ಕರ್ನಾಟಕಕ್ಕೆ ವರುಣ ಕೃಪೆ : ಕಬಿನಿ ಭರ್ತಿ - ಕೆಆರ್‌ಎಸ್‌ಗೆ ಒಳಹರಿವು ಏರಿಕೆ

Published : Aug 02, 2026, 06:40 AM IST
Kabini Dam

ಸಾರಾಂಶ

ಬರಗಾಲದ ನಡುವೆಯೂ ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ನದಿ ನಿಯಂತ್ರಣಾ ಸಮಿತಿ ಮತ್ತು ಕಾವೇರಿ ನದಿ ನಿರ್ವಹಣಾ ಮಂಡಳಿ ಆದೇಶದಿಂದಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ಸರ್ಕಾರಕ್ಕೆ ಕಡೆಯ ಘಳಿಗೆಯಲ್ಲಿ ವರುಣನ ಕೃಪೆಯಾಗಿದೆ.

  ಎಚ್‌.ಡಿ.ಕೋಟೆ/ ಮಡಿಕೇರಿ :  ಬರಗಾಲದ ನಡುವೆಯೂ ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ನದಿ ನಿಯಂತ್ರಣಾ ಸಮಿತಿ ಮತ್ತು ಕಾವೇರಿ ನದಿ ನಿರ್ವಹಣಾ ಮಂಡಳಿ ಆದೇಶದಿಂದಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ಸರ್ಕಾರಕ್ಕೆ ಕಡೆಯ ಘಳಿಗೆಯಲ್ಲಿ ವರುಣನ ಕೃಪೆಯಾಗಿದೆ. ಕೇರಳದ ವಯನಾಡು ಮತ್ತು ಕರ್ನಾಟಕದ ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯ ಪರಿಣಾಮ ಕಬಿನಿ ಮತ್ತು ಹಾರಂಗಿ ಆಣೆಕಟ್ಟುಗಳು ತುಂಬಿದ್ದು, ತಮಿಳುನಾಡಿಗೆ ಸೂಚಿಸಿದ್ದಕ್ಕಿಂತಲೂ ಹೆಚ್ಚಿನ ನೀರು ಹರಿವು ಆರಂಭವಾಗಿದೆ. 

 ಹೀಗಾಗಿ ನೀರು ಬಿಟ್ಟರೆ ಕರ್ನಾಟಕದ ರೈತರ ಆಕ್ರೋಶ, ಬಿಡದೇ ಇದ್ದರೆ ನ್ಯಾಯಾಲಯದ ಛೀಮಾರಿಗೆ ಗುರಿಯಾಗಬೇಕಿದ್ದ ಸಂಕಷ್ಟದಿಂದ ಸದ್ಯಕ್ಕೆ ಕರ್ನಾಟಕ ಸರ್ಕಾರ ಪಾರಾಗಿದೆ. ಮತ್ತೊಂದೆಡೆ ಅಧಿಕಾರಕ್ಕೆ ಏರಿದ ಬಳಿಕ ಮೊದಲ ಬಾರಿಗೆ ಕಾವೇರಿ ಬಿಕ್ಕಟ್ಟು ಎದುರಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡಾ ಸದ್ಯಕ್ಕೆ ಜಲಗಂಡಾಂತರಿಂದ ಪಾರಾಗಿದ್ದಾರೆ.

ಕಬಿನಿ ಭರ್ತಿ:

ಕೇರಳದ ವಯನಾಡು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಇರುವ ಕಬಿನಿ ಜಲಾಶಯವು ಭರ್ತಿ ಆಗುವ ಹಂತ ತಲುಪಿದೆ. ಸದ್ಯ ಜಲಾಶಯಕ್ಕೆ 16000 ಕ್ಯುಸೆಕ್‌ ಒಳಹರಿವು ಇದ್ದು, 10000 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಗರಿಷ್ಠ 2284 ಅಡಿ ನೀರು ಸಂಗ್ರಹದ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2,281 ಅಡಿ ನೀರು ಸಂಗ್ರಹವಾಗಿದ್ದು ಯಾವುದೇ ಹೊತ್ತಿನಲ್ಲಿ ತುಂಬಲಿದೆ. ಈ ನೀರು ನೇರವಾಗಿ ಬಿಳಿಗೊಂಡ್ಲುವಿನ ಮೂಲಕ ತಮಿಳುನಾಡು ಸೇರಲಿದೆ.

ಅಂದರೆ ತಮಿಳುನಾಡಿಗೆ ಬಿಡಬೇಕಿದ್ದ 3500 ಕ್ಯುಸೆಕ್ ಬದಲಾಗಿ ಹೆಚ್ಚುವರಿ ನೀರು ತಮಿಳುನಾಡನ್ನು ಸೇರಲಿದೆ. ಅಷ್ಟರ ಮಟ್ಟಿಗೆ ಕರ್ನಾಟಕ ಸರ್ಕಾರ ಬಿಕಟ್ಟಿನಿಂದ ಪಾರಾಗಿದೆ.

ಹಾರಂಗಿಯೂ ಭರ್ತಿ:

ಈ ನಡುವೆ ಕೊಡಗು ಜಿಲ್ಲೆಯಾದ್ಯಂತ ಶನಿವಾರವೂ ಭಾರಿ ಮಳೆ ಆಗಿದ್ದು, ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

2,859 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಶನಿವಾರ ನೀರಿನ ಮಟ್ಟ 2857.83 ಅಡಿಗಳಷ್ಟಿತ್ತು. ಸದ್ಯ ಜಲಾಶಯಕ್ಕೆ ಒಳಹರಿವು 9896 ಕ್ಯುಸೆಕ್ ಇದ್ದು, 20000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಕೆಆರ್‌ಎಸ್‌ಗೆ ಒಳಹರಿವು ಏರಿಕೆ:

ಹಾರಂಗಿಯಿಂದ ಹೆಚ್ಚುವರಿ ನೀರು ಹೊರಬಿಡುತ್ತಿರುವ ಕಾರಣ, ಕೃಷ್ಣರಾಜಸಾಗರ ಜಲಾಶಯಕ್ಕೆ ಶನಿವಾರ ರಾತ್ರಿ 8 ಗಂಟೆ ವೇಳೆಗೆ 20,438 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಶುಕ್ರವಾರ 93.55 ಅಡಿ ಇದ್ದ ಜಲಾಶಯದಲ್ಲಿ ನೀರಿನ ಮಟ್ಟ ಶನಿವಾರ 95.57 ಅಡಿಗೆ ಏರಿದೆ. ಇನ್ನು ಜಲಾಶಯದಿಂದ 1768 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಗರಿಷ್ಠ 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 19.535 ಟಿಎಂಸಿ ನೀರು ಸಂಗ್ರಹವಾಗಿದೆ.

ಚಿಕ್ಕಮಗಳೂರು ವ್ಯಾಪ್ತಿಯಲ್ಲೂ ಉತ್ತಮ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ 11685 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯ ಶೇ.70ರಷ್ಟು ಮಾತ್ರ ಭರ್ತಿ ಆಗಿರುವ ಕಾರಣ 500 ಕ್ಯೂಸೆಕ್ ನೀರು ಮಾತ್ರ ಹೊರಬಿಡಲಾಗುತ್ತಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಶೈಕ್ಷಣಿಕ ಸೇವಾ ಚಟುವಟಿಕೆಗಳಿಗೆ ಆದ್ಯತೆ: ರಾಜುಚಂದ್ರಶೇಖರ್‌
ಸರ್ಕಾರಿ ಸೇವೆಯಲ್ಲಿ ಸೇವಾ ಮನೋಭಾವ ಮುಖ್ಯ