ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಜಿಲ್ಲೆಯ ರೈತರ ಕುಂದುಕೊರತೆಗಳ ಸಭೆ ಆಯೋಜಿಸಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಅವರ ಅಹವಾಲು ಸ್ವೀಕರಿಸಲಾಯಿತು.

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಜಿಲ್ಲೆಯ ರೈತರ ಕುಂದುಕೊರತೆಗಳ ಸಭೆ ಆಯೋಜಿಸಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಅವರ ಅಹವಾಲು ಸ್ವೀಕರಿಸಲಾಯಿತು.

ರೈತರು ಜಮೀನುಗಳ ಪವತಿ ಖಾತೆ, ಪೋಡಿ ದುರಸ್ತಿ, ಪಹಣಿಯಲ್ಲಿ ಹೆಸರು ಬದಲಾವಣೆ ಸಮಸ್ಯೆ, ರೈತರ ಜಮೀನುಗಳಿಗೆ ರಸ್ತೆ, ಸ್ಮಶಾನ ಜಾಗದ ಒತ್ತುವರಿ, ಅಕ್ರಮ ಮದ್ಯ ಮಾರಾಟ, ಕೆರೆ, ಸ್ಮಶಾನ, ಸರ್ಕಾರಿ ಜಾಗ ಒತ್ತುವರಿ, ಕಳಪೆ ಕಾಮಗಾರಿ, ಗಣಿಗಾರಿಕೆ, ತ್ಯಾಜ್ಯ ಘಟಕ ಸರಿಪಡಿಸುವಿಕೆ , ಆಸ್ಪತ್ರೆಗಳ ಅವ್ಯವಸ್ಥೆ, ಶಾಶ್ವತ ಕೃಷಿ ವಲಯ, ಕುಡಿಯುವ ನೀರು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ರೈತರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಅಕ್ರಮ ಗಣಿಗಾರಿಕೆ ತಡೆಯಿರಿ:

ಜಿಲ್ಲಾದ್ಯಂತ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೊಂದರೆ ಆಗುತ್ತಿದೆ. ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೈಲಗೆರೆಯಲ್ಲಿ ನಿಯಮಗಳನ್ನು ಮೀರಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಸುಮಾರು 350 ಅಡಿ ಆಳ ತೆಗೆದಿದ್ದಾರೆ. ಗಣಿ ಧೂಳಿನಿಂದ ರೇಷ್ಮೆ ಬೆಳೆ ಬೆಳೆಯಲು ಆಗುತ್ತಿಲ್ಲ, ನೆಮ್ಮದಿಯಿಂದ ಮನೆಯಲ್ಲಿ ಮಲಗಲು ಸಾಧ್ಯವಾಗುತ್ತಿಲ್ಲ, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಮನವಿ ಮಾಡಿದರು.

ರೈತರಿಗೆ ಸಮರ್ಪಕ ವಿದ್ಯುತ್ ಸಂಪರ್ಕ ಒದಗಿಸಿ:

ಕೃಷಿ ಜಮೀನುಗಳಲ್ಲಿ ವಿದ್ಯುತ್ ಪರಿವರ್ತಕ (ಟಿಸಿ) ಕೆಟ್ಟರೆ ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ದಿನ ಗಟ್ಟಲೇ ಕಾಯಿಸುತ್ತಾರೆ, ರೈತರ ಪಂಪ್ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗಬೇಕು. ಹಗಲಿನಲ್ಲಿ ಹೆಚ್ಚು ಕರೆಂಟ್ ಕೊಟ್ಟರೇ ಒಳ್ಳೆಯದು ಎಂದು ರೈತರೊಬ್ಬರು ಹೇಳಿದರು.

ಅಕ್ರಮ ಸಾರಾಯಿ ಮಾರಾಟ ನಿಷೇಧಿಸಿ:

ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮೀಣ ಕುಟುಂಬಗಳಲ್ಲಿ ಕುಡುಕರಿಂದ ಮಹಿಳೆಯರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಸಾರಾಯಿ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸಾರಾಯಿ ಮಾರಾಟ ನಿಷೇಧಮಾಡಿ ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.

ಫಲಾನುಭವಿಗಳ ಹೆಚ್ಚಳಕ್ಕೆ ಮನವಿ:

ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಮೂಲಕ ಸಿಗುವ ಸರ್ಕಾರಿ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆ ಗುರಿ ನಿರ್ದಿಷ್ಟವಾಗಿರುತ್ತದೆ. ಹಾಗಾಗಿ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬೇಕು ಎಂದು ರೈತರು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ರೈತರ ಅಹವಾಲುಗಳನ್ನು ಆಲಿಸಿದ ನಂತರ ಮಾತನಾಡಿ ಸರ್ಕಾರಿ ಜಾಗ, ಕೆರೆ, ರಾಜಕಾಲುವೆ, ಸ್ಮಶಾನ, ರಸ್ತೆ ಒತ್ತುವರಿಗೆ ಸಂಬಂಧಿಸಿದಂತೆ ದಾಖಲೆ ನೀಡಿದರೆ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಬಲ ಬೆಲೆ ಯೋಜನೆಯಡಿ ರಾಗಿ ನೋಂದಣಿಗೆ ಜಿಲ್ಲೆಯಲ್ಲಿ ಇನ್ನು ಸುಮಾರು 2500 ರೈತರು ಬಾಕಿ ಉಳಿದಿದ್ದಾರೆ ಎಂದು ತಿಳಿಸಿದ್ದೀರಿ. ನೋಂದಣಿ ಪುನರಾರಂಭಿಸಲು ರೈತರು ತಿಳಿಸಿದ್ದು ಈಗಾಗಲೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದರು.

ಕೃಷಿ ಜಮೀನುಗಳಿಗೆ ಕಾಡು ಪ್ರಾಣಿಗಳ ಹಾವಳಿಯು ಹೆಚ್ಚಾಗಿರುವ ಕುರಿತು ಅರಣ್ಯ ಅಧಿಕಾರಿಗಳ ಜೊತೆ ಚರ್ಚಿಸಿ, ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು. ಒಟ್ಟಾರೆಯಾಗಿ ರೈತರು ಸಲ್ಲಿಸಿರುವ ಅಹವಾಲುಗಳಿಗೆ ಬಂಧಿಸಿದಂತೆ ಕಾನೂನು ವ್ಯಾಪ್ತಿಯಲ್ಲಿ ಬರುವ ಅರ್ಜಿಗಳು ಬಿಟ್ಟು ಉಳಿದ ಅರ್ಜಿಗಳಿಗೆ ಮೂರು ತಿಂಗಳ ಒಳಗಾಗಿ ತ್ವರಿತ ಪರಿಹಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಸಿಇಒ ಡಾ‌.ಕೆ.ಎನ್ ಅನುರಾಧ, ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ಚಂದ್ರಕಾಂತ್ ಎಂ.ವಿ, ಎಎಸ್ಪಿ ನಾಗರಾಜ್, ಡಿವೈಎಸ್ಪಿ ಪಾಂಡುರಂಗ, ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ಸಂಘಟನೆಗಳ ಅಧ್ಯಕ್ಷರು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

7ಕೆಡಿಬಿಪಿ1- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ನಡೆದ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾತನಾಡಿದರು.

--

7ಕೆಡಿಬಿಪಿ2- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ನಡೆದ ರೈತರ ಸಭೆಯಲ್ಲಿ ಹಲವು ರೈತ ಮುಖಂಡರು ತಮ್ಮ ಅಹವಾಲು ಹಂಚಿಕೊಂಡರು.