ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವಿನಯ್‌ಗೆ ಜಾಮೀನು

Published : Aug 01, 2026, 11:26 AM IST
Vinay Kulkarni Supreme Court

ಸಾರಾಂಶ

ಧಾರವಾಡದ ಬಿಜೆಪಿ‌ ಮುಖಂಡ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ ಸೇರಿ 10 ಮಂದಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಶುಕ್ರವಾರ ಆದೇಶಿಸಿದೆ.

  ಬೆಂಗಳೂರು :  ಧಾರವಾಡದ ಬಿಜೆಪಿ‌ ಮುಖಂಡ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ ಸೇರಿ 10 ಮಂದಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಶುಕ್ರವಾರ ಆದೇಶಿಸಿದೆ.

ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಅಮಾನತ್ತಿನಲ್ಲಿಟ್ಟು, ಜಾಮೀನು ನೀಡುವಂತೆ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ, ಚಂದ್ರಶೇಖರ ಇಂಡಿ ಮತ್ತಿತರರು ಸಲ್ಲಿಸಿದ್ದ ಮಧ್ಯಂತರ‌‌ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.

ಇದರಿಂದ‌ 2026ರ ಏ.15ರಿಂದ ಜೈಲಿನಲ್ಲಿರುವ ಕುಲಕರ್ಣಿ ಅವರು ಬಿಡುಗಡೆಯಾಗಲಿದ್ದಾರೆ. ಅಲ್ಲದೆ, ಅನರ್ಹವಾಗಿರುವ ಅವರ ಶಾಸಕ ಸ್ಥಾನ ಮರಳಿ ಸಿಗಲಿದೆ. ಶಾಸಕರಾಗಿ ವಿನಯ್‌ ಮುಂದುವರಿಯಲಿದ್ದಾರೆ.

ಆರೋಪಿಗಳೆಲ್ಲರೂ ತಲಾ 5 ಲಕ್ಷ ರು.‌ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ಸಂಪೂರ್ಣ ದಂಡದ ಮೊತ್ತವನ್ನು ವಿಶೇಷ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ. ಹೈಕೋರ್ಟ್ ಹಾಗೂ ವಿಶೇಷ ನ್ಯಾಯಾಲಯ ನಿರ್ದೇಶಿಸಿದಾಗ ಕೋರ್ಟ್‌ ಮುಂದೆ ಖುದ್ದು ಹಾಜರಾಗಬೇಕು ಎಂಬ ಷರತ್ತುಗಳನ್ನು ನ್ಯಾಯಪೀಠ ವಿಧಿಸಿದೆ.

ಮೇಲ್ಮನವಿ ಇತ್ಯರ್ಥ ಆಗುವವರೆಗೆ:

ಜನಪ್ರತಿ‌ನಿಧಿಗಳ ಕೋರ್ಟ್‌ ವಿಧಿಸಿರುವ ಶಿಕ್ಷೆ ರದ್ದುಕೋರಿ ಸಲ್ಲಿಸಲಾಗಿರುವ ಮೇಲ್ಮನವಿಗಳು ಇತ್ಯರ್ಥವಾಗುವವರೆಗೆ ವಿಚಾರಣಾ ನ್ಯಾಯಾಲಯದ ಆದೇಶ ಅಮಾನತಿನಲ್ಲಿರಿಸಲಾಗಿದೆ. ಮೇಲ್ಮನವಿದಾರರನ್ನು ಷರತ್ತುಗಳಿಗೆ ಒಳಪಟ್ಟಂತೆ ಜಾಮೀನು ಮೇಲೆ ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.

ಚಂದ್ರಶೇಖರ ಇಂಡಿ (ಎ16), ವಿನಯ ಕುಲಕರ್ಣಿ (ಎ15), ಎಂ.ದಿನೇಶ್ (ಎ8), ಎಸ್.ಅಶ್ವಥ್ (ಎ9), ಕೆ.ಎಸ್.ಸುನೀಲ್ (ಎ10), ನಜೀರ್ ಅಹಮದ್ (ಎ 11), ಶಹನವಾಜ್ (ಎ12), ಕೆ.ನೂತನ್ (ಎ.13), ಸಿ.ಹರ್ಷಿತ್ (ಎ14) ಹಾಗೂ ಚನ್ನಕೇಶವ ಬಿ.ಟಿಂಗರೀಕರ (ಎ19) ಅವರು ಜಾಮೀನು ಪಡೆದಿರುವ ಆರೋಪಿಗಳಾಗಿದ್ದಾರೆ.

ಪ್ರಕರಣವೇನು?:

2016ರಲ್ಲಿ ನಡೆದಿದ್ದ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್‌ ವಿನಯ್ ಕುಲಕರ್ಣಿ ಸೇರಿ ಒಟ್ಟು 17 ಮಂದಿಯನ್ನು ಅಪರಾಧಿಗಳು ಎಂದು ನಿರ್ಧರಿಸಿತ್ತು. ಇದರಲ್ಲಿ 2026ರ ಏ.17ರಂದು ವಿನಯ್‌ ಮತ್ತು ಇಂಡಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ ಕುಲಕರ್ಣಿ ಹಾಗೂ ಇತರೆ ಆರೋಪಿಗಳು ಜೀವಾವಧಿ ಶಿಕ್ಷೆ ಅಮಾನತುಪಡಿಸಿ ಜಾಮೀನು ನೀಡುವಂತೆ ಕೋರಿ ಮಧ್ಯಂತರ ಮನವಿ‌ ಸಲ್ಲಿಸಿದ್ದರು.

ಇನ್ನು ಯೊಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ತನಿಖಾ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ ಹಾಗೂ ಅಸಲಿ ಸಾಕ್ಷಿಗಳನ್ನು ಮರೆಮಾಚಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಆರೋಪದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಚನ್ನಕೇಶವ ಬಿ.ಟಿಂಗರೀಕರ (ಎ19) ಅವರ ಶಿಕ್ಷೆಯನ್ನೂ ಅಮಾನತಿನಲ್ಲಿಟ್ಟಿರುವ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇತರ ಆರೋಪಿಗಳಿಗೆ ವಿಧಿಸಿರುವ ಷರತ್ತುಗಳನ್ನೇ ಟಿಂಗರೀಕರ ಅವರಿಗೂ ವಿಧಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಾಳೆ 3991 ಪೇದೆ ಹುದ್ದೆ ಭರ್ತಿಗೆ ಪರೀಕ್ಷೆ: 4.54 ಲಕ್ಷ ಅಭ್ಯರ್ಥಿಗಳಿಂದ ನೋಂದಣಿ
ನಾಡಿದ್ದು ಸಂಪುಟ ವಿಸ್ತರಣೆ 99% ಗ್ಯಾರಂಟಿ : ಡಿಕೆಶಿ