ಕರ್ನಾಟಕ ನಿಮ್ಮ ಜತೆ ನಿಲ್ಲಲು ರೆಡಿ : ಮೋದಿಗೆ ಡಿಕೆಶಿ

Published : Aug 02, 2026, 06:52 AM IST
PM narendra Modi

ಸಾರಾಂಶ

‘ಭಾರತದ ಪ್ರಗತಿಯು ಕರ್ನಾಟಕದ ಜತೆಯಲ್ಲೇ ಆಗಬೇಕು. ಇಡೀ ರಾಜ್ಯ ನಿಮ್ಮ ಜತೆ ನಿಲ್ಲಲಿದೆ. ನಾವು ನಿಮ್ಮ ಜತೆ ಕೆಲಸ ಮಾಡಲು ಬಯಸುತ್ತೇವೆ. ಸಹಕಾರಯುತ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ನಮಗಿದೆ. ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ’ ಎಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

 ಮೈಸೂರು :  ‘ಭಾರತದ ಪ್ರಗತಿಯು ಕರ್ನಾಟಕದ ಜತೆಯಲ್ಲೇ ಆಗಬೇಕು. ಇಡೀ ರಾಜ್ಯ ನಿಮ್ಮ ಜತೆ ನಿಲ್ಲಲಿದೆ. ನಾವು ನಿಮ್ಮ ಜತೆ ಕೆಲಸ ಮಾಡಲು ಬಯಸುತ್ತೇವೆ. ಸಹಕಾರಯುತ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ನಮಗಿದೆ. ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾರೆ.

ಇಡೀ ವಿಶ್ವವೇ ಭಾರತವನ್ನು ಕರ್ನಾಟಕ ಹಾಗೂ ಬೆಂಗಳೂರು ಮೂಲಕ ನೋಡುತ್ತಿದೆ. ಹೀಗಾಗಿ ಕರ್ನಾಟಕಕ್ಕೆ ಉದಾರವಾಗಿ ಸಹಾಯ ಮಾಡಿ, ಕರ್ನಾಟಕವನ್ನು ರಕ್ಷಿಸಿ ಎಂದು ಕರ್ನಾಟಕ ಸಕಾರ ಹಾಗೂ ರಾಜ್ಯದ ಜನತೆಯ ಪರವಾಗಿ ಮನವಿ ಮಾಡುತ್ತೇನೆ ಎಂದೂ ತಿಳಿಸಿದ್ದಾರೆ.

ನಗರದ ಶ್ರೀರಾಮಕೃಷ್ಣ ವಿದ್ಯಾಶಾಲೆ ಆವರಣದಲ್ಲಿ ರಾಮಕೃಷ್ಣ ಆಶ್ರಮ ಶನಿವಾರ ಆಯೋಜಿಸಿದ್ದ ವಿವೇಕ ಸ್ಮಾರಕದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗಾಗಿ ಬೆಂಗಳೂರಿಗೆ ಬಂದಾಗ, ‘ಇಷ್ಟು ದಿನ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುತ್ತಾರೆ’ ಎಂದಿದ್ದರು. ಇದೇ ಸಂಸ್ಥೆಯಲ್ಲಿ ಓದಿದ್ದ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದರು ಎಂದು ಸ್ಮರಿಸಿದರು.

ನಮ್ಮಲ್ಲಿರುವ ಹವಾಮಾನ, ಸಂಸ್ಕೃತಿ ನಮ್ಮ ಶಕ್ತಿ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡುತ್ತಿದ್ದು ನಮ್ಮ ರಾಜ್ಯ ನಿಮ್ಮ ಜೊತೆಗೆ ನಿಲ್ಲುತ್ತದೆ. ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಇದು ಸಂಕಲ್ಪ ಭೂಮಿ. ವಿವೇಕಾನಂದರು ಮೈಸೂರಿನಿಂದ ವಿದೇಶಕ್ಕೆ ಪ್ರಯಾಣ ಮಾಡುವಾಗ ಜಮ್ಷೆಡ್ ಜೀ ಟಾಟಾ ಅವರಿಗೆ ಒಂದು ಮಾತು ಹೇಳಿದ್ದರು. ಇದು ಬಡ ರಾಷ್ಟ್ರ, ಇಲ್ಲಿ ವಿಜ್ಞಾನ ಸಂಸ್ಥೆಗಳು ಆರಂಭವಾಗಬೇಕು ಎಂದಿದ್ದರು. ನಂತರ ಟಾಟಾ ಅವರು ಮಹಾರಾಜರಿಗೆ ಈ ವಿಚಾರ ತಿಳಿಸಿದರು. ನಂತರ ಮಹಾರಾಜರು ಬೆಂಗಳೂರಿನಲ್ಲಿ 300 ಎಕರೆ ಜಾಗ ನೀಡಿದರು. ಅಲ್ಲೇ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಾರಂಭಿಸಲಾಗಿದೆ. ಇದು ಈ ದೇಶದ ವಿಜ್ಞಾನಕ್ಕೆ ಮೈಸೂರು ಮಹಾರಾಜರ ಕೊಡುಗೆ ಎಂದು ಕೊಂಡಾಡಿದರು.

ನಮ್ಮ ಸರ್ಕಾರ ಕೂಡ ವಿವೇಕಾನಂದರ ಆಲೋಚನೆ ಹೊಂದಿದೆ

ನಮ್ಮ ಸರ್ಕಾರ ಕೂಡ ವಿವೇಕಾನಂದರ ಆಲೋಚನೆ ಹೊಂದಿದೆ. ಯುವಯುಗ, ನವಯುಗ ಎಂಬುದು ನಮ್ಮ ಸರ್ಕಾರದ ಘೋಷಣೆ. ನಾವು ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕು. ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಯುವಕರು ಒಂದಾಗಬೇಕು, ಅವರ ಕಲೆ, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಯುವಕರ ಸಂಘ ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ನಮ್ಮ ಯುವಕರನ್ನು ಸದುಪಯೋಗಪಡಿಸಿಕೊಳ್ಳಬೇಕು. ಆ ಮೂಲಕ ಯುವಕರ ಮಾನಸಿಕ ಹಾಗೂ ದೈಹಿಕ ಶಕ್ತಿ ವೃದ್ಧಿಗೆ ಕೆಲಸ ಮಾಡಬೇಕಿದೆ. ಮೈಸೂರು ಇತಿಹಾಸ, ವಿಶ್ವದ ಇತಿಹಾಸ. ವಿವೇಕಾನಂದ ಅವರು 1893ರಲ್ಲಿ ಮೈಸೂರಿನಿಂದ ಹೆಜ್ಜೆ ಹಾಕಿ, ಮಹಾರಾಜರ ಪ್ರೋತ್ಸಾಹದಿಂದ ವಿದೇಶಕ್ಕೆ ಹೋಗಿ, ‘ನನ್ನ ಸಹೋದರ, ಸಹೋದರಿಯರೇ’ ಎಂದು ಭಾಷಣ ಮಾಡಿ ವಿಶ್ವದ ಗಮನ ಸೆಳೆದಿದ್ದರು. ಅವರಿಗೆ ಸಹಕಾರ ಕೊಟ್ಟ ಮಹಾರಾಜರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ವಿವೇಕಾನಂದರ ತ್ಯಾಗ ನಮಗೆ ಸ್ಫೂರ್ತಿ ಆಗಬೇಕು. ಅವರ ಶಕ್ತಿಯನ್ನು ನಾವು ಅಳವಡಿಸಿಕೊಳ್ಳಬೇಕು. ಈ ಕಾರ್ಯಕ್ರಮ ಯುವ ಕ್ರಾಂತಿಯ ಐತಿಹಾಸಿಕ ಘಳಿಗೆಯಾಗಿದೆ. ನೀವು ಸೋತಾಗ ಧೈರ್ಯವಾಗಿರಿ, ನೀವು ಗೆದ್ದಾಗ ಹೃದಯ ವೈಶಾಲ್ಯತೆ ಹೊಂದಿರಬೇಕು ಎಂದು ವಿವೇಕಾನಂದರು ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂಸ್ಥೆಯವರು ವಿವೇಕಾನಂದ ಸಾಂಸ್ಕೃತಿಕ ಕೇಂದ್ರವನ್ನು ಅನಾವರಣ ಮಾಡಿದ್ದಾರೆ. ಇದು ದೇಶದ ಆಸ್ತಿ. ದೇಶದ ಯುವಕರನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯಲು ಕಾರ್ಯಕ್ರಮ ರೂಪಿಸಿದ್ದಾರೆ. ಈ ಸಂಸ್ಥೆಗೆ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಪುರಂದರ ದಾಸರ ಪದಗಳು ನೆನಪಿಗೆ ಬರುತ್ತಿವೆ. ‘ಇದು ಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯಾ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯಾ’ ಎಂದು ದಾಸರು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ಭಾಗ್ಯ ಎಂದು ತಿಳಿಸಿದರು.

ಮೈಸೂರಲ್ಲಿ ಸಿಎಂ ಡಿಕೆಶಿಗೆ ಅದ್ಧೂರಿ ಸ್ವಾಗತ, ಮೆರವಣಿಗೆ:

ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿವಕುಮಾರ್ ಅವರನ್ನು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರು ಅದ್ಧೂರಿಯಾಗಿ ಬರ ಮಾಡಿಕೊಂಡರು. ನಂತರ ಕಾರಂಜಿಕೆರೆ ಬಳಿಯಿಂದ ಕುರುಬಾರಹಳ್ಳಿ ವೃತ್ತದವರೆಗೂ ತೆರೆದ ವಾಹನದಲ್ಲಿ ಅವರು ರೋಡ್ ಶೋ ನಡೆಸಿದರು. ಈ ವೇಳೆ ಡಿಕೆಶಿಗೆ ಮೈಸೂರು ಮಲ್ಲಿಗೆ ಹಾಗೂ ವೀಳ್ಯದೆಲೆಯ ಬೃಹತ್ ಹಾರಗಳನ್ನು ಕ್ರೇನ್ ಮೂಲಕ ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು. ಈ ವೇಳೆ ಅಜ್ಯಯ್ಯನವರ ಫೋಟೋವನ್ನು ಅಭಿಮಾನಿಯೊಬ್ಬರು ಉಡುಗೊರೆಯಾಗಿ ನೀಡಿದರು.

ಬಳಿಕ, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. 11 ಈಡುಗಾಯಿ ಒಡೆದು ಹರಕೆ ತೀರಿಸಿದರು. ಸಿಎಂ ಅವರ ಪತ್ನಿ ಉಷಾ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿನಿಂದ ಪೂಜಾ ಸಾಮಗ್ರಿ ಕಳಿಸಿದ್ದು, ಅದರಿಂದಲೇ ಪೂಜೆ ನೆರವೇರಿಸಿದರು.

ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಬರಗಾಲದ ಸಂದರ್ಭದಲ್ಲಿ ವರುಣನ ಕೃಪೆ ನಮಗೆ ಸಹಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿಗೆ 3,500 ಕ್ಯುಸೆಕ್ ನೀರು ಬಿಡುಗಡೆಗೆ ಆದೇಶ ಇದ್ದರೂ, ವಿರೋಧ ಪಕ್ಷಗಳನ್ನು ಸೇರಿಸಿ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಆದರೆ, ವರುಣ, ಕಾವೇರಿ, ಚಾಮುಂಡಿ ಈ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಅದಕ್ಕಾಗಿ ತಾಯಿ ಚಾಮುಂಡಿಗೆ ನಮಸ್ಕಾರ ಮಾಡುತ್ತೇನೆ ಎಂದು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಹಲವಡೆ ಭಾರೀ ಮಳೆ, ಡ್ಯಾಂಗಳಿಗೆ ಭರ್ಜರಿ ನೀರು
ಕರ್ನಾಟಕಕ್ಕೆ ವರುಣ ಕೃಪೆ : ಕಬಿನಿ ಭರ್ತಿ - ಕೆಆರ್‌ಎಸ್‌ಗೆ ಒಳಹರಿವು ಏರಿಕೆ