ನಗರದ ಹಲವೆಡೆ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾದರೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಾತ್ರ ಇದಕ್ಕೆ ಅಪವಾದ. ಏಕೆಂದರೆ ವೈಜ್ಞಾನಿಕವಾಗಿ ಹಲವು ರೀತಿಯಲ್ಲಿ ಮಳೆ ನೀರು ಕೊಯ್ಲು ಅನುಸರಿಸಿದ್ದೇ ಇದಕ್ಕೆ ಕಾರಣ.
ಬೆಂಗಳೂರು : ನಗರದ ಹಲವೆಡೆ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾದರೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಾತ್ರ ಇದಕ್ಕೆ ಅಪವಾದ. ಏಕೆಂದರೆ ವೈಜ್ಞಾನಿಕವಾಗಿ ಹಲವು ರೀತಿಯಲ್ಲಿ ಮಳೆ ನೀರು ಕೊಯ್ಲು ಅನುಸರಿಸಿದ್ದೇ ಇದಕ್ಕೆ ಕಾರಣ.
ವಿವಿಯ ಮಳೆ ನೀರು ಕೊಯ್ಲು ವಿಧಾನದಿಂದ ಶೇಖರಣೆಯಾದ ನೀರನ್ನು ಕಚೇರಿ ಮತ್ತು ಸಂಶೋಧನಾ ತಾಕುಗಳಿಗೆ ಉಪಯೋಗಿಸಲಾಗುತ್ತಿದೆ. ಜಿಕೆವಿಕೆ ಕ್ಯಾಂಪಸ್‌ನಲ್ಲಿ ಸುಮಾರು 30 ಕೊಳವೆ ಬಾವಿಗಳಿದ್ದು, ಜಲ ಮರು ಪೂರಣದಿಂದಾಗಿ ಬರಗಾಲದಲ್ಲೂ ಯಾವುದೇ ಕೊಳವೆಬಾವಿ ವಿಫಲವಾಗಿಲ್ಲ ಎಂಬುದು ವಿಶೇಷವಾಗಿದೆ.
ಚಾವಣಿ ಮೇಲೆ ಬಿದ್ದ ಮಳೆಯ ನೀರನ್ನು ಪೈಪಿನ ಮೂಲಕ ಸಂಗ್ರಹಿಸಿ ಧೂಳು, ಕಸ, ಕಡ್ಡಿಗಳನ್ನು ಶೋಧಿಸಲಾಗಿದೆ. ಇದರಿಂದಾಗಿ ಆ್ಯಸಿಡ್ ಮಳೆ ನೀರು ನ್ಯೂಟ್ರಲ್ ನೀರಾಗಿ ಪರಿವರ್ತನೆಗೊಂಡು ಮನೆ ಅಥವಾ ಕಚೇರಿ ಬಳಕೆಗೆ ಯೋಗ್ಯವಾಗುತ್ತದೆ. ಈ ರೀತಿ ಶೋಧಿಸಿದ ನೀರನ್ನು ಪೈಪ್ ಮೂಲಕ ಇಂಗು ಗುಂಡಿಗೂ ತಲುಪಿಸಲಾಗಿದೆ. ನೀರು ಇಂಗಿ ಉಳಿದದ್ದು ಕೊಳವೆ ಬಾವಿ ಮೂಲಕ ಅಂತರ್ಜಲ ಸೇರಿದೆ. ಫಿಲ್ಟರ್ ಘಟಕಗಳ ಮೂಲಕವೂ ಕೊಳವೆ ಬಾವಿ ಜಲ ಮರು ಪೂರಣ ಮಾಡಲಾಗಿದೆ.
‘ಬೆಂಗಳೂರಿನ ಶೇ.78ರಷ್ಟು ಭೂಭಾಗ ಕಟ್ಟಡ, ರಸ್ತೆ, ಕಾಲುದಾರಿಗಳಿಂದ ಆವರಿಸಲ್ಪಟ್ಟಿದೆ. ಉಳಿದ ಭಾಗ ಮಣ್ಣಿನಿಂದ ಕೂಡಿದೆ. ಮಳೆ ನೀರಿನ ಶೇ.70 ರಿಂದ 75 ರಷ್ಟು ಪ್ರಮಾಣ ಒಳ ಚರಂಡಿ ಸೇರಿದರೆ, ಶೇ.15 ರಿಂದ 20 ಭೂಮಿಯಲ್ಲಿ ಇಂಗುತ್ತದೆ. ಉಳಿದ 5 ರಿಂದ 10 ಭಾಗ ಆವಿಯಾಗುತ್ತದೆ. 30/40 ಅಡಿ ಮನೆಯ ಚಾವಣಿಯಲ್ಲಿ ಮಳೆ ನೀರು ಕೊಯ್ಲು ಮಾಡಿದರೆ 4 ಜನರಿರುವ ಕುಟುಂಬಕ್ಕೆ 6 ತಿಂಗಳಿಗಾಗುವಷ್ಟು ನೀರು ಸಿಗುತ್ತದೆ. ಮಳೆ ನೀರನ್ನು ಸಮರ್ಥವಾಗಿ ಬಳಸಿದರೆ ಬೃಹತ್ ಬೆಂಗಳೂರನ್ನು ಕಾಡುವ ನೀರಿನ ಸಮಸ್ಯೆಯನ್ನು ಹೊಡೆದೊಡಿಸಬಹುದು’ ಎಂದು ವಿವಿಯ ಮಣ್ಣು ಮತ್ತು ನೀರು ಸಂರಕ್ಷಣಾ ಅಭಿಯಂತರ ಡಾ। ಕೆ.ದೇವರಾಜ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಮಳೆಯ ‘ಲೆಕ್ಕಾಚಾರ’
‘ಬೆಂಗಳೂರಿನಲ್ಲಿ ಪ್ರತಿ ವರ್ಷ ಸರಾಸರಿ 970 ಮಿ.ಮೀ. ಮಳೆಯಾಗುತ್ತದೆ. ಇದರಲ್ಲಿ ಏಪ್ರಿಲ್‌ನಿಂದ ನವೆಂಬರ್‌ವರೆಗೂ 8 ತಿಂಗಳಲ್ಲಿ 880 ಮಿ.ಮೀ. ಮಳೆ ಬರುತ್ತದೆ. ಬೆಂಗಳೂರಿನ ಒಟ್ಟು ಭೌಗೋಳಿಕ ವಿಸ್ತೀರ್ಣ 2190 ಚದರ ಕಿ.ಮೀ.ಗಳಾಗಿದ್ದು ಪ್ರತಿ ವರ್ಷ ಸುಮಾರು 20,80,500 ಮಿಲಿಯನ್ ಲೀಟರ್ (5700 ಎಂಎಲ್‌ಡಿ) ಮಳೆಯಾಗುತ್ತದೆ. ನಗರದಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು 2100 ಎಂಎಲ್‌ಡಿ ನೀರಿನ ಅಗತ್ಯವಿದೆ. ಆದ್ದರಿಂದ ಸರಿಯಾದ ರೀತಿಯಲ್ಲಿ ಮಳೆ ನೀರು ಕೊಯ್ಲು ಮಾಡಿದರೆ ಬೆಂಗಳೂರಿನ ನೀರಿನ ಸಮಸ್ಯೆ ನೀಗುತ್ತದೆ’ ಎನ್ನುತ್ತಾರೆ ಡಾ। ಕೆ.ದೇವರಾಜ.