ಬಿಇ ಸೀಟು ಸಿಕ್ರೂ ಕಾಲೇಜು ಸೇರದವರಿಗೆ ಸಂಕಷ್ಟ

Published : Sep 22, 2025, 06:40 AM IST
education

ಸಾರಾಂಶ

ಎಂಜಿನಿಯರಿಂಗ್ ಮೂರನೇ ಅಥವಾ ಅಂತಿಮ ಸುತ್ತಿನಲ್ಲಿ‌ ಸೀಟು ಹಂಚಿಕೆಯಾಗಿದ್ದರೂ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಬಂಧಿಸಿದ ಕಾಲೇಜುಗಳಲ್ಲಿ ವರದಿ ಮಾಡಿಕೊಂಡಿಲ್ಲ. ಆ ಎಲ್ಲಾ ವಿದ್ಯಾರ್ಥಿಗಳಿಗೂ ಶೀಘ್ರ ನೋಟಿಸ್‌ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.

  ಬೆಂಗಳೂರು :  ಎಂಜಿನಿಯರಿಂಗ್ ಮೂರನೇ ಅಥವಾ ಅಂತಿಮ ಸುತ್ತಿನಲ್ಲಿ‌ ಸೀಟು ಹಂಚಿಕೆಯಾಗಿದ್ದರೂ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಬಂಧಿಸಿದ ಕಾಲೇಜುಗಳಲ್ಲಿ ವರದಿ ಮಾಡಿಕೊಂಡಿಲ್ಲ. ಆ ಎಲ್ಲಾ ವಿದ್ಯಾರ್ಥಿಗಳಿಗೂ ಶೀಘ್ರ ನೋಟಿಸ್‌ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.

ಆ ವಿದ್ಯಾರ್ಥಿಗಳು ಬೇರೆ ಕಾಲೇಜಿನಲ್ಲಿ ಕಾಮೆಡ್‌-ಕೆ, ಮ್ಯಾನೇಜ್ಮೆಂಟ್‌ ಸೀಟಿಗೆ ಪ್ರವೇಶ ಪಡೆದಿದ್ದರೆ ಅದನ್ನು ಮಾನ್ಯ ಮಾಡದಂತೆ ಈಗಾಗಲೇ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವ ಪ್ರಾಧಿಕಾರವು. ಇದೀಗ ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಲು ಹೊರಟಿದೆ.

ಸರ್ಕಾರಿ ಕೋಟಾ ಸೀಟು ಸಿಕ್ಕರೂ ಪ್ರವೇಶ ಪಡೆಯದ ವಿದ್ಯಾರ್ಥಿಗಳು ಎಲ್ಲಿ ಹೋಗಿದ್ದಾರೆ, ಬೇರೆ ಕಾಲೇಜುಗಳಲ್ಲಿ ಮ್ಯಾನೇಜ್ಮೆಂಟ್‌ ಸೀಟಿಗೆ ದಾಖಲಾಗಿದ್ದಾರಾ? ಅಥವಾ ಬೇರೆ ಕೋರ್ಸುಗಳಿಗೆ ಪ್ರವೇಶ ಪಡೆದಿದ್ದಾರಾ? ಅಥವಾ ಇನ್ಯಾವ ಕಾರಣಕ್ಕೆ ಸಿಕ್ಕ ಸೀಟು ಕೈಚೆಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಕೆಇಎ ಮುಂದಾಗಿದೆ. ಅಥವಾ ಹೆಜ್ಜೆ ಹೆಜ್ಜೆಗೂ ಕಟ್ಟೆಚ್ಚರದಿಂದಲೇ ಕೌನ್ಸೆಲಿಂಗ್‌ ನಡೆಸಿದರೂ ಕಳೆದ ಸಾಲಿನಂತೆ ಈ ಬಾರಿ ಸೀಟ್‌ ಬ್ಲಾಕಿಂಗ್‌ ಜಾಲವೇನಾದರೂ ಸಿಇಟಿ ವಿದ್ಯಾರ್ಥಿಗಳ ಹೆಸರಲ್ಲಿ ಅಕ್ರಮ ಆಪ್ಷನ್‌ ಎಂಟ್ರಿ ನಡೆಸಿ ಆಟವಾಡಿದೆಯಾ ಎಂಬುದನ್ನು ಪತ್ತೆ ಹಚ್ಚಲು ಪ್ರಾಧಿಕಾರ ಹೊರಟಿದೆ.

ಈ ಹಿನ್ನೆಲೆಯಲ್ಲಿ ಮೊದಲು 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಿ, 3ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯುವುದು ಕಡ್ಡಾಯವಾದರೂ ಯಾವ ಕಾರಣಕ್ಕೆ ಪ್ರವೇಶ ಪಡೆದಿಲ್ಲ ಎಂದು ನೋಟಿಸ್‌ ನೀಡಿ ವಿವರಣೆ ಪಡೆಯಲಿದೆ. ವಿದ್ಯಾರ್ಥಿಗಳೂ ನೀಡುವ ಕಾರಣ ಹಾಗೂ ಸಮಜಾಯಿಷಿ ಆಧರಿಸಿ ಮುಂದೇನು ಮಾಡಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರದ ಉನ್ನತ ಮೂಲಗಳು ತಿಳಿಸಿವೆ.

ಕಳೆದ ವರ್ಷ 2300ಕ್ಕೂ ಹೆಚ್ಚು ಮಂದಿಗೆ ನೋಟಿಸ್‌:

2024ರಲ್ಲಿ ಕೂಡ ಇದೇ ರೀತಿ ಕೊನೆಯ ಸುತ್ತಿನಲ್ಲಿ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಕಂಪ್ಯೂಟರ್‌ ಸೈನ್ಸ್‌ನಂತಹ ಬಾರೀ ಬೇಡಿಕೆಯ ಸೀಟುಗಳು ಸಿಕ್ಕರೂ 2300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿರಲಿಲ್ಲ.

ಅವರೆಲ್ಲರಿಗೂ ನೋಟಿಸ್‌ ನೀಡಿದಾಗ ಉತ್ತರ ನೀಡಿದ ಬಹಳಷ್ಟು ವಿದ್ಯಾರ್ಥಿಗಳು ತಾವು ಆಪ್ಷನ್‌ ಎಂಟ್ರಿಯಲ್ಲೇ ಭಾಗವಹಿಸಿಲ್ಲ, ಅವರ ಲಾಗಿನ್‌ನಲ್ಲಿ ಬೇರೆ ಯಾರೋ ಎಲ್ಲೋ ಕೂತು ಆಪ್ಷನ್‌ ಎಂಟ್ರಿ ನಡೆಸಿರುವುದು ಬಯಲಾಗಿತ್ತು. ಇದರಿಂದ ಸೀಟ್‌ ಬ್ಯಾಕಿಂಗ್‌ ಜಾಲ ಬಡ ಮಕ್ಕಳಿಗೆ ಸಿಗಬೇಕಾದ ಸೀಟುಗಳನ್ನು ವಂಚಿಸುತ್ತಿರುವುದು ಬಹಿರಂಗವಾಗಿತ್ತು.

ಬಳಿಕ ಪ್ರಕರಣ ಸಂಬಂಧ ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆಗೆ ವಹಿಸಲಾಗಿತ್ತು. ಅಲ್ಲದೆ, ಕೆಇಎ ವೆಬ್‌ಸೈಟ್‌ನಲ್ಲಿ ಬಹು ವಿದ್ಯಾರ್ಥಿಗಳಿಗೆ ಸಂಬಂಧಿಸಿ ಆಪ್ಷನ್‌ ಎಂಟ್ರಿ ನಡೆಸಿದ ಇಂಟರ್‌ನೆಟ್‌ ಪ್ರೋಟೋಕಾಲ್‌(ಐಪಿ) ವಿಳಾಸದ ವಿರುದ್ದವೂ ಕ್ರಿಮಿನಲ್‌ ದೂರು ದಾಖಲಿಸಿ ತನಿಖೆಗೆ ಆದೇಶಿಸಲಾಗಿತ್ತು. ಸುಮಾರು 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಇದರೊಂದಿಗೆ ಸೀಟ್‌ ಬ್ಲಾಕಿಂಗ್‌ ದಂಧೆ ಇದರ ಹಿಂದೆ ಇರುವ ಶಂಕೆ ವ್ಯಕ್ತವಾಗಿತ್ತು. ತನಿಖೆ ಇನ್ನೂ ಪ್ರಗತಿಯಲ್ಲಿದ್ದು ಸತ್ಯಾಂಶ ಹೊರಬರಬೇಕಿದೆ.

- ಹಾಗಾದರೆ ಈ ವಿದ್ಯಾರ್ಥಿಗಳು ಎಲ್ಲಿ ಹೋಗಿದ್ದಾರೆ?

- ಇದರ ಹಿಂದೆ ಸೀಟ್‌ ಬ್ಲಾಕಿಂಗ್‌ ಜಾಲವೇನಾದ್ರೂ ಇದ್ಯಾ?

- ಉತ್ತರ ಹುಡುಕಲು ಹೊರಟಿರುವ ಪರೀಕ್ಷಾ ಪ್ರಾಧಿಕಾರ

PREV
Read more Articles on

Recommended Stories

ಸಮೀಕ್ಷೆಯಿಂದ 33 ಕ್ರಿಶ್ಚಿಯನ್‌ ಹಿಂದೂ ಡಿಲೀಟ್‌
ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ