ವಹಣೆ ಕೊರತೆ ಅಥವಾ ಇನ್ನಿತರ ಕಾರಣಗಳಿಂದಾಗಿ ನಾಶವಾಗಿರುವುದು ಪತ್ತೆಯಾಗಿದೆ.

 2.32 ಕೋಟಿಗೂ ಹೆಚ್ಚಿನ ಸಸಿಗಳು: 

ಅರಣ್ಯ ಇಲಾಖೆಯ ವಿವಿಧ ವಿಭಾಗಗಳಿಂದ ನೀಡಿರುವ ವರದಿಯಂತೆ ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 2.32 ಕೋಟಿಗೂ ಹೆಚ್ಚಿನ ಸಸಿಗಳನ್ನು ನೆಟ್ಟು ಸಾವಿರಾರು ನೆಡುತೋಪುಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಭೂಮಿ, ಬೋಳುಗುಡ್ಡ, ರಸ್ತೆ ಬದಿ ಸೇರಿದಂತೆ ಖಾಸಗಿ ಒಡೆತನದ ಜಾಗಗಳಲ್ಲೂ ಸಸಿಗಳನ್ನು ನೆಡಲಾಗಿದೆ. ಈ ಸಸಿಗಳ ಸ್ಥಿತಿಗತಿಯನ್ನು ಆಯಾ ವಿಭಾಗದ ಅಥವಾ ವೃತ್ತ ವ್ಯಾಪ್ತಿಯ ಸ್ಥಳೀಯ ಅರಣ್ಯ ಸಿಬ್ಬಂದಿ, ಅಧಿಕಾರಿಗಳ ಜತೆಗೂಡಿ ವಲಯ ಅರಣ್ಯಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅದರ ವರದಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ. ಅದರಂತೆ ಸುಮಾರು 2.26 ಕೋಟಿಗೂ ಹೆಚ್ಚಿನ ಸಸಿಗಳು ಈಗಲೂ ಸುಸ್ಥಿತಿಯಲ್ಲಿದ್ದು, ಉಳಿದಂತೆ ಅಂದಾಜು 5.65 ಲಕ್ಷ ಸಸಿಗಳು ನಾಶವಾಗಿವೆ.

 ಶೇ. 10ರವರೆಗೆ ಸಸಿಗಳ ಬದಲಿ: 

ನೆಡುತೋಪು ನಿರ್ಮಾಣದ ನಂತರ ಕಾಲಕಾಲಕ್ಕೆ ಪರಿಶೀಲಿಸುವ ಸ್ಥಳೀಯ ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು, ಸಸಿಗಳು ನಾಶವಾದರೆ ಅದಕ್ಕೆ ಬದಲಾಗಿ ಹೊಸದಾಗಿ ಸಸಿಗಳನ್ನು ನೆಡುತ್ತಾರೆ. ಅದರಂತೆ ಪ್ರತಿವರ್ಷ ಅಂದಾಜು ಶೇ. 10ರಷ್ಟು ಸಸಿಗಳು ನಾಶವಾಗಲಿದ್ದು, ಅವುಗಳಿಗೆ ಬದಲಿಗೆ ಹೊಸ ಸಸಿಗಳನ್ನು ನೆಡಲಾಗುತ್ತದೆ. 2023-24ನೇ ಸಾಲಿನಲ್ಲೂ ಅದನ್ನು ಮಾಡಲಾಗಿದ್ದು, ಶೇ.10ರವರೆಗೆ ಅಂದರೆ 10 ಲಕ್ಷದವರೆಗೆ ಹೊಸ ಸಸಿಗಳನ್ನು ನೆಡಲಾಗಿದೆ. ಅದನ್ನು ಹೊರತುಪಡಿಸಿಯೂ 5.65 ಲಕ್ಷದಷ್ಟು ಸಸಿಗಳು ನಾಶವಾಗಿವೆ.

 140 ಕೋಟಿ ರು.ಗೂ ಹೆಚ್ಚಿನ ವ್ಯಯ 

ರಾಜ್ಯ ಅರಣ್ಯ ಇಲಾಖೆಯ 2023-24ನೇ ಸಾಲಿನ ವಾರ್ಷಿಕ ವರದಿಯ ಪ್ರಕಾರ ಕ್ಷೀಣಿತ ಅರಣ್ಯ ಅಭಿವೃದ್ಧಿಗಾಗಿ 82.79 ಕೋಟಿ ರು. ಮತ್ತು ಹಸಿರು ಆಯವ್ಯಯಕ್ಕಾಗಿ 62.35 ಕೋಟಿ ರು. ಸೇರಿ ಒಟ್ಟು 145.14 ಕೋಟಿ ರು. ಖರ್ಚು ಮಾಡಿದೆ. ಅಲ್ಲದೆ, 4,704 ಹೆಕ್ಟೇರ್‌ ಬೋಳುಗುಡ್ಡದಲ್ಲಿ ಹೊಸದಾಗಿ ನೆಡುತೋಪು ನಿರ್ಮಿಸಲಾಗಿದೆ. ಅದರ ಜತೆಗೆ ಕ್ಷೀಣಿತ ಅರಣ್ಯ ಅಭಿವೃದ್ಧಿ ಅಡಿ ವಿವಿಧೆಡೆ 455 ಹೆಕ್ಟೇರ್‌ ಹಾಗೂ ಹಸಿರು ಆಯವ್ಯಯದ ಅಡಿಯಲ್ಲಿ 356 ಹೆಕ್ಟೇರ್‌ ಭೂ ಪ್ರದೇಶದಲ್ಲಿ ಹೊಸದಾಗಿ ನೆಡುತೋಪು ನಿರ್ಮಿಸಲಾಗಿದೆ 

Share this article