;Resize=(412,232))
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಲಸಿಗರ ಸ್ವರ್ಗವಾಗುತ್ತಿರುವ ಬೆಂಗಳೂರು ಸಹ ವಾಯು ಮಾಲಿನ್ಯದಲ್ಲಿ 2ನೇ ದೆಹಲಿ ಆಗುತ್ತಿದ್ದು, ನಗರದ ಹಲವೆಡೆ ವಾಯು ಗುಣಮಟ್ಟ ಹದಗೆಡತೊಡಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ-ಅಂಶಗಳು.
ದೆಹಲಿಯಲ್ಲಿ ಈಗಾಗಲೇ ವಾಯು ಗುಣಮಟ್ಟ 400ಕ್ಕೂ ಅಧಿಕ ಎಕ್ಯೂಐ ದಾಖಲಾಗಿದ್ದು, ದೆಹಲಿಯ ನಿವಾಸಿಗಳು ಇದೀಗ ಶುದ್ಧ ಗಾಳಿಗಾಗಿ ಅರಸುತ್ತಾ ಬೆಂಗಳೂರು, ಪುಣೆ ಸೇರಿದಂತೆ ವಿವಿಧ ನಗರ ಕಡೆ ಗುಳೆ ಹೊರಟಿದ್ದಾರೆ. ಆದರೆ, ವಾಸ್ತವಾಗಿ ದೆಹಲಿಯಷ್ಟು ಅಲ್ಲದಿದ್ದರೂ ಬೆಂಗಳೂರಿನಲ್ಲಿಯೂ ದಿನದಿಂದ ದಿನಕ್ಕೆ ವಾಯು ಗುಣಮಟ್ಟ ಕುಸಿಯುತ್ತಿರುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತಿವೆ.
ಕಳೆದ ಸೆಪ್ಟಂಬರ್‌ನಲ್ಲಿ ಬೆಂಗಳೂರಿನ 11 ವಾಯು ಮಾಲಿನ್ಯ ಮಾಪನ ಕೇಂದ್ರಗಳ ಪೈಕಿ ಸಿಲ್ಕ್ ಬೋರ್ಡ್ ಹಾಗೂ ಮೈಸೂರು ರಸ್ತೆಯ ಕವಿಕಾದಲ್ಲಿನ ಮಾಪನ ಕೇಂದ್ರದಲ್ಲಿ ಮಾತ್ರ 100ಕ್ಕಿಂತ ಅಧಿಕ ಎಕ್ಯೂಐ ದಾಖಲಾಗಿತ್ತು. ಒಂದೇ ಒಂದು ತಿಂಗಳ ಹಂತದಲ್ಲಿ ನವೆಂಬರ್‌ನಲ್ಲಿ ಚಳಿ ಆರಂಭಗೊಳ್ಳುತ್ತಿದಂತೆ ಬಸವೇಶ್ವರ ನಗರ, ಜಿಗಣಿ ಕೈಗಾರಿಕಾ ಪ್ರದೇಶ ಹಾಗೂ ಕಸ್ತೂರಿ ನಗರದ ಮಾಪನ ಕೇಂದ್ರಗಳಲ್ಲಿ ಮಾತ್ರ 100ಕ್ಕಿಂತ ಕಡಿಮೆ ಎಕ್ಯೂಐ ದಾಖಲಾಗಿದೆ. ಉಳಿದೆಲ್ಲಾ ಕಡೆ 100ಕ್ಕಿಂತ ಹೆಚ್ಚು ಎಕ್ಯೂಐ ದಾಖಲಾಗಿದೆ.
ಚಳಿ ಹೆಚ್ಚಾಗುತ್ತಿದಂತೆ ವಾಯು ಮಾಲಿನ್ಯದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಲಕ್ಷಣ ದಟ್ಟವಾಗಿದ್ದು, ಉಸಿರಾಟ ಸಮಸ್ಯೆ, ಶ್ವಾಸಕೋಶ ಸಮಸ್ಯೆ, ತೀವ್ರ ಅನಾರೋಗ್ಯ ಸಮಸ್ಯೆ ಅವರಿಗೆ ತೊಂದರೆ ಎದುರಾಗುವ ಭೀತಿ ಎದುರಾಗಿದೆ.
ಸಾಮಾನ್ಯವಾಗಿ ವಾತಾವರಣದಲ್ಲಿ ಶೇ.20ಕ್ಕಿಂತ ಅಧಿಕ ಆಮ್ಲಜನಕ ಇರಬೇಕು. ಬೆಂಗಳೂರಿನಲ್ಲಿ ನಿರಂತರ ಅರಣ್ಯ ನಾಶ, ಕಾಂಕ್ರೀಟಿಕರಣ, ನಗರೀಕರಣ, ವಾಹನ ದಟ್ಟಣೆ ಸೇರಿದಂತೆ ಮೊದಲಾದ ಕಾರಣಕ್ಕೆ ಆಮ್ಲಜನಕದ ಪ್ರಮಾಣ ಈಗಾಗಲೇ ಶೇ.19ಕ್ಕಿಂತ ಕಡಿಮೆ ಆಗಿದ್ದು, ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ಸಹ ಎರಡನೇ ದೆಹಲಿ ಆಗುವುದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಭೂ ವಿಜ್ಞಾನಿ ಹಾಗೂ ಪರಿಸರವಾದಿ ಪ್ರೊ.ಟಿ.ಜಿ.ರೇಣುಕಾ ಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ವಾಯು ಮಾಲಿನ್ಯ ಎಂಬ ಕಾರಣಕ್ಕೆ ಅಲ್ಲಿನ ನಿವಾಸಿಗಳು ಬೆಂಗಳೂರಿನಂತಹ ನಗರಗಳ ಕಡೆ ವಲಸೆ ಆರಂಭಿಸಿದ್ದಾರೆ. ವಲಸೆ ಇದೇ ರೀತಿ ಮುಂದುವರೆದರೆ, ವಲಸೆ ಬಂದ ದೆಹಲಿಗರೊಂದಿಗೆ ಬೆಂಗಳೂರಿಗರೂ ಶುದ್ಧ ಗಾಳಿ ಇರುವ ಬೇರೆ ನಗರ ಹುಡುಕಿಕೊಂಡು ವಲಸೆ ಹೋಗಬೇಕಾಗಲಿದೆ.
ವಲಸೆ ತಡೆಗಟ್ಟುವುದರೊಂದಿಗೆ, ಬೆಂಗಳೂರಿನಲ್ಲಿ ಅರಣೀಕರಣ, ರಾಜಕಾಲುವೆ ಅಕ್ಕಪಕ್ಕದಲ್ಲಿ ಬಫರ್ ವಲಯ ಸಂರಕ್ಷಣೆ, ರಾಜಕಾಲುವೆ ಚಕ್ ಡ್ಯಾಂ ನಿರ್ಮಾಣ ಮಾಡಿ ನೀರಿನ ಶುದ್ಧ ಅಂತರ್ಜಲ ಮಟ್ಟ ವೃದ್ಧಿಗೆ ಕ್ರಮ ವಹಿಸಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗುಣಮಟ್ಟದ ಕುಸಿತಕ್ಕೆ ಕಾರಣವೇನು ?
ನಗರದಲ್ಲಿ 2022-23ರಲ್ಲಿ 1.09 ಕೋಟಿಯಷ್ಟಿದ್ದ ವಾಹನಗಳ ಸಂಖ್ಯೆ ಸದ್ಯ 1.23 ಕೋಟಿಗೆ ಹೆಚ್ಚಾಗಿದೆ. ಆದರೆ, ಕೇವಲ 3.4 ಲಕ್ಷದಷ್ಟು ಎಲೆಕ್ಟ್ರಿಕಲ್ ವಾಹನಗಳಿವೆ. ಸುಮಾರು 1.60 ಕೋಟಿ ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ ನಿರಂತರವಾಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಕಾಮಗಾರಿಗಳು ಹೆಚ್ಚುತ್ತಿವೆ. ಅಲ್ಲದೆ, ನಗರದಲ್ಲಿ ನಿತ್ಯ ಸರಾಸರಿ 8 ಮರಗಳನ್ನು ಕತ್ತರಿಸಲಾಗುತ್ತಿದೆ. ವರ್ಷಕ್ಕೆ 2,920 ಕತ್ತರಿಸಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ವಿವಿಧ ಅಭಿವೃದ್ಧಿಗಾಗಿ ನಗರದಲ್ಲಿ 12 ಸಾವಿರ ಮರಗಳನ್ನು ಕಡಿಯಲಾಗಿದೆ. ಈ ಎಲ್ಲದರ ಪರಿಣಾಮ ನಗರದ ಗಾಳಿಯ ಗುಣಮಟ್ಟ ಕುಸಿಯುತ್ತಿದೆ.
ರಸ್ತೆ ಧೂಳಿನಿಂದಲೇ ಪಿಎಂ10 ಹೆಚ್ಚಳ
ಪಿಎಂ 10 ಎಂಬುದು ಕಣ್ಣಿಗೆ ಕಾಣದಷ್ಟು ಸಣ್ಣ ಪ್ರಮಾಣದ ಧೂಳು. 10 ಮೈಕ್ರೋ ಮೀಟರ್ ಅಥವಾ 10 ಅದಕ್ಕಿಂತ ಚಿಕ್ಕದಾದ ಕಣಗಳಿವು. ಉಸಿರಿನ ಮೂಲಕ ದೇಹ ಸೇರುವ ಇವು ಶ್ವಾಸಕೋಶ, ಹೃದಯ, ರಕ್ತನಾಳದ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಪಿಎಂ10 ಧೂಳಿನ ಕಣ ಹೆಚ್ಚುವಲ್ಲಿ ರಸ್ತೆ ಧೂಳು ಶೇ.51.1 ರಷ್ಟು ಕೊಡುಗೆ ನೀಡುತ್ತಿದೆ. ವಾಹನ, ಸಾರಿಗೆಯಿಂದ ಶೇ.18.6, ಕಟ್ಟಡ ನಿರ್ಮಾಣ, ತೆರವು ಕಾರ್ಯಾಚರಣೆಯಿಂದ ಶೇ.6, ತ್ಯಾಜ್ಯ ಸುಡುವುದರಿಂದ ಶೇ.7.8 ಧೂಳು ಉಂಟಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ.
-ನಗರದ 11 ವಾಯು ಗುಣಮಟ್ಟ ಮಾಪನ ಕೇಂದ್ರದಲ್ಲಿ ದಾಖಲಾದ ವಿವರ
ಮಾಪನ ಕೇಂದ್ರ ಎಕ್ಯೂಐ(ನ.11) ಎಕ್ಯೂಐ(ಸೆಪ್ಟಂಬರ್)
ಹೆಬ್ಬಾಳ 147 51
ಜಯನಗರ 5ನೇ ಬ್ಲಾಕ್ 110 74
ಮೈಸೂರು ರಸ್ತೆ ಕವಿಕಾ * 106
ನಿಮ್ಹಾನ್ಸ್ 106 73
ಸಿಲ್ಕ್ ಬೋರ್ಡ್ 128 171
ಸಿಟಿ ರೈಲ್ವೆ ನಿಲ್ದಾಣ 108 95
ಬಸವೇಶ್ವರ ನಗರ 51 43
ಜಿಗಣಿ 86 72
ಕಸ್ತೂರಿ ನಗರ 68 59
ಪೀಣ್ಯ ಕೈಗಾರಿಕಾ ಪ್ರದೇಶ 139 87
ಮೈಲಸಂದ್ರ 134 83
ಎಕ್ಯೂಐ ಮಾನದಂಡ
ಎಕ್ಯೂಐ ಸ್ಥಿತಿ
0-50 ಉತ್ತಮ
51-100 ತೃಪ್ತಿಕರ
101-200 ಮಧ್ಯಮ
201-300 ಕಳಪೆ
301-400 ಅತಿ ಕಳಪೆ
400ಕ್ಕಿಂತ ಅಧಿಕ ಗಂಭೀರ