ಕಾವೇರಿ ‘ವರಿ’ ಚರ್ಚೆಗೆ ಇಂದು ಸರ್ವ ಪಕ್ಷ ಸಭೆ

Published : Aug 02, 2026, 07:03 AM IST
DK Shivakumar

ಸಾರಾಂಶ

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಪಡೆದು, ರಾಜ್ಯದ ಮುಂದಿನ ಕ್ರಮ ನಿರ್ಧರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಭಾನುವಾರ ಸರ್ವ ಪಕ್ಷ ಸಭೆ ನಡೆಯಲಿದೆ.

 ಬೆಂಗಳೂರು :  ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಪಡೆದು, ರಾಜ್ಯದ ಮುಂದಿನ ಕ್ರಮ ನಿರ್ಧರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಭಾನುವಾರ ಸರ್ವ ಪಕ್ಷ ಸಭೆ ನಡೆಯಲಿದೆ.

ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಹರಿವು ಕುಸಿತ ಕಂಡಿದ್ದು, ಇಂಥ ಸಂಕಷ್ಟದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದು ರಾಜ್ಯ ಸರ್ಕಾರ ಹೇಳಿದೆ. ಹೀಗಿರುವಾಗಲೂ ತಮಿಳುನಾಡಿಗೆ ಪ್ರತಿದಿನ 3500 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶಿಸಿದೆ. ಈ ಆದೇಶ ಪಾಲನೆ ಅಥವಾ ತಿರಸ್ಕಾರ ಹಾಗೂ ರಾಜ್ಯದ ಮುಂದಿರುವ ಆಯ್ಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತಿದೆ.

ಜತೆಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶ ಪಾಲಿಸದಿದ್ದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾದರೆ, ಯಾವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆಯೂ ಚರ್ಚಿಸಿ ನಿರ್ಧರಿಸಲಾಗುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ಕೂಡ ನೀರು ಬಿಡಲು ಆದೇಶಿಸಿದರೆ, ಆಗ ರಾಜ್ಯ ಸರ್ಕಾರ ಯಾವ ನಡೆ ಇಡಬೇಕು ಎಂಬ ಬಗ್ಗೆಯೂ ವಿಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

ಮೇಕೆದಾಟು ಪ್ರಸ್ತಾಪ?:

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಕ್ಕಪಕ್ಕದ ರಾಜ್ಯಗಳಿಂದ ಒಪ್ಪಿಗೆ ಅಗತ್ಯವಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ. ಅದರ ನಡುವೆಯೇ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್‌ ತಿರಸ್ಕರಿಸಿ, ಹೊಸದಾಗಿ ಡಿಪಿಆರ್‌ ಸಲ್ಲಿಸುವಂತೆಯೂ ಸೂಚಿಸಿದೆ. ಈ ವಿಚಾರಗಳೂ ಸರ್ವ ಪಕ್ಷ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.

ಸಭೆಯಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್‌ಎಸ್‌, ಹೇಮಾವತಿ, ಹಾರಂಗಿ ಮತ್ತು ಕಬಿನಿಯಲ್ಲಿನ ನೀರಿನ ಶೇಖರಣೆ, ತಮಿಳುನಾಡಿಗೆ ನೀರು ಹರಿಸಿದರೆ ಉಳಿಯುವ ನೀರಿನ ಪ್ರಮಾಣ, ಮುಂದಿನ ಮಳೆಗಾಲದವರೆಗೆ ಕುಡಿಯುವ ಉದ್ದೇಶಕ್ಕೆ ಅಗತ್ಯವಿರುವ ನೀರಿನ ಪ್ರಮಾಣ ಹಾಗೂ ಜಲಾಶಯಗಳಲ್ಲಿ ಉಳಿಯುವ ನೀರು ಸಾಕಾಗಲಿದೆಯೇ ಎಂಬ ಕುರಿತು ಸರ್ಕಾರದಿಂದ ವಿರೋಧ ಪಕ್ಷದ ನಾಯಕರು, ಶಾಸಕರಿಗೆ ಮಾಹಿತಿ ನೀಡಲಾಗುತ್ತದೆ.

ಒಂದು ವೇಳೆ ಹೊಸದಾಗಿ ಡಿಪಿಆರ್‌ ಸಲ್ಲಿಸಬೇಕೆಂದರೆ ಯಾವೆಲ್ಲ ಅಂಶಗಳನ್ನು ಸೇರಿಸಬೇಕು, ಮೇಕೆದಾಟು ಯೋಜನೆ ಕುರಿತು ಕೇಂದ್ರ ಸರ್ಕಾರದ ಎದುರು ರಾಜಕೀಯವಾಗಿ ಒಗ್ಗಟ್ಟು ಪ್ರದರ್ಶಿಸುವ ಕುರಿತೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವಿಪಕ್ಷ ನಾಯಕರನ್ನು ಕೋರುವ ಸಾಧ್ಯತೆಗಳಿವೆ.

- ತಮಿಳುನಾಡಿಗೆ ನೀರು ಹರಿಸಬೇಕಿರುವ ಸಂಕಷ್ಟ

- ವಿಪಕ್ಷಗಳ ಅಭಿಪ್ರಾಯ ಕೇಳಲಿರುವ ಮುಖ್ಯಮಂತ್ರಿ

- ಮೇಕೆದಾಟು ವಿಚಾರವಾಗಿಯೂ ಸಭೆಯಲ್ಲಿ ಚರ್ಚೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನದಿಗೆ ಇಳೀಬೇಡಿ ಕೊಚ್ಚಿ ಹೋಗ್ತೀರ : ಹೋರಾಟಗಾರರಿಗೆ ಸಿಎಂ ಎಚ್ಚರಿಕೆ
ಹಲವಡೆ ಭಾರೀ ಮಳೆ, ಡ್ಯಾಂಗಳಿಗೆ ಭರ್ಜರಿ ನೀರು