ಕಾವೇರಿ ಸಂಕಷ್ಟ ಸೂತ್ರ ಸರ್ವಪಕ್ಷ ಸಭೆಯಲ್ಲಿ ಮಂತ್ರ

Published : Aug 03, 2026, 06:14 AM IST
Cauvery water

ಸಾರಾಂಶ

ಜಲಕ್ಷಾಮ ಎದುರಾದಾಗ ರಾಜ್ಯದ ಹಾಗೂ ರೈತರ ಹಿತ ಕಾಪಾಡಲು ‘ಸಂಕಷ್ಟ ಪರಿಹಾರ ಸೂತ್ರ’ವೊಂದು ಬೇಕು. ಈ ನಿಟ್ಟಿನಲ್ಲಿ ಕಾನೂನಾತ್ಮಕ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನು ತಜ್ಞರ ಸಲಹೆ ಪಡೆದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

  ಬೆಂಗಳೂರು :  ಜಲಕ್ಷಾಮ ಎದುರಾದಾಗ ರಾಜ್ಯದ ಹಾಗೂ ರೈತರ ಹಿತ ಕಾಪಾಡಲು ‘ಸಂಕಷ್ಟ ಪರಿಹಾರ ಸೂತ್ರ’ವೊಂದು ಬೇಕು. ಈ ನಿಟ್ಟಿನಲ್ಲಿ ಕಾನೂನಾತ್ಮಕ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನು ತಜ್ಞರ ಸಲಹೆ ಪಡೆದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕರೆಯಲಾಗಿದ್ದ ಸರ್ವಪಕ್ಷ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಬದಿಗಿಟ್ಟು ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಎಂ.ವೀರಪ್ಪ ಮೊಯ್ಲಿ ಸೇರಿ ಕೇಂದ್ರದ ಸಚಿವರು, ಸಂಸದರು, ಮಾಜಿ ನೀರಾವರಿ ಸಚಿವರು ಆಗಮಿಸಿ ಅನೇಕ ವಿಭಿನ್ನ ಸಲಹೆಗಳನ್ನು ನೀಡಿದ್ದಾರೆ. ನಮ್ಮ ಕಾನೂನು ತಜ್ಞರು ಕೂಡ ಸಭೆಯಲ್ಲಿ ಭಾಗಿಯಾಗಿ ಪರಿಸ್ಥಿತಿ ಹಾಗೂ ಮುಂದೆ ಏನು ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎಲ್ಲರ ಸಲಹೆ, ಅಭಿಪ್ರಾಯ ಆಲಿಸಲಾಯಿತು. ಎಲ್ಲ ಪಕ್ಷಗಳ ನಾಯಕರು ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಕ್ಕಾಗಿ ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದಾರೆ.

ಸಂಕಷ್ಟ ಎದುರಾಗುತ್ತಲೇ ಇರುತ್ತದೆ:

ಮಳೆ ಅಭಾವ ಎದುರಾದಾಗ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಸಂಕಷ್ಟ ಎದುರಾಗುತ್ತಲೇ ಇರುತ್ತದೆ. ಅಂತಹ ಸಮಯದಲ್ಲಿ ರಾಜ್ಯದ ಜನರ ಹಾಗೂ ರೈತರ ಹಿತ ಕಾಪಾಡಲು ‘ಒಂದು ಸ್ಪಷ್ಟವಾದ ಸಂಕಷ್ಟ ಸೂತ್ರ’ ಬೇಕೇಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಈ ಸೂತ್ರಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು.

ಕೆರೆಗಳಿಗೆ ನೀರು:

ಕಾವೇರಿ ಭಾಗದ ಅಣೆಕಟ್ಟುಗಳಲ್ಲಿ ಒಳ ಹರಿವಿನ ಪ್ರಮಾಣ ಸದ್ಯ 67-68 ಸಾವಿರ ಕ್ಯುಸೆಕ್‌ನಷ್ಟಿದ್ದು, ಕುಡಿಯಲು ಹಾಗೂ ಕೆರೆಗಳಿಗೆ ನೀರು ತುಂಬಿಸಲು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು.

ಬಂಗಾರಪ್ಪರ ಕಾಲದಿಂದ ಇಲ್ಲಿಯವರೆಗೆ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ನಮ್ಮ ಸರ್ಕಾರಗಳು ಆಡಳಿತ ಮಾಡಿಕೊಂಡು ಬಂದಿವೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಅವಧಿಯಲ್ಲೂ ಅವರು ಅವರದೇ ಆದ ಪ್ರಯತ್ನ ಮಾಡಿದ್ದಾರೆ. ಕಾವೇರಿ ವಿಚಾರದಲ್ಲಿ ರಾಜ್ಯದ ಜನರ ರಕ್ಷಣೆಗೆ ನಾನು ಹಾಗೂ ನಮ್ಮ ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3,500 ಕ್ಯುಸೆಕ್‌ ನೀರು ಹರಿಸಬೇಕೆಂದು ಸಿಡಬ್ಲ್ಯುಆರ್‌ಸಿ ಆದೇಶ ಆದಾಗ ನಮ್ಮ ಅಣೆಕಟ್ಟುಗಳು ತುಂಬಿರಲಿಲ್ಲ. ಆದರೆ, ಈಗ ರಾಜ್ಯದ ಜನರ ಪ್ರಾರ್ಥನೆಯಂತೆ ಮಳೆಯಾಗಿದ್ದು, ನಮ್ಮ ಪರಿಸ್ಥಿತಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದೆ. ಭಾನುವಾರ ಮಧ್ಯಾಹ್ನವರೆಗೆ ತಮಗೆ ಬಂದಿರುವ ಮಾಹಿತಿ ಪ್ರಕಾರ, ಕಬಿನಿಯಲ್ಲಿ 24,000, ಕೆಆರ್‌ಎಸ್ ನಲ್ಲಿ 22,000, ಹೇಮಾವತಿಯಲ್ಲಿ 11,884, ಹಾರಂಗಿಯಲ್ಲಿ 10,430 ಕ್ಯೂಸೆಕ್ ನೀರು ಒಳ ಹರಿವು ಇದೆ. ಕಬಿನಿ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ಅದರ ಸುರಕ್ಷತೆ ಹಿತದೃಷ್ಟಿಯಿಂದ ನೀರು ಹರಿಸಲು ಆದೇಶ ನೀಡಿದ್ದೇವೆ ಎಂದರು.

ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಕುಡಿಯುವ ನೀರಿನ ಭದ್ರತೆಗೆ ಜಲಾಶಯಗಳಲ್ಲಿ 40 ಟಿಎಂಸಿ ನೀರು ಉಳಿಸಿಕೊಳ್ಳಬೇಕು. ಅದರಲ್ಲಿ 36 ಟಿಎಂಸಿ ಕುಡಿಯುವ ಉದ್ದೇಶಕ್ಕೆ ಹಾಗೂ 4 ಟಿಎಂಸಿ ಆವಿಯಾಗುತ್ತದೆ. ನಾವಿನ್ನೂ ಆರಂಭಿಕ ಹಂತದಲ್ಲಿದ್ದು, ಮುಂಬರುವ ಜನವರಿ ತಿಂಗಳವರೆಗೂ ಪ್ರತಿ 15 ದಿನಕ್ಕೊಮ್ಮೆ ಕಾವೇರಿ ಸಮಿತಿ ಹಾಗೂ ಪ್ರಾಧಿಕಾರ ಸಭೆ ಮಾಡಲಿದ್ದಾರೆ. ಹೀಗಾಗಿ ನಾವು ಎಚ್ಚರ ವಹಿಸಬೇಕಾಗಿದೆ. ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

ಈ ಹಿಂದಿನ ವರ್ಷಗಳಲ್ಲಿ ನಾವು ತಮಿಳುನಾಡಿಗೆ ಜೂನ್ ತಿಂಗಳಲ್ಲಿ 9.19 ಟಿಎಂಸಿ ನೀರು ಹರಿಸಿದ್ದೆವು. ಆದರೆ ಈ ವರ್ಷ 2.9 ಟಿಎಂಸಿ ನೀರು ಬಿಟ್ಟಿದ್ದೇವೆ. ಕಳೆದ ವರ್ಷ ಜುಲೈ ನಲ್ಲಿ 31 ಟಿಎಂಸಿ ನೀರು ಹರಿಸಲಾಗಿತ್ತು. ಈ ವರ್ಷ 0.7 ಟಿಎಂಸಿ ನೀರು ಮಾತ್ರ ಹರಿಸಿದ್ದೇವೆ. ಈ ವರ್ಷ ಈವರೆಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ನಾವು ಹರಿಸಿರುವುದು 3.6 ಟಿಎಂಸಿ ಮಾತ್ರ. ಈ ವರ್ಷ ಜಲಾಶಯಗಳಿಂದ ನೀರು ಬಿಟ್ಟಿಲ್ಲ. ಕಬಿನಿ ಜಲಾಶಯ ತುಂಬಿರುವ ಹಿನ್ನೆಲೆಯಲ್ಲಿ ನೀರು ಹರಿಸಲಾಗುತ್ತಿದೆ ಎಂದರು.

ಬಂದ್ ಕೈಬಿಡುವಂತೆ ಮನವಿ

ಕೆಲ ಸಂಘ-ಸಂಸ್ಥೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ದೇವರು ಕಳೆದೆರಡು ದಿನಗಳಿಂದ ಕೃಪೆ ತೋರಿದ ಪರಿಣಾಮ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಕಾವೇರಿ ಸಂಬಂಧ ರೈತರು, ಕನ್ನಡ ಪರ ಎಲ್ಲಾ ಸಂಘಟನೆಗಳು ಆ.13ರಂದು ಹಮ್ಮಿಕೊಂಡಿರುವ ರಾಜ್ಯ ಬಂದ್ ಕೈ ಬಿಡಬೇಕು. ಸಂಘಟನೆ ಜೊತೆಗೆ ನಾನು ಹಾಗೂ ಸಚಿವರು ಚರ್ಚೆ ಮಾಡುತ್ತೇವೆ. ಬಂದ್ ಮಾಡುವುದರಿಂದ ಯಾವುದೇ ಪರಿಹಾರ ಸಿಗಲ್ಲ. ಸರ್ಕಾರವೇ ನಿಮ್ಮ ಪರವಾಗಿ ನಿಂತಿರುವಾಗ ಪ್ರತಿಭಟನೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ತಮಿಳುನಾಡಿಗೆ ಕಾನೂನು ಚೌಕಟ್ಟಿನಲ್ಲಿ ಉತ್ತರ

ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡಿನ ಡಿಎಂಕೆ ಪಕ್ಷ ಖಾಸಗಿಯಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದಕ್ಕೆ ಕಾನೂನು ಚೌಕಟ್ಟಿನಲ್ಲಿ ಉತ್ತರ ನೀಡುತ್ತೇವೆ. ನನ್ನ ಅನುಭವದ ಪ್ರಕಾರ ಇಂತಹ ವಿಚಾರದಲ್ಲಿ ಖಾಸಗಿ ಅರ್ಜಿಗಳಿಗೆ ಮಾನ್ಯತೆ ನೀಡುವುದು ಬಹಳ ಕಡಿಮೆ. ನ್ಯಾಯಾಲಯದ ವಿಚಾರದಲ್ಲಿ ಹಿರಿಯರ ಅನುಭವ ಪರಿಗಣಿಸಬೇಕು. ತಮಿಳುನಾಡು ಮುಂದೆ ಯಾವ ಹೆಜ್ಜೆ ಇಡುತ್ತದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ. ಅವರು ಎಷ್ಟು ಕೃಷಿ ಭೂಮಿಗೆ ನೀರು ಬಳಸುತ್ತಾರೆ ಎಂಬುದನ್ನು ಗಮನಿಸುತ್ತೇವೆ. ನಾವು ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಬಯಸುತ್ತೇವೆ. ಹೀಗಾಗಿ ರೈತರು, ಜನ ಪ್ರತಿನಿಧಿಗಳು, ಕಾನೂನು ತಜ್ಞರು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆಯಲಾಗುವುದು ಎಂದರು.

ನಾನು ಕಾವೇರಿ ಕಣಿವೆ ರೈತನ ಮಗ, ರಾಜ್ಯದ ಹಿತಾಸಕ್ತಿ ಬಲಿಕೊಡುವ ಪ್ರಶ್ನೆಯೇ ಇಲ್ಲ. ಸದ್ಯಕ್ಕೆ ವರುಣ ನಮಗೆ ಕೃಪೆತೋರಿದ್ದಾನೆ. ಸರ್ಕಾರ ನಿಮ್ಮ ಪರವಾಗಿದೆ. ಕಾವೇರಿ ವಿಚಾರದಲ್ಲಿ ರಾಜ್ಯದ ಜನರ ರಕ್ಷಣೆಗೆ ನಾನು ಹಾಗೂ ನಮ್ಮ ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ.

- ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ

ಏನಿದು ಸಂಕಷ್ಟ ಸೂತ್ರ?

ತಮಿಳುನಾಡಿಗೆ ಕರ್ನಾಟಕ ಪ್ರತಿ ತಿಂಗಳು ಎಷ್ಟು ನೀರು ಬಿಡುಗಡೆ ಮಾಡಬೇಕು ಎಂಬ ಸೂತ್ರ ಇದೆ. ಆದರೆ ನೀರಿನ ಕೊರತೆಯಾದಾಗ ಬಿಡುಗಡೆ ಮಾಡಬೇಕಿರುವ ನೀರಿನ ಬಗ್ಗೆ ಯಾವುದೇ ಸೂತ್ರ ಇಲ್ಲ. ಸಂಕಷ್ಟ ಕಾಲದಲ್ಲಿ ಯಾವ ರೀತಿ ನೀರನ್ನು ಹಂಚಿಕೊಳ್ಳಬೇಕು ಎಂಬ ಮಾರ್ಗಸೂಚಿಯೇ ಸಂಕಷ್ಟ ಸೂತ್ರ.

ಬಂದ್ ಕೈಬಿಡುವಂತೆ ಮನವಿ

ದೇವರು ಕಳೆದೆರಡು ದಿನಗಳಿಂದ ಕೃಪೆ ತೋರಿದ ಪರಿಣಾಮ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಕಾವೇರಿ ಸಂಬಂಧ ರೈತರು, ಕನ್ನಡ ಪರ ಎಲ್ಲಾ ಸಂಘಟನೆಗಳು ಆ.13ರಂದು ಹಮ್ಮಿಕೊಂಡಿರುವ ರಾಜ್ಯ ಬಂದ್ ಕೈ ಬಿಡಬೇಕು. ಸಂಘಟನೆ ಜೊತೆಗೆ ನಾನು ಹಾಗೂ ಸಚಿವರು ಚರ್ಚೆ ಮಾಡುತ್ತೇವೆ. ಬಂದ್ ಮಾಡುವುದರಿಂದ ಯಾವುದೇ ಪರಿಹಾರ ಸಿಗಲ್ಲ ಎಂದು ಮುಖ್ಯಮಂತ್ರಿ ಡಿಕೆಶಿ ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬರಗಾಲದಲ್ಲೂ ಭರದ ಮಳೆ - ಮಲೆನಾಡು, ಕರಾವಳಿಯಲ್ಲಿ ಧಾರಾಕಾರ ಮಳೆಗೆ 4 ಬಲಿ
2ನೇ ಬಾರಿ ಜೀವನಾಂಶಕ್ಕೆ ಅವಕಾಶವಿಲ್ಲ : ಹೈಕೋರ್ಟ್‌