3 ವರ್ಷದಲ್ಲಿ ಎಲ್ಲ ಲೆವೆಲ್‌ ಕ್ರಾಸ್‌ ತೆರವು : ಸೋಮಣ್ಣ

Published : Jul 14, 2025, 10:19 AM IST
v somanna

ಸಾರಾಂಶ

ಮುಂದಿನ ಮೂರು ವರ್ಷದಲ್ಲಿ ಬೆಂಗಳೂರು ಹಾಗೂ ಸುತ್ತಲಿನ ನೂರು ಕಿ.ಮೀ. ವ್ಯಾಪ್ತಿಯ ಎಲ್ಲ ಲೆವೆಲ್‌ ಕ್ರಾಸ್‌ಗಳನ್ನು ತೆಗೆದು ರಸ್ತೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

  ಬೆಂಗಳೂರು :  ಮುಂದಿನ ಮೂರು ವರ್ಷದಲ್ಲಿ ಬೆಂಗಳೂರು ಹಾಗೂ ಸುತ್ತಲಿನ ನೂರು ಕಿ.ಮೀ. ವ್ಯಾಪ್ತಿಯ ಎಲ್ಲ ಲೆವೆಲ್‌ ಕ್ರಾಸ್‌ಗಳನ್ನು ತೆಗೆದು ರಸ್ತೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ನಗರದ ಕೆಂಗೇರಿ- ಹೆಜ್ಜಾಲ ನಡುವೆ ₹5.52 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಲೆವೆಲ್ ಕ್ರಾಸ್‌ ಗೇಟ್‌ ನಂ.15 ಅನ್ನು ಉದ್ಘಾಟನೆ ಮತ್ತು ಗೇಟ್‌ ನಂ.16ರಲ್ಲಿ ₹7.74ಕೋಟಿ ವೆಚ್ಚದಲ್ಲಿ ರಸ್ತೆ ಕೆಳ ಸೇತುವೆ (ಆರ್‌ಯುಬಿ) ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬೆಂಗಳೂರು ಸುತ್ತಮುತ್ತಲಿನ ಲೆವೆಲ್‌ ಕ್ರಾಸ್‌ನಿಂದ ನಗರ ದಟ್ಟಣೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರವಾಗಿ ನೈಋತ್ಯ ರೈಲ್ವೆ ಬೆಂಗಳೂರು ವಲಯದಿಂದ ಸುತ್ತಲ 100 ಕಿಮೀ ವ್ಯಾಪ್ತಿಯಲ್ಲಿ ಎಷ್ಟು ಲೆವೆಲ್‌ ಕ್ರಾಸ್‌ಗಳಿವೆ ಎಂಬುದನ್ನು ಮುಂದಿನ 3 ತಿಂಗಳಲ್ಲಿ ಸರ್ವೆ ಮಾಡಬೇಕು. ಎಲ್ಲಿ ಆರ್‌ಒಬಿ ನಿರ್ಮಿಸಬೇಕು, ಎಲ್ಲಿ ಆರ್‌ಯುಬಿ ನಿರ್ಮಿಸಬೇಕು ಎಂಬುದನ್ನು ಯೋಜಿಸಿ ಅದಕ್ಕೆ ತಗಲುವ ವೆಚ್ಚ ಸೇರಿ ಇತರೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ಮೂರು ವರ್ಷದಲ್ಲಿ ಎಲ್ಲ ಲೆವೆಲ್‌ ಕ್ರಾಸ್‌ ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದೇವೆ ಎಂದರು.

ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಲೆವೆಲ್‌ ಕ್ರಾಸ್‌ನಿಂದ ಸಂಚಾರ ದಟ್ಟಣೆ ಮಾತ್ರವಲ್ಲದೆ ಹಲವೆಡೆ ಅಪಘಾತಗಳು ಆಗುತ್ತಿವೆ. ಹೀಗಾಗಿ ಇವನ್ನು ತೆರವು ಮಾಡಲು ಕೇಂದ್ರ ಸರ್ಕಾರ ವಿಶೇಷ ಕ್ರಮ‌ ವಹಿಸಿದೆ. ರಸ್ತೆ ಕೆಳಸೇತುವೆ ಆದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದನ್ನು ತೆಗೆದುಹಾಕಲು ಅಗತ್ಯ ಕ್ರಮ ವಹಿಸಲಾಗುತ್ತದೆ. ರೊಮೋಹಳ್ಳಿಯಲ್ಲಿ ನೀರು ನಿಲ್ಲುವ ಸಮಸ್ಯೆ ಇಲ್ಲ. ದುಬಾಸಿಪಾಳ್ಯ ಸೇರಿ ಇತರೆಡೆ ರೈಲ್ವೆಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮೆಜೆಸ್ಟಿಕ್‌ನಲ್ಲಿ 2 ಹೊಸ ಪ್ಲಾಟ್ ಫಾರಂ: ಸಚಿವ

ಇನ್ನು ನಗರದಲ್ಲಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣ ಮರು ನಿರ್ಮಾಣ ಆಗುತ್ತಿವೆ. ಮೆಜೆಸ್ಟಿಕ್ ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣ ಮರು ನಿರ್ಮಾಣ ಆಗಲಿದೆ. ಕೆಎಸ್ಆರ್ ನಿಲ್ದಾಣದಲ್ಲಿ ₹222 ಕೋಟಿ ವೆಚ್ಚದಲ್ಲಿ ಎರಡು ಹೊಸ ಪ್ಲಾಟ್ ಫಾರಂ ನಿರ್ಮಾಣ ಮಾಡಲಾಗುವುದು. ಬೆಂಗಳೂರು ತುಮಕೂರು ರೈಲ್ವೆ ಮಾರ್ಗವನ್ನು 4 ಪಥವಾಗಿಸಲು ಸರ್ವೆ ಆಗಿದ್ದು , ಶೀಘ್ರವಾಗಿ ಡಿಪಿಆರ್ ಮಾಡಲಾಗುವುದು ಎಂದು ಸೋಮಣ್ಣ ತಿಳಿಸಿದರು.

ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕೆಂಗೇರಿ- ಹೆಜ್ಜಾಲ ನಡುವೆ ₹5.52 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಲೆವೆಲ್ ಕ್ರಾಸ್‌ ಗೇಟ್‌ ನಂ.15 ಅನ್ನು ಉದ್ಘಾಟಿಸಿದರು.

ರಾಜ್ಯದಲ್ಲಿ 2014 ರಿಂದ ಈವರೆಗೆ‌‌ 640 ಲೆವೆಲ್ ಕ್ರಾಸ್ ತೆರವು ಮಾಡಲಾಗಿದೆ. ಈ ಮೊದಲು ಮೆಲ್ಸೇತುವೆ, ಕೆಳ ಸೇತುವೆ ನಿರ್ಮಾಣಕ್ಕೆ ರಾಜ್ಯ, ಕೇಂದ್ರ ಸರ್ಕಾರ ಶೇ.50 ರ ಅನುಪಾತದ ಅನುದಾನ ಬಿಡುಗಡೆ ಆಗಬೇಕಿತ್ತು. ಆದರೆ ರಾಜ್ಯ ಸರ್ಕಾರ ಹಣ ಬಿಡುಗಡೆಗೆ ವಿಳಂಬ ಮಾಡುತ್ತಿದ್ದ ಕಾರಣ ಎಲ್‌ಸಿ ತೆರವು ಕಾಮಗಾರಿ ವಿಳಂಬ ಆಗುತ್ತಿತ್ತು. ಇದನ್ನು ನಿವಾರಿಸಲು ಕೇಂದ್ರ ಸರ್ಕಾರ ಸಂಪೂರ್ಣ ಅನುದಾನ ಕೊಡಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ