ಸರ್ಕಾರಿ ಶಾಲೆ ದತ್ತು, ಅಭಿವೃದ್ಧಿಗೆ ನೆರವಾಗಿ: ಸಿಎಂ

Published : Nov 05, 2026, 12:04 PM IST
Government school

ಸಾರಾಂಶ

ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಷ್ಟು ಆರ್ಥಿಕವಾಗಿ ಸದೃಢವಾಗಿವೆ ಎಂಬುದು ಗೊತ್ತಿದೆ. ಹಾಗಾಗಿ ನಾಡಿನ ಎಲ್ಲಾ ಖಾಸಗಿ ಶಾಲೆಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ದತ್ತು ಅಥವಾ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕರೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಷ್ಟು ಆರ್ಥಿಕವಾಗಿ ಸದೃಢವಾಗಿವೆ ಎಂಬುದು ಗೊತ್ತಿದೆ. ಹಾಗಾಗಿ ನಾಡಿನ ಎಲ್ಲಾ ಖಾಸಗಿ ಶಾಲೆಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ದತ್ತು ಅಥವಾ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕರೆ ನೀಡಿದ್ದಾರೆ.

ಆರಂಭಿಕವಾಗಿ 1000 ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಗಾಗಿ ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಗುರಿ ಹೊಂದಿದ್ದೇವೆ. ಯಾವ ಶಾಲೆಗಳನ್ನು ದತ್ತು ಪಡೆಯಬೇಕು ಎನ್ನುವ ಆಯ್ಕೆಯನ್ನು ಸರ್ಕಾರ ಮಾಡುವುದಿಲ್ಲ. ಒಂದು ಖಾಸಗಿ ಶಾಲೆ 3 ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಅವಕಾಶವಿದೆ. ನಿಮ್ಮ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡಿ ಎಂದು ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ‌ ಬುಧವಾರ ನಡೆದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕಾ (ಸಿಎಸ್‌ಆರ್‌) ಪ್ರತಿನಿಧಿಗಳ ಸಭೆಯಲ್ಲಿ ‘ನಮ್ಮ ಶಾಲೆ ನಮ್ಮ‌ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರವು ಖಾಸಗಿ ಶಾಲೆಗಳ ವಿಚಾರವಾಗಿ ಮೃದು ಧೋರಣೆ ಹೊಂದಿದೆ. ಖಾಸಗಿ ಶಾಲೆಗಳನ್ನು ನಡೆಸುವುದು ಸುಲಭವಲ್ಲ. ಆ ಕಷ್ಟ ನನಗೆ ತಿಳಿದಿದೆ. ಅದೇ ರೀತಿ ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಆರ್ಥಿಕವಾಗಿ ಸದೃಢವಾಗಿವೆ ಎನ್ನುವ ವಿಚಾರ ನನ್ನ ಗಮನದಲ್ಲಿದೆ. ಖಾಸಗಿ ಶಾಲೆಗಳು 50 ಸಾವಿರದಿಂದ 2 ಲಕ್ಷದ ತನಕ ಶುಲ್ಕ ಪಡೆಯುತ್ತಿರುವುದರ ಬಗ್ಗೆ ನನಗೆ ಮಾಹಿತಿ ಇದೆ. 5-10 ಕೋಟಿ ರು. ಕೊಟ್ಟು ಕಟ್ಟಡಗಳನ್ನು ಕಟ್ಟಿಕೊಡಲು ಆಗದೇ ಇದ್ದರೆ ಪರವಾಗಿಲ್ಲ, ನಿಮ್ಮ ಶಾಲೆಯ ನೈಪುಣ್ಯ ಇರುವ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ಕಳುಹಿಸಿಕೊಡಿ. ನಿಮ್ಮ ಶಾಲೆಯಿಂದ 10 ಜನ ಶಿಕ್ಷಕರನ್ನು ಕೊಡಿ. ಅವರಿಗೆ ಸಂಬಳ ನೀವು ಕೊಡಿ. ಖಾಸಗಿ ಶಾಲೆಯ ಬಸ್ಸನ್ನು ಮಾರಲು ಹೋಗಬೇಡಿ. ಸರ್ಕಾರಿ ಶಾಲೆಗೆ ಕೊಡಿ. ಲ್ಯಾಬ್ ವಸ್ತುಗಳು, ಕಂಪ್ಯೂಟರ್ ಗಳನ್ನು ಕೊಟ್ಟರೆ ಅನುಕೂಲ ಆಗುತ್ತದೆ. ಇದೊಂದು ರೀತಿ ಜ್ಞಾನ ವಿನಿಮಯ ಎಂದರು.

ಸರ್ಕಾರಿ ಶಾಲೆ ಮೊದಲ ಆದ್ಯತೆಯಾಗಲಿ:

ರಾಜ್ಯದಲ್ಲಿ ವಾರ್ಷಿಕ ಒಟ್ಟು 8,800 ಕೋಟಿ ಸಿಎಸ್‌ಆರ್ ನಿಧಿ ಇದೆ. ರಾಜ್ಯದ ಎಲ್ಲಾ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಿ, ಸಿಎಸ್‌ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸುವುದೇ ಮೊದಲ ಆದ್ಯತೆ ಆಗಬೇಕು ಎಂದು ಮನವಿ ಮಾಡಿದ್ದೇನೆ. ಅವರು ಈಗಾಗಲೇ ಕೆಲಸ ಆರಂಭಗೊಳಿಸಿದ್ದಾರೆ. ಈಗ ನಿಮ್ಮ ಸರದಿ ಎಂದು ಆಗಮಿಸಿದ್ದ ಖಾಸಗಿ ಆಡಳಿತ ಮಂಡಳಿಯವರಿಗೆ ಸೂಚಿಸಿದರು. ಖಾಸಗಿ ಕಂಪನಿಗಳು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಬಳಸುವ ಸಿಎಸ್‌ಆರ್‌ ಹಣವನ್ನು ಯಾವುದೇ ಕಾರಣಕ್ಕೂ ಸರ್ಕಾರ ಪಡೆಯುವುದಿಲ್ಲ. ಕಟ್ಟಡ ನಿರ್ಮಾಣದ ಪ್ಲ್ಯಾನ್‌ ಮಾತ್ರ ಸರ್ಕಾರ ಕೊಡುತ್ತದೆ ಎಂದು ಶಿವಕುಮಾರ್‌ ಇದೇ ವೇಳೆ ಸ್ಪಷ್ಟಪಡಿಸಿದರು.

15 ಒಡಂಬಡಿಕೆಗೆ ಸಹಿ: ಕಾರ್ಯಕ್ರಮದಲ್ಲಿ 56 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 206.10 ಕೋಟಿ ರು.ಗಳ ಮೊತ್ತದ 15 ಒಡಂಬಡಿಕೆಗಳಿಗೆ ಸಿಎಂ ಸಮ್ಮುಖದಲ್ಲಿ ವಿವಿಧ ಖಾಸಗಿ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದರು. ಈಗಾಗಲೇ ಈ ವರ್ಷ 85 ಕೋಟಿ ರು.ವೆಚ್ಚದಲ್ಲಿ 33 ಶಾಲೆಗಳನ್ನು ಅಭಿವೃದ್ಧಿಪಡಿಸುವ 18 ಒಡಂಬಡಿಕೆಗಳಿಗೆ ವಿವಿಧ ಖಾಸಗಿ ಸಂಸ್ಥೆಗಳು ಸಹಿ ಹಾಕಿದ್ದವು. ಇದೀಗ ಅವುಗಳ ಸಾಲಿಗೆ ಇನ್ನೂ 15 ಒಡಂಬಡಿಕೆಗಳು ಸೇರ್ಪಡೆಯಾಗಿವೆ. ಇನ್ನು, 64 ಕೋಟಿ ರು. ವೆಚ್ಚದಲ್ಲಿ 23 ಶಾಲೆಗಳ ಅಭಿವೃದ್ಧಿಗೆ ಹೊಸ 12 ಒಡಂಬಡಿಕೆಗೆ ಶೀಘ್ರವೇ ಸಹಿ ಬೀಳಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಆರಂಭಿಕವಾಗಿ 1000 ಶಾಲೆಗಳ ಜೋಡಣೆ ಗುರಿ:

ಖಾಸಗಿ ಶಾಲೆಗಳು ಈ ರಾಜ್ಯಕ್ಕೆ ಕೀರ್ತಿ ತಂದಿವೆ. ಅಲ್ಲಿನ ಗುಣಮಟ್ಟದ ಶಿಕ್ಷಣ, ಸಾಮರ್ಥ್ಯ ಬಹಳ ಚೆನ್ನಾಗಿದೆ. ಅದರ ಸ್ವಲ ಭಾಗವನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದರೆ ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಬರುವುದನ್ನು ತಪ್ಪಿಸಬಹುದು. ಹಾಗಾಗಿ ಒಟ್ಟು 2 ಸಾವಿರ ಸರ್ಕಾರಿ ಶಾಲೆಗಳನ್ನು ಈ ರೀತಿ ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆ ಇದೆ. ಆರಂಭದಲ್ಲಿ 1 ಸಾವಿರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಾಲೆಗಳನ್ನು ಜೋಡಿಸುವ ಗುರಿ ಹೊಂದಿದ್ದೇವೆ ಎಂದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರಲ್ಲಿ ಕನ್ನಡಿಗರ ಭೂಮಿ ಪರಭಾಷಿಕರ ಪಾಲು
ಕಡಿತೀವಿ, ಬಡಿತೀವಿ ಅನ್ನೋವ್ರಿಗೆ ಕಂಬಿ ಎಣಿಸ್ತೀವಿ: ಖರ್ಗೆ!