;Resize=(412,232))
ಬೆಂಗಳೂರು : ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಗಳು ಅರಣ್ಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿರುವ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ದ 5ನೇ ಆವೃತ್ತಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸೋಮವಾರ ಚಾಲನೆ ನೀಡಿದರು.
ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸಹಬಾಳ್ವೆಯ ಸಹಪಥ’ ಸೇರಿ ಇತರೆ ಘೋಷ ವಾಕ್ಯದ ಫಲಕಗಳನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯಪಾಲರು ಅಭಿಯಾನ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಸಮಾಜದಲ್ಲಿ ವನ್ಯಜೀವಿ ಸಂಘರ್ಷದ ಬಗ್ಗೆ ಜಾಗೃತಿ ಮೂಡಿಸುವ ದೂರದರ್ಶಿತ್ವದ ಈ ಕಾರ್ಯ ಶ್ಲಾಘನೀಯ. ನಮ್ಮ ಪೂರ್ವಜರು ನೀರು-ನೆಲಕ್ಕೆ ದೇವರ ಸ್ಥಾನ ನೀಡಿದ್ದಾರೆ. ಉಪನಿಷತ್‌ನಲ್ಲಿ ಭೂಮಿ ನಮ್ಮ ತಾಯಿ, ನಾವು ಅದರ ಮಕ್ಕಳು ಎಂದು ಹೇಳಲಾಗಿದೆ. ಆದರೆ, ಆಧುನಿಕ ಯುಗದಲ್ಲಿ ನಾವು ಪ್ರಕೃತಿಯಿಂದ ದೂರವಾಗಿ ಅದಕ್ಕೆ ಹಾನಿ ಮಾಡುತ್ತಿದ್ದು, ಇದನ್ನು ತಡೆಯಲು ಸಾಮೂಹಿಕ ಪ್ರಯತ್ನ ಅಗತ್ಯ’ ಎಂದು ಹೇಳಿದರು.
‘ಕರ್ನಾಟಕದಲ್ಲಿ ವನ್ಯಜೀವಿ ಸಂಪತ್ತು ಹೇರಳವಾಗಿದೆ. ಕೇವಲ ಕಾನೂನಿನಿಂದ ಇದರ ಸಂರಕ್ಷಣೆ ಸಾಧ್ಯವಿಲ್ಲ. ಅದಕ್ಕಾಗಿ ಜನಜಾಗೃತಿ ಅಗತ್ಯ. ಈ ಅಭಿಯಾನ ಜನಾಂದೋಲನದ ರೂಪ ಪಡೆದುಕೊಳ್ಳಬೇಕು. ಕನ್ನಡಪ್ರಭ - ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ ಈ ಅಭಿಯಾನ ಮಾನವ - ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಸಫಲವಾಗಲಿದೆ. ಜನತೆಯಲ್ಲಿ ಸಂವೇದನಾಶೀಲತೆ, ಜವಾಬ್ದಾರಿ ಮೂಡಿಸುವ ಭರವಸೆಯಿದೆ’ ಎಂದರು.
ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಮಾನವ- ವನ್ಯಜೀವಿ ಸಂಘರ್ಷ ತಡೆವ ನಿಟ್ಟಿನಲ್ಲಿ ಅರಿವು ಮೂಡಿಸುವುದು ಮುಖ್ಯ. ರಾಜ್ಯದ 10 ಜಿಲ್ಲೆಗಳಲ್ಲಿ ಸೂಕ್ಷ್ಮ ಪಶ್ಚಿಮಘಟ್ಟ ಹಾದುಹೋಗುತ್ತದೆ. ಇಲ್ಲಿನ ಪ್ರಾಣಿ ಸಂಕುಲ, ಪಕ್ಷಿ ಸಂಕುಲ, ಸಸ್ಯ ಸಂಕುಲ ಸೇರಿ ಜೀವವೈವಿದ್ಯ ಕಾಪಾಡಿಕೊಳ್ಳಬೇಕಿದೆ’ ಎಂದು ಹೇಳಿದರು.
‘ಹವಾಮಾನ ಬದಲಾವಣೆ ನಮ್ಮೆದುರಿನ ದೊಡ್ಡ ಸವಾಲು. ರಾಜ್ಯದಲ್ಲಿ 37 ವನ್ಯಜೀವಿಧಾಮ, 5 ಹುಲಿ ಸಂರಕ್ಷಣ ತಾಣ, 5 ರಾಷ್ಟ್ರೀಯ ಉದ್ಯಾನಗಳಿವೆ. ರಾಜ್ಯದಲ್ಲಿ ಶೇ.21ರಷ್ಟು ಅರಣ್ಯ ಭೂಮಿ ಇದೆ. ಹಿಂದಿನ ಗಣತಿಯಂತೆ 6385 ಆನೆಗಳು, 563 ಹುಲಿಗಳಿದ್ದು, ಇವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಅರಣ್ಯ ಭೂಮಿ ಕಡಿಮೆಯಾಗಿದೆ’ ಎಂದರು.
‘2015ರ ಅಂಕಿ-ಅಂಶದ ಪ್ರಕಾರ 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಆನೆ, ಹುಲಿ ಕಾರಿಡಾರ್‌ಗಳು ಅತಿಕ್ರಮಗೊಂಡಿವೆ. ಇದರಿಂದ ಮಾನವ- ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಪ್ರತಿ ವರ್ಷ 50 - 60 ಜನರ ಸಾವಾಗುತ್ತಿದೆ. ಹುಲಿಗಳಿಗೆ ವಿಷವಿಕ್ಕಿ ಕೊಲ್ಲುವ ಘಟನೆಗಳು ಆಘಾತಕಾರಿ. ಈ ಹಿನ್ನೆಲೆಯಲ್ಲಿ ಕಾಡಂಚಿನ ಜನರ ಸ್ಥಳಾಂತರ ಮಾಡುವ, ಪರಿಹಾರ ನೀಡುವ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆದಿದೆ’ ಎಂದು ತಿಳಿಸಿದರು.
ಅಭಿಯಾನದ ರಾಯಭಾರಿ ನಟ ಗಣೇಶ್ ಮಾತನಾಡಿ, ನಟನೊಬ್ಬ ಕಂಪನಿಯ ಬಟ್ಟೆ, ಮೊಬೈಲ್, ಡ್ರಿಂಕ್ ಉತ್ಪನ್ನ ಮಾರಾಟದ ರಾಯಭಾರಿ ಆಗುವುದು ಸಹಜ. ಆದರೆ, ಇಂತಹ ಅವಕಾಶ ಸಿಗುವುದು ವಿರಳ. ಸಮಾಜಕ್ಕೆ ನನ್ನಿಂದ ಏನಾದರೂ ಕೊಡಲು ಈ ಅವಕಾಶದಿಂದ ಸಾಧ್ಯವಾಗಲಿದೆ. ಕಾಡಿನಿಂದ ನಾಡು ಎನ್ನುವುದು ಕೇವಲ ಘೋಷಣೆ ಆಗಿಯೇ ಉಳಿಯಬಾರದು. ಮಾನವ - ವನ್ಯಜೀವಿಗಳ ಸಹಬಾಳ್ವೆಗೆ ಕೈ ಜೋಡಿಸೋಣ. ಜನತೆಯಲ್ಲಿ ಕಾನೂನು ಜಾಗೃತಿ ಮೂಡಿಸೋಣ ಎಂದರು.
ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಪ್ರಾಸ್ತಾವಿಕ ಮಾತನಾಡಿ, ‘ವನ್ಯಜೀವಿಗಳ ಕಾರಿಡಾರ್‌ನಲ್ಲಿ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಈ ಬಾರಿಯ ಅಭಿಯಾನದ ಮುಖ್ಯ ಉದ್ದೇಶ’ ಎಂದು ವಿವರಿಸಿದರು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಇದ್ದರು.
ಶ್ಲಾಘನೀಯ ಕಾರ್ಯ
ಸಮಾಜದಲ್ಲಿ ವನ್ಯಜೀವಿ ಸಂಘರ್ಷದ ಬಗ್ಗೆ ಜಾಗೃತಿ ಮೂಡಿಸುವ ದೂರದರ್ಶಿತ್ವದ ಈ ಕಾರ್ಯ ಶ್ಲಾಘನೀಯ. ಕನ್ನಡಪ್ರಭ - ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ ಈ ಅಭಿಯಾನ ಮಾನವ - ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಸಫಲವಾಗಲಿದೆ.
-ಥಾವರ್‌ಚಂದ್ ಗೆಹಲೋತ್, ರಾಜ್ಯಪಾಲ
ಅರಿವು ಮೂಡಿಸುವುದು ಮುಖ್ಯ
2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಆನೆ, ಹುಲಿ ಕಾರಿಡಾರ್‌ಗಳು ಅತಿಕ್ರಮಗೊಂಡಿವೆ. ಇದರಿಂದ ಮಾನವ- ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಮಾನವ- ವನ್ಯಜೀವಿ ಸಂಘರ್ಷ ತಡೆವ ನಿಟ್ಟಿನಲ್ಲಿ ಅರಿವು ಮೂಡಿಸುವುದು ಮುಖ್ಯ.
-ಈಶ್ವರ ಖಂಡ್ರೆ, ಅರಣ್ಯ ಸಚಿವ.
ಇಂತಹ ಅವಕಾಶ ವಿರಳ
ನಟನೊಬ್ಬ ಕಂಪನಿಯ ಬಟ್ಟೆ, ಮೊಬೈಲ್, ಡ್ರಿಂಕ್ ಉತ್ಪನ್ನ ಮಾರಾಟದ ರಾಯಭಾರಿ ಆಗುವುದು ಸಹಜ. ಆದರೆ, ಇಂತಹ ಅವಕಾಶ ಸಿಗುವುದು ವಿರಳ. ಸಮಾಜಕ್ಕೆ ನನ್ನಿಂದ ಏನಾದರೂ ಕೊಡಲು ಈ ಅವಕಾಶದಿಂದ ಸಾಧ್ಯವಾಗಲಿದೆ.
-ಗೋಲ್ಡನ್ ಸ್ಟಾರ್ ಗಣೇಶ್, ಚಿತ್ರನಟ.