ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಕಡಿತವಾಗುವ ದಸರಾ ರಜೆ ದಿನಗಳನ್ನು ಪರ್ಯಾಯ ರೀತಿಯಲ್ಲಿ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ದಸರಾ ರಜೆ ಅವಧಿಯಲ್ಲೇ ಸಮೀಕ್ಷಾ ಕಾರ್ಯ ಕೈಗೊಳ್ಳುವುದು ಅನಿವಾರ್ಯ. ಶಾಲಾ ಅವಧಿಯ ದಿನಗಳಲ್ಲಿ ಅವರನ್ನು ಸಮೀಕ್ಷೆ ಕಾರ್ಯಕ್ಕೆ ಬಳಸಿಕೊಳ್ಳಲು ಆಗುವುದಿಲ್ಲ. ಶಿಕ್ಷಕರನ್ನು ಬಿಟ್ಟು ಬೇರೆಯವರಿಂದಲೂ ಸಮೀಕ್ಷೆ ನಡೆಸಲು ಆಗುವುದಿಲ್ಲ ಎಂದರು.
ಸರ್ಕಾರದ ಆದೇಶದಂತೆ ಶಿಕ್ಷಕ ಅ.7ರವರೆಗೆ ಸಮೀಕ್ಷೆ ನಡೆಸುತ್ತಾರೆ. ಯಾವುದೇ ಸಮಸ್ಯೆ ಇಲ್ಲ. ಶಿಕ್ಷಕರ ಸಂಘಟನೆಗಳೊಂದಿಗೆ ನಾವು ಮಾತನಾಡಿದ್ದೇವೆ. ಸಮೀಕ್ಷಾ ಕಾರ್ಯಕ್ಕಾಗಿ ಅವರಿಗೆ ಸರ್ಕಾರ ವಿಶೇಷ ಸಂಭಾವನೆ ನೀಡಲಿದೆ. ಅವರಿಗೆ ಕಡಿತವಾಗುವ ದಸರಾ ರಜೆ ದಿನಗಳನ್ನು ಬೇರೆ ದಿನಗಳಲ್ಲಿ ಪರ್ಯಾಯವಾಗಿ ಕೊಡಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಅಂಥದ್ದೊಂದು ಚಿಂತನೆ ಇದೆ ಎಂದು ಹೇಳಿದರು.
ಬಿಜೆಪಿಗರು ಗಣೇಶ ಹಬ್ಬವನ್ನು
ಗಲಾಟೆ ಹಬ್ಬ ಮಾಡುತ್ತಿದ್ದಾರೆ
ಬಿಜೆಪಿಯವರು ರಾಜ್ಯದಲ್ಲಿ ಗಣೇಶ ಹಬ್ಬವನ್ನು ಗಲಾಟೆ ಹಬ್ಬವನ್ನಾಗಿ ಪರಿವರ್ತನೆ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಮಧು ಬಂಗಾರಪ್ಪ ಆರೋಪಿಸಿದರು.
ಮದ್ದೂರು ಗಣೇಶೋತ್ಸವ ವೇಳೆ ಕಲ್ಲೆಸೆತ ಕುರಿತ ಪ್ರಶ್ನೆಗೆ, ದೇಶದಲ್ಲಿ ಎಲ್ಲಾ ಧರ್ಮದವರಿಗೂ ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಅವಕಾಶವಿದೆ. ಇಂಥ ಆಚರಣೆಗಳ ವೇಳೆ ಯಾವುದೇ ಕಾನೂನು ಉಲ್ಲಂಘನೆ, ಘರ್ಷಣೆ, ಗಲಾಟೆಗಳು ನಡೆದರೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಮದ್ದೂರು ಕಲ್ಲೆಸೆತ ಪ್ರಕರಣ ಸಂಬಂಧವೂ 11 ಜನರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ, ಬಿಜೆಪಿಗರು ಇತ್ತೀಚಿನ ವರ್ಷಗಳಲ್ಲಿ ಗಣೇಶ ಹಬ್ಬವನ್ನು ಗಲಾಟೆ ಹಬ್ಬವನ್ನಾಗಿ ಪರಿವರ್ತಿಸುತ್ತಿದ್ದಾರೆ. ಬ್ರಿಟಿಷರ ರೀತಿ ಕೋಮು ಭಾವನೆ ಪ್ರಚೋದಿಸಿ ಸಮಾಜ ಒಡೆದಾಳುವ ಪ್ರಯತ್ನ ಮಾಡುತ್ತಿದ್ದಾರೆ. ಬ್ರಿಟಿಷರ ಕುತಂತ್ರ ಅನುಸರಿಸುತ್ತಿರುವುದರಿಂದ ಭಾರತೀಯ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ ಎಂದು ಗುರುತಿಸಿಕೊಂಡಿದೆ ಎಂದು ಕಿಡಿಕಾರಿದರು.