;Resize=(412,232))
ಬೆಂಗಳೂರು : ರಾಜ್ಯದಲ್ಲಿ ಪೌತಿ ಖಾತೆ ಅಭಿಯಾನದಡಿ ಇದುವರೆಗೆ ಕೇವಲ ಶೇ.5ರಷ್ಟು ಗುರಿ ಸಾಧನೆ ಮಾಡಲಾಗಿದೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮತ್ತು ಅತಿವೃಷ್ಟಿಯಿಂದ ಪೋಡಿ ದುರಸ್ತಿ ಕಾರ್ಯ ತಡವಾಗಿದೆ, ಹೀಗಾಗಿ ಎರಡೂ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ವಿಡಿಯೋ ಸಂವಾದ ಮೂಲಕ ನಡೆದ ತಹಶೀಲ್ದಾರ್ ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದ ಅವರು, ಪೌತಿ ಖಾತೆ ಅಭಿಯಾನ ಆರಂಭವಾಗಿ ಎಷ್ಟು ತಿಂಗಳಾಯಿತು? 41.62 ಲಕ್ಷ ಜಮೀನು ಮೃತರ ಹೆಸರಲ್ಲಿದೆ. ಈ ಪೈಕಿ ಎರಡು ಲಕ್ಷ ಪ್ರಕರಣಗಳನ್ನು ಮಾತ್ರ ಇದುವರೆಗೆ ಮೃತರ ವಾರಸುದಾರರ ಹೆಸರಿಗೆ ಬದಲಿಸಲಾಗಿದೆ. ನಮ್ಮ ಗುರಿಯಲ್ಲಿ ಶೇ. 5 ರಷ್ಟು ಕೆಲಸ ಮಾತ್ರ ಆಗಿದೆ. ಕೂಡಲೇ ಅಭಿಯಾನಕ್ಕೆ ವೇಗ ನೀಡಿ ಪೂರ್ಣ ಗುರಿ ಸಾಧನೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.
ಅದೇ ರೀತಿ ತಡವಾಗಿರುವ ಪೋಡಿ ದುರಸ್ತಿ ಕಾರ್ಯವನ್ನು ಮತ್ತೆ ಆದ್ಯತೆ ಮೇಲೆ ಆರಂಭಿಸಿ ಡಿಸೆಂಬರ್ ಒಳಗೆ ಎಲ್ಲವನ್ನೂ ಪೂರ್ಣಗೊಳಿಸಬೇಕು. ದುರಸ್ತಿಗಾಗಿ 1.40 ಲಕ್ಷ ಪ್ರಕರಣ ಸರ್ವೇಗೆ ಹೋಗಿದೆ. 1.50 ಲಕ್ಷ ಪ್ರಕರಣ ಮಿಸ್ಸಿಂಗ್ ರೆಕಾರ್ಡ್ ಕಮಿಟಿಗೆ ಹೋಗಿದೆ. ತಹಶೀಲ್ದಾರರು ತನ್ನ ಕೆಲಸವನ್ನು ಸರಿಯಾಗಿ ಮಾಡದೆ ಇಷ್ಟೊಂದು ಪ್ರಕರಣಗಳನ್ನು ಮಿಸ್ಸಿಂಗ್ ರೆಕಾರ್ಡ್ಸ್ ಕಮಿಟಿಗೆ ಕಳಿಸುವುದು ಸರಿಯಲ್ಲ. ಎಲ್ಲ ತಾಲೂಕುಗಳಲ್ಲೂ ಮಂಜೂರುದಾರರಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲವನ್ನೂ ಮುಗಿಯುವಂತೆ ಯೋಜನೆ ರೂಪಿಸಿಕೊಳ್ಳಬೇಕು. ಡೇಟಾ ಎಂಟ್ರಿಯಿಂದ ತಹಶೀಲ್ದಾರ್‌ವರೆಗೆ ಎಲ್ಲವೂ ಈ ಗಡುವಿನೊಳಗೆ ಆಗಬೇಕು ಎಂದು ಸೂಚಿಸಿದ್ದಾರೆ.
ರೈತರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಶೀಘ್ರ ಎಲ್ಲ ತಾಲೂಕುಗಳಲ್ಲೂ ಆಧಾರ್ ಸೀಡಿಂಗ್ ಮುಗಿಸುವಂತೆ ಸಚಿವರು ಸೂಚಿಸಿದ್ದಾರೆ.
ವಿರಾಜಪೇಟೆ, ಬೈಂದೂರು, ಪೊನ್ನಂಪೇಟೆ, ಮಡಿಕೇರಿ, ಆನೇಕಲ್, ಖಾನಾಪುರ, ಯಳಂದೂರು, ಗೋಕಾಕ್ ತಾಲೂಕಲ್ಲಿ ಶೇ.1ಕ್ಕಿಂತ ಕಡಿಮೆ ಆಧಾರ್ ಸೀಡಿಂಗ್ ಆಗಿದೆ. ಈ ತಾಲ್ಲೂಕುಗಳ ತಹಶೀಲ್ದಾರರುಗಳ ವಿರುದ್ಧ ಕಿಡಿಕಾರಿದ ಸಚಿವರು, ಈ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಭೂ ಸುರಕ್ಷಾ ಯೋಜನೆ:
49 ತಾಲೂಕು ಭೂ ದಾಖಲೆಗಳ ಸ್ಕ್ಯಾನಿಂಗ್ ಮುಕ್ತಾಯವಾಗಿದೆ. ಪ್ರಾಯೋಗಿಕವಾಗಿ ಸ್ಕ್ಯಾನ್ ಆರಂಭಿಸದ 29 ತಾಲೂಕುಗಳಲ್ಲೂ ಮುಕ್ತಾಯ ಆಗಿದೆ. ಈವರೆಗೆ 50 ಕೋಟಿ ಪುಟ ಸ್ಕ್ಯಾನ್ ಆಗಿದೆ ಇನ್ನೂ 50 ಕೋಟಿ ಪುಟ ಸ್ಕ್ಯಾನಿಂಗ್ ಬಾಕಿ ಇದೆ. ಎಲ್ಲೆಲ್ಲಿ ದಾಖಲೆಗಳು ಅಧಿಕವಾಗಿದೆಯೋ ಅಲ್ಲಿ ಮತ್ತಷ್ಟು ಉಪಕರಣ ಹಾಗೂ ಮಾನವ ಸಂಪನ್ಮೂಲ ನೀಡಲು ಸೂಚಿಸಲಾಗಿದ್ದು, ಈ ಯೋಜನೆಗೆ ಹಣದ ಕೊರತೆ ಇಲ್ಲ ಎಂದು ಸಚಿವರು ಹೇಳಿದರು.