ಕನ್ನಡಪ್ರಭ ವಾರ್ತೆ ಮಾಗಡಿ
ತೀವ್ರ ಕುತೂಹಲ ಮೂಡಿಸಿದ್ದ ತಾಲೂಕಿನ ಚಕ್ರಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಬೆಂಬಲಿತರು ಸಂಘವನ್ನು ಕೈ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.12ನಿರ್ದೇಶಕ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 11ರಲ್ಲಿ ಗೆಲುವು ಸಾಧಿಸಿದ್ದು, ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ. 30 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಿಗೆ ತೀವ್ರ ಮುಖಭಂಗವಾಗಿದೆ.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್. ಎನ್. ಅಶೋಕ್ ಅವರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರಿಂದ ಸಾಕಷ್ಟು ಕುತೂಹಲ ಮೂಡಿಸಿತ್ತು. ಮಾಜಿ ಶಾಸಕ ಎ. ಮಂಜುನಾಥ್ ಅವರು ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡು ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಮುಜುಗರ ಅನುಭವಿಸುವಂತಾಗಿದೆ.ಶಾಸಕ ಬಾಲಕೃಷ್ಣ ಮತದಾನ:
ಮತದಾನದ ಹಕ್ಕು ಹೊಂದಿದ್ದ ಶಾಸಕ ಬಾಲಕೃಷ್ಣ ಅವರು ಸಾಲಗಾರರಲ್ಲದ ಕ್ಷೇತ್ರಕ್ಕೆ ಮತದಾನ ಮಾಡಿದರು. ಬಾಲಕೃಷ್ಣರವರ ತಾಯಿ ಶಾರದಮ್ಮ ಸೇರಿ ಕುಟುಂಬಸ್ಥರು ಕೂಡ ಮತದಾನ ಮಾಡಿದ್ದು ವಿಶೇಷವಾಗಿತ್ತು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಎಚ್.ಎನ್. ಅಶೋಕ್ ಗೆಲವು ಸಾಧಿಸಿದ ನಂತರ ಮಾತನಾಡಿ, ಅವಿರೋಧ ಆಯ್ಕೆಯಾಗಿದ್ದರೆ ಸೊಸೈಟಿಗೂ ಕೂಡ ಚುನಾವಣೆ ಖರ್ಚು ಕಡಿಮೆಯಾಗುತ್ತಿತ್ತು. ಈಗ ಬೇಡದ ಚುನಾವಣೆಯನ್ನು ಮಾಜಿ ಶಾಸಕ ಎ. ಮಂಜುನಾಥ್ ಅವರು ನಡೆಸಿ ಸಂಘಕ್ಕೆ ಐದು ಲಕ್ಷ ನಷ್ಟ ಉಂಟು ಮಾಡಿದ್ದಾರೆ ಎಂದರು.
ತಾಲೂಕಿನ ಘಟಾನುಘಟಿ ಕಾಂಗ್ರೆಸ್ ನಾಯಕರು ಸ್ಥಳಕ್ಕೆ ಆಗಮಿಸಿದ್ದರು. ಕಾಂಗ್ರೆಸ್ ಗೆಲವು ಸಾಧಿಸುತ್ತಿದ್ದಂತೆ ಎಲ್ಲರು ಅಶೋಕ್ ಅವರನ್ನು ಅಭಿನಂದಿಸಿ ದೊಡ್ಡ ಮಟ್ಟದಲ್ಲಿ ಸಂಭ್ರಮ ನಡೆಸಿದರು. ಕಾಂಗ್ರೆಸ್ ಹಿರಿಯ ಮುಖಂಡರಾದ ಜೆ.ಪಿ. ಚಂದ್ರೇಗೌಡ, ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ನರಸಿಂಹಮೂರ್ತಿ, ಶಿವಣ್ಣ, ಕಾಂತರಾಜು, ರವೀಂದ್ರ, ಪ್ರಕಾಶ್, ದೀಪಕ್ ಸೇರಿದಂತೆ ಅನೇಕರು ಹಾಜರಿದ್ದರು.ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತರು
ಸಾಲಗಾರರ ಸಾಮಾನ್ಯ ಕ್ಷೇತ್ರ: ಎಚ್.ಎನ್. ಅಶೋಕ್ 772, ಕುಳ್ಳಯ್ಯ 649, ಎಸ್.ಕೆ.ಲೋಕೇಶ್ 622, ಬಿ.ಟಿ.ಗಂಗಣ್ಣ 579, ಮಹೇಶ್ 544 ಮತ. ಮಹಿಳಾ ಮೀಸಲು ಕ್ಷೇತ್ರ : ಚಂದ್ರಮ್ಮ 734, ನಳಿನಾಕ್ಷಿ 713, ಪರಿಶಿಷ್ಟ ಜಾತಿ : ಮಹದೇವಯ್ಯ ಕೆ.ಸಿ.746, ಹಿಂದುಳಿದ ವರ್ಗ ಎ : ಪುಟ್ಟಸ್ವಾಮಿ 728, ಹಿಂದುಳಿದ ವರ್ಗ ಬಿ : ಬಸವರಾಜು 663, ಸಾಲಗಾರರಲ್ಲದ ಕ್ಷೇತ್ರ : ಸಿ. ಎಸ್. ಸ್ವಾಮಿ 106, ಪರಿಶಿಷ್ಟ ಪಂಗಡ : ರಾಧಮ್ಮ (ಅವಿರೋಧ ಆಯ್ಕೆ).