ಕೋಳಿ ಮಾಂಸಕ್ಕಿಂತಲೂ ಬೀನ್ಸ್‌ ಕಾಸ್ಟ್ಲಿ!

Published : Apr 30, 2024, 07:14 AM IST
vegetable

ಸಾರಾಂಶ

ದಾಖಲೆ ಮಟ್ಟದಲ್ಲಿ ಏರುತ್ತಿರುವ ಬಿಸಿಲಿನ ತಾಪ ಹಾಗೂ ಪೂರೈಕೆಯಲ್ಲಿ ತೀವ್ರ ಕುಸಿತವಾಗಿರುವ ಕಾರಣ ಎಲ್ಲ ತರಕಾರಿಗಳ ಬೆಲೆ ಹೆಚ್ಚಿದ್ದು, ಅದರಲ್ಲೂ ಬೀನ್ಸ್‌ ಬೆಲೆ ಬರೋಬ್ಬರಿ ₹200 ಗಡಿ ದಾಟಿದ್ದು ಗ್ರಾಹಕರನ್ನು ಹೌಹಾರುವಂತೆ ಮಾಡುತ್ತಿದೆ.  

ಬೆಂಗಳೂರು :  ದಾಖಲೆ ಮಟ್ಟದಲ್ಲಿ ಏರುತ್ತಿರುವ ಬಿಸಿಲಿನ ತಾಪ ಹಾಗೂ ಪೂರೈಕೆಯಲ್ಲಿ ತೀವ್ರ ಕುಸಿತವಾಗಿರುವ ಕಾರಣ ಎಲ್ಲ ತರಕಾರಿಗಳ ಬೆಲೆ ಹೆಚ್ಚಿದ್ದು, ಅದರಲ್ಲೂ ಬೀನ್ಸ್‌ ಬೆಲೆ ಬರೋಬ್ಬರಿ ₹200 ಗಡಿ ದಾಟಿದ್ದು ಗ್ರಾಹಕರನ್ನು ಹೌಹಾರುವಂತೆ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಕೋಳಿಯ ಬೆಲೆ ₹170 ಆಸುಪಾಸಿನಲ್ಲಿದೆ. ಅದಕ್ಕಿಂತಲೂ ಬೀನ್ಸ್‌ನ ಬೆಲೆ ಹೆಚ್ಚಿದೆ.

ಏರುತ್ತಲೇ ಇರುವ ತರಕಾರಿ ಬೆಲೆ ಜನರ ನಿತ್ಯದ ಜೀವನದಲ್ಲಿ ತಳಮಳಕ್ಕೆ ಕಾರಣವಾಗಿದೆ. ಮಳೆ ಪ್ರಾರಂಭವಾಗುವ ತನಕ ಈ ಬೆಲೆ ಇಳಿಕೆ ಕಾಣುವುದಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಈಗಾಗಲೇ ಒಂದು ಕೆಜಿ ತರಕಾರಿ ಕೊಳ್ಳುವಲ್ಲಿ ಅರ್ಧ ಕೇಜಿ ಖರೀದಿ ಮಾಡುವ ಸ್ಥಿತಿಗೆ ಗ್ರಾಹಕರು ಬಂದಿದ್ದಾರೆ.

ರಾಜಧಾನಿಗೆ ರಾಮನಗರ, ಮಾಗಡಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ನಂದಗುಡಿ, ಕನಕಪುರ ಸೇರಿದಂತೆ ವಿವಿಧೆಡೆಯಿಂದ ಪೂರೈಕೆ ಆಗುವ ತರಕಾರಿ ಪ್ರಸ್ತುತ ಗಣನೀಯವಾಗಿ ಇಳಿಮುಖವಾಗಿದೆ. ಬಿರುಬಿಸಿಲು, ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ಬತ್ತಿರುವುದು ತರಕಾರಿ ಬೆಳೆಗಳ ಇಳುವರಿ ತಗ್ಗಿಸಿದೆ. ಹೀಗಾಗಿ ಪೂರೈಕೆ ಕಡಿಮೆಯಾಗಿದೆ.

ದಾವಣಗೆರೆ, ಪರರಾಜ್ಯಗಳಿಂದ ತರಕಾರಿ ಬರುತ್ತಿದ್ದು, ಸಾಗಾಟದ ವೆಚ್ಚದಿಂದ ಗ್ರಾಹಕರಿಗೆ ಬೆಲೆ ಇನ್ನಷ್ಟು ಹೊರೆಯಾಗಿಸುತ್ತಿವೆ. ಸಗಟು ಮಾರುಕಟ್ಟೆಯೂ ಬೆಲೆ ಏರಿಕೆಗೆ ನಲುಗಿದೆ ಎಂದು ಕಲಾಸಿಪಾಳ್ಯ ಮಾರುಕಟ್ಟೆಯ ವರ್ತಕ ರಾಜು ಹೇಳುತ್ತಾರೆ.

ಬೀನ್ಸ್ ಬೆಳೆಯಲು ಹೆಚ್ಚಿನ ನೀರು ಬೇಕು. ಸದ್ಯದ ಬರ ಪರಿಸ್ಥಿತಿಯಲ್ಲಿ ಹೆಚ್ಚಿನದಾಗಿ ಬೀನ್ಸ್ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬೆಲೆ ₹180 ರಿಂದ ₹200 ರವರೆಗೂ ಏರಿಕೆಯಾಗಿದೆ. ಸೊಪ್ಪು,‌ ಮೂಲಂಗಿ, ನವಿಲುಕೋಸು, ಹೀರೆಕಾಯಿ ಬೆಲೆಗಳು ಹೆಚ್ಚುತ್ತಿವೆ. ಸದ್ಯ ಕೇಜಿಗೆ ಇವುಗಳ ಬೆಲೆ ₹60 ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ತಿಳಿಸಿದರು.

ಈ ನಡುವೆ ಚಿಲ್ಲರೆ ವ್ಯಾಪಾರಿಗಳು ಸಗಟು ಮಾರುಕಟ್ಟೆಯಿಂದ ತರಕಾರಿ ತಂದು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಹೆಚ್ಚಳದಿಂದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ತಂದ ತರಕಾರಿಗಳು ಒಣಗಿ ಹೋಗುತ್ತವೆ. ಹಾಗಾಗಿ ಕೆಲ ದಿನ ಮಾರಾಟ ಮಾಡದಿರುವುದೆ ಒಳಿತು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಮಳೆ ಆರಂಭವಾಗಿ ಎರಡು ತಿಂಗಳ ಬಳಿಕವೇ ಬೆಲೆ ಇಳಿಯಬಹುದು. ಬೆಲೆ ಏರಿಕೆ ಗ್ರಾಹಕರನ್ನು ಎಷ್ಟು ಕಂಗೆಡಿಸಿದೆಯೋ ಅಷ್ಟೇ ಚಿಲ್ಲರೆ ವ್ಯಾಪಾರಿಗಳನ್ನೂ ಚಿಂತೆಗೆ ನೂಕಿದೆ ಎಂದು ಮೂಡಲಪಾಳ್ಯದ ತರಕಾರಿ ವ್ಯಾಪಾರಸ್ಥ ಕೆ.ಎಂ.ನಾಗೇಶ್‌ ಹೇಳುತ್ತಾರೆ.

---ತರಕಾರಿ ದರ (ಕೇಜಿ)

ನಾಟಿ ಬೀನ್ಸ್‌ ₹200

ಬೀನ್ಸ್ ₹140

ಈರುಳ್ಳಿ ₹40

ಬೀಟ್‌ರೂಟ್‌ ₹80

ಬೆಂಡೆಕಾಯಿ ₹80

ನವಿಲುಕೋಸು ₹80

ಹೀರೆಕಾಯಿ ₹80

ಟೊಮೆಟೋ ₹40

ಆಲೂಗಡ್ಡೆ ₹50

ಮೆಣಸಿನಕಾಯಿ ₹90

ಕ್ಯಾಪ್ಸಿಕಂ ₹80

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರೈತರ ಅಹವಾಲುಗಳ ತ್ವರಿತ ವಿಲೇವಾರಿಗೆ ಕ್ರಮ: ಜಿಲ್ಲಾಧಿಕಾರಿ
ಕೋಗಿಲು: 25 ಮಂದಿಗಷ್ಟೇ ಇಂದು ಅದೃಷ್ಟದ ಬಾಗಿಲು