ಏರ್‌ಪೋರ್ಟ್‌ನಿಂದ ದಾವಣಗೆರೆಗೆ ನೇರ ಫ್ಲೈಬಸ್‌ ಶುರು

Published : Nov 13, 2025, 09:11 AM IST
Flybus

ಸಾರಾಂಶ

ಮೈಸೂರು, ಮಡಿಕೇರಿ, ಕುಂದಾಪುರದ ಬಳಿಕ ಇದೀಗ ದಾವಣಗೆರೆಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರ ಫ್ಲೈಬಸ್‌ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಚಾಲನೆ ನೀಡಿದರು.

  ಬೆಂಗಳೂರು :  ಮೈಸೂರು, ಮಡಿಕೇರಿ, ಕುಂದಾಪುರದ ಬಳಿಕ ಇದೀಗ ದಾವಣಗೆರೆಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರ ಫ್ಲೈಬಸ್‌ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಚಾಲನೆ ನೀಡಿದರು.

ಇದೇ ವೇಳೆ ನೂತನ ಫ್ಲೈಬಸ್‌ ಪ್ರಯಾಣಿಕರಿಗೆ ಸೇರಿದಂತೆ ಎಲ್ಲ ಫ್ಲೈಬಸ್‌ ಪ್ರಯಾಣಿಕರಿಗೆ ಉಚಿತವಾಗಿ ನಂದಿನಿ ಉತ್ಪನ್ನಗಳ ಸ್ನ್ಯಾಕ್ಸ್ ವಿತರಣೆ ಆರಂಭಿಸಲಾಯಿತು.

ಈ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಈ ಹಿಂದೆ ಸಾರಿಗೆ ಇಲಾಖೆಯ ಸಚಿವರಾಗಿದ್ದಾಗ 2013ರಲ್ಲಿ ಮೊದಲ ಬಾರಿಗೆ ಫ್ಲೈಬಸ್‌ ಸೇವೆ ಆರಂಭಿಸಲಾಗಿತ್ತು. ಮೈಸೂರು, ಮಡಿಕೇರಿ, ಕುಂದಾಪುರದ ಬಳಿಕ ಇದೀಗ ದಾವಣಗೆರೆಗೆ ಫ್ಲೈಬಸ್ ಸೇವೆಗೆ ಚಾಲನೆ ನೀಡಲಾಗಿದೆ. ಫ್ಲೈಬಸ್‌ಗಳು ವಿಮಾನ ನಿಲ್ದಾಣದಿಂದ ದಾಬಸ್‌ ಪೇಟೆ ಮಾರ್ಗವಾಗಿ ನೇರವಾಗಿ ದಾವಣಗೆರೆಗೆ ಪ್ರಯಾಣ ಬೆಳೆಸಲಿದೆ. ಪ್ರಯಾಣಿಕರಿಗೆ ಸುಮಾರು 2 ರಿಂದ 3 ಗಂಟೆ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಫ್ಲೈ ಬಸ್‌ ಪ್ರಯಾಣಿಕರಿಗೆ ಈ ಹಿಂದೆ ನೀರಿನ ಬಾಟಲ್‌ ನೀಡಲಾಗುತ್ತಿತ್ತು. ಇತ್ತೀಚೆಗೆ ನಿಲ್ಲಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಗಮನಿಸಿ ನಂದಿನಿ ಉತ್ಪನ್ನಗಳ ಸ್ನ್ಯಾಕ್ಸ್ ಬಾಕ್ಸ್‌ ಅನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ನೀರಿನ ಬಾಟಲ್‌, ಬಿಸ್ಕೆಟ್‌, ಬಾದಾಮಿ ಹಾಲು, ಕೇಕ್‌, ಕೋಡುಬಳೆ ಇರಲಿದೆ. ಸ್ನ್ಯಾಕ್ಸ್ ಬಾಕ್ಸ್‌ಗೆ ಯಾವುದೇ ದರ ವಿಧಿಸುವುದಿಲ್ಲ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಇಡೀ ದೇಶದಲ್ಲಿ ಉತ್ತಮ ಸಾರಿಗೆ ಸಂಸ್ಥೆಯಾಗಿದ್ದು, 467 ಪ್ರಶಸ್ತಿ ಬಂದಿವೆ. ಬೇರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಅತಿ ಹೆಚ್ಚು ಸಾರ್ವಜನಿಕ ಸಾರಿಗೆ ಬಸ್‌ ಹೊಂದಿದೆ. ಟ್ರಾಫಿಕ್‌ ದಟ್ಟಣೆ ಕಡಿಮೆ ಆಗಬೇಕಾದರೆ, ಜನಸಾಮಾನ್ಯರು ಬಸ್‌ ನಲ್ಲಿ ಹೆಚ್ಚು ಹೆಚ್ಚು ಪ್ರಯಾಣ ಮಾಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ, ಕೆಎಂಎಫ್‌ನ ಸ್ವಾತಿ ರೆಡ್ಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಜಯ್‌ ಚಂದ್ರ ಮೊದಲಾದವರಿದ್ದರು.

ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆಗೆ

ತಡ ರಾತ್ರಿ 12.45ಕ್ಕೆ ಹೊರಟು ಬೆಳಗಿನ ಜಾವ 5.45ಕ್ಕೆ ದಾವಣಗೆರೆ ತಲುಪಲಿದೆ.

ಬೆಳಗ್ಗೆ 10ಕ್ಕೆ ಹೊರಡು ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ತಲುಪಲಿದೆ.

ದಾವಣಗೆರೆಯಿಂದ ವಿಮಾನ ನಿಲ್ದಾಣಕ್ಕೆ

ಬೆಳಗ್ಗೆ 8ಕ್ಕೆ ಹೊರಟು ಮಧ್ಯಾಹ್ನ 1ಕ್ಕೆ ವಿಮಾನ ನಿಲ್ದಾಣ ತಲುಪಲಿದೆ

ಸಂಜೆ 7ಕ್ಕೆ ಹೊರಟು ರಾತ್ರಿ 10ಕ್ಕೆ ವಿಮಾನ ನಿಲ್ದಾಣ ತಲುಪಲಿದೆ

ಪ್ರಯಾಣ ದರ ಎಷ್ಟೆಷ್ಟು?

ವಿಮಾನ ನಿಲ್ದಾಣದಿಂದ ತುಮಕೂರಿಗೆ 400 ರು.

ವಿಮಾನ ನಿಲ್ದಾಣದಿಂದ ಚಿತ್ರದುರ್ಗಗೆ 980 ರು.

ವಿಮಾನ ನಿಲ್ದಾಣದಿಂದ ದಾವಣಗೆರೆಗೆ 1,250 ರು.

ಫ್ಲೈಬಸ್‌ ಮಾರ್ಗ

ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆ ಮೂಲಕ ದೊಡ್ಡಬಳ್ಳಾಪುರ ಬೈಪಾಸ್‌ ಮೂಲಕ ದಾಬಸ್‌ ಪೇಟೆ, ತುಮಕೂರು ಬೈಪಾಸ್‌, ಚಿತ್ರದುರ್ಗ ಬೈಪಾಸ್‌ ಮೂಲಕ ದಾವಣಗೆರೆ ತಲುಪಲಿದೆ. ಅದೇ ಮಾರ್ಗವಾಗಿ ವಾಪಸ್ ಆಗಲಿದೆ.

15 ದಿನದಲ್ಲಿ ವೇತನ ಪರಿಷ್ಕರಣೆ ಕುರಿತು ಸಿಎಂ ಸಭೆ

ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. 15 ದಿನದಲ್ಲಿ ಮುಖ್ಯಮಂತ್ರಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಮಂಗಳವಾರ ಸಹ ಈ ಬಗ್ಗೆ ಮುಖ್ಯಮಂತ್ರಿ ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ವೇತನ ಪರಿಷ್ಕರಣೆ ಒಂದು ಬಿಟ್ಟು ಉಳಿದಂತೆ ನೌಕರರ ಎಲ್ಲ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

PREV
Read more Articles on

Recommended Stories

ಬೆಂಗಳೂರು 2ನೇ ದೆಹಲಿ ಆಗುವುದು ಸನ್ನಿಹಿತ!
ಸಂಚಾರ ದಟ್ಟಣೆ ನಿವಾರಣೆಗೆ ಏಕಮುಖ ಸಂಚಾರ ಅಸ್ತ್ರ