ಭಾರತದ ಜೆನ್‌ ಝೀಗಳಿಗೊಂದು ಎಚ್ಚರಿಕೆಯ ಕರೆ

Published : Sep 21, 2025, 11:06 AM IST
International Youth Day

ಸಾರಾಂಶ

  ನೇಪಾಳದಲ್ಲಾದ ದಂಗೆ ಭಾರತದಲ್ಲೂ ನಡೆಯಬೇಕು ಎಂಬ ವಿಕೃತ ಹಂಬಲ ಕಾಂಗ್ರೆಸ್‌ ಹೇಳಿಕೆಗಳಲ್ಲಿ ಕಂಡುಬರುತ್ತಿದೆ. ಕಾಂಗ್ರೆಸ್‌ನ ಬೀದಿ ಹೋರಾಟದ ಆಶಯವೇನಾದರೂ ಯಶಸ್ವಿಯಾದರೆ, ಭಾರತ ಸಂಪಾದಿಸಿದ ಜಾಗತಿಕ ವರ್ಚಸ್ಸು, ಯುವಪೀಳಿಗೆಯ ಉಜ್ವಲವಾದ ಭವಿಷ್ಯ ಮತ್ತು ನಾಗರಿಕರ ನೆಮ್ಮದಿಯ ಬದುಕು ನೆಲಸಮವಾಗುತ್ತವೆ.

ನೆರೆಯ ದೇಶ ನೇಪಾಳದಲ್ಲಾದ ದಂಗೆ ಭಾರತದಲ್ಲೂ ನಡೆಯಬೇಕು ಎಂಬ ವಿಕೃತ ಹಂಬಲ ಕಾಂಗ್ರೆಸ್‌ ಹೇಳಿಕೆಗಳಲ್ಲಿ ಕಂಡುಬರುತ್ತಿದೆ. ಕಾಂಗ್ರೆಸ್‌ನ ಬೀದಿ ಹೋರಾಟದ ಆಶಯವೇನಾದರೂ ಯಶಸ್ವಿಯಾದರೆ, ಭಾರತ ಕಷ್ಟಪಟ್ಟು ಸಂಪಾದಿಸಿದ ಜಾಗತಿಕ ವರ್ಚಸ್ಸು, ಯುವಪೀಳಿಗೆಯ ಉಜ್ವಲವಾದ ಭವಿಷ್ಯ ಮತ್ತು ನಾಗರಿಕರ ನೆಮ್ಮದಿಯ ಬದುಕು ನೆಲಸಮವಾಗುತ್ತವೆ. ನೇಪಾಳದ ದಂಗೆ ಭಾರತಕ್ಕೆ ಎಚ್ಚರಿಕೆಯ ಘಂಟೆ ಮಾತ್ರವಲ್ಲ, ಜೆನ್‌ ಝೀಗಳ ವಿಚಾರಮಂಥನಕ್ಕೆ ವೇದಿಕೆಯೂ ಹೌದು.

-ದಿವ್ಯಾ ಹೆಗಡೆ ಕಬ್ಬಿನಗದ್ದೆ

2025 ಜಾಗತಿಕವಾಗಿ ಹಲವು ಮಹತ್ವದ ವಿದ್ಯಮಾನಗಳು ನಡೆದ ವರ್ಷ. ಭಾರತ-ಪಾಕ್‌ ಸಂಘರ್ಷ, ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ, ಹಲವು ದೇಶಗಳ ವಿರುದ್ಧ ಟ್ರಂಪ್ ನಡೆಸಿದ ವ್ಯಾಪಾರ ಸಮರ.. ಇವೆಲ್ಲವುಗಳ ಜೊತೆ ಮತ್ತೊಂದು ಮಹತ್ವದ ವಿದ್ಯಮಾನ ನಡೆಯಿತು. ಅದು ನೆರೆಯ ದೇಶ ನೇಪಾಳದಲ್ಲಿ ನಡೆದ ಆಂತರಿಕ ದಂಗೆ. ನೇಪಾಳದಲ್ಲಿ ‘ಜೆನ್ ಝೀ’ ತರುಣರ ಪಡೆ ನಡೆಸಿದ ಪ್ರತಿಭಟನೆ ಇಡೀ ಸರ್ಕಾರವನ್ನೇ ಉರುಳಿಸುವ ಮಟ್ಟಿಗೆ ತೀವ್ರವಾಗಬಹುದೆಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. ನೇಪಾಳವನ್ನು ಅಭಿವೃದ್ಧಿಹೀನವಾಗಿಸಿದ್ದ ಸರ್ಕಾರ, ತಾಂಡವವಾಡುತ್ತಿದ್ದ ನಿರುದ್ಯೋಗ ಸಮಸ್ಯೆ, ತುಂಬಿ ತುಳುಕುತ್ತಿದ್ದ ಭ್ರಷ್ಟಾಚಾರದಿಂದ ಅಲ್ಲಿನ ಯುವಜನತೆ ಬೇಸತ್ತಿದ್ದರು. ಅದೇ ಸಮಯಕ್ಕೆ ಭ್ರಷ್ಟ ರಾಜಕಾರಣಿಗಳ ಬಣ್ಣವನ್ನು ಬಯಲು ಮಾಡುತ್ತಿದ್ದ ಯುವಕರಿಗೆ ತಡೆಯೊಡ್ಡಲು ಸರ್ಕಾರ ವಾಟ್ಸಾಪ್, ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ 26 ಆ್ಯಪ್‌ಗಳ ಮೇಲೆ ನಿಷೇಧ ಹೇರಿತು. ಯುವಕರೊಳಗೆ ಕುದಿಯುತ್ತಿದ್ದ ಆಕ್ರೋಶ ಕಟ್ಟೆಯೊಡೆಯಲು ಇದೇ ಕಾರಣ ಸಾಕಾಯಿತು.

ಜೆನ್ ಝೀಗಳೆಲ್ಲ ಸರ್ಕಾರದ ವಿರುದ್ಧ ಬೀದಿಗಿಳಿದರು. ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ತೆರವುಗೊಳಿಸಬೇಕು, ಭ್ರಷ್ಟ ಪ್ರಧಾನಿಯನ್ನು ಕೆಳಗಿಳಿಸಿ ಹೊಸ ಸರ್ಕಾರವನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯೊಂದಿಗೆ ಪ್ರತಿಭಟನೆ ಆರಂಭಿಸಿದರು. ನೋಡನೋಡುತ್ತ ಪ್ರತಿಭಟನೆ ತೀವ್ರವಾಯಿತು. ರಾಜಧಾನಿ ಕಾಠ್ಮಂಡುವನ್ನು ದಾಟಿ ಇಡೀ ದೇಶಕ್ಕೆ ಹೋರಾಟದ ಕಾವು ಹಬ್ಬಿತು. ರಾಜಕಾರಣಿಗಳ ಮೇಲೆ ಹಲ್ಲೆ, ಮಂತ್ರಿಗಳ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಸಂಸತ್ ಭವನವನ್ನೇ ಭಸ್ಮ ಮಾಡುವ ಮೂಲಕ ಜೆನ್‌ ಝೀಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಪರಿಣಾಮ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ಕೊಟ್ಟರು. ಯುವಕರೇ ಮುಂದೆ ನಿಂತು ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಪ್ರಾಮಾಣಿಕ ವ್ಯಕ್ತಿಯೊಬ್ಬರನ್ನು ಆಯ್ಕೆಯೂ ಮಾಡಿದರು. ಇಲ್ಲಿಗೆ ನೇಪಾಳ ದಂಗೆ ಒಂದು ಹಂತದ ಸುಖಾಂತ್ಯ ಕಂಡಿತು ಎಂಬಷ್ಟರಲ್ಲಿ ಭಾರತದಲ್ಲಿ ಹೊಸ ತಲೆನೋವು ಶುರುವಾಯಿತು.

ಕಾಂಗ್ರೆಸ್‌ನ ಅಪಾಯಕಾರಿ ಕರೆ:

ಸರ್ಕಾರವನ್ನು ಸದಾ ಎಚ್ಚರಿಸುತ್ತಾ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ವಿಪಕ್ಷ ದೇಶವನ್ನು ಆಂತರಿಕ ದಂಗೆಗೆ ದೂಡುವಂಥ ಪ್ರಚೋದನಕಾರಿ ಹೇಳಿಕೆ ನೀಡಲಾರಂಭಿಸಿತು. ಕಾಂಗ್ರೆಸ್ ಹಿರಿಯ ನಾಯಕ ಉದಿತ್ ರಾಜ್, ‘ನೇಪಾಳದಲ್ಲಿ ಜನ ದಂಗೆಯೆದ್ದು ಸರ್ಕಾರವನ್ನು ಬೇರುಸಹಿತ ಕಿತ್ತು ಹಾಕಿದ್ದಾರೆ. ಭಾರತದಲ್ಲಿ ಅಂತಹದ್ದು ಸಂಭವಿಸಲು ಸಾಧ್ಯವಿಲ್ಲವೇ?’ ಎಂಬ ಪ್ರಶ್ನೆಯೆತ್ತಿದರು. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ ವಿಡಿಯೋವೊಂದನ್ನು ಶೇರ್ ಮಾಡಿ, ‘ಅವರ ಮಕ್ಕಳು Vs ನಿಮ್ಮ ಮಕ್ಕಳು’ ಎಂಬ ಅಡಿಬರಹ ಕೊಟ್ಟಿದ್ದರು. ಐಷಾರಾಮಿ ಜೀವನ ನಡೆಸುತ್ತಿರುವ ಬಿಜೆಪಿಗರ ಮಕ್ಕಳು Vs ಬಡವರ ಮಕ್ಕಳು ಎಂಬ ಸಂದೇಶ ಕೊಡುವ ಮೂಲಕ ಇಲ್ಲಿನ ಸಾಮಾನ್ಯ ಜನತೆಯನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಉದ್ದೇಶ ಆ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ರಾಹುಲ್ ಗಾಂಧಿ ಆಪ್ತ ಅರ್ಪಿತ್ ಶರ್ಮಾ, ನೇಪಾಳದ ಯುವಕರ ಲೂಟಿ, ಬೆಂಕಿ ಹಚ್ಚುವಿಕೆ ಕೃತ್ಯಗಳನ್ನು ಪೋಸ್ಟ್ ಮಾಡಿ, ‘ನೇಪಾಳದ ಯುವಕರು ಅದೆಷ್ಟು ಧೈರ್ಯವಂತರು! ಭಾರತದ ಯುವಕರಲ್ಲಿ ಆ ಮಟ್ಟಿನ ಧೈರ್ಯವಿಲ್ಲ. ಭಾರತದ 60 ಕೋಟಿ ಯುವ ಮತದಾರರೆಲ್ಲ ಒಟ್ಟಾಗಿ ಬಂದರೆ ದೇಶದ ಅಧಿಕಾರ ಸ್ಥಾನವನ್ನು ಅಲುಗಾಡಿಸಬಹುದು’ ಎಂದು ಕರೆಗೊಟ್ಟರು. ಆತನ ತಂದೆ 2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು ಎಂಬ ಸಂಗತಿ ಆ ಬಳಿಕ ಬೆಳಕಿಗೆ ಬಂತು. ನೇಪಾಳದ ರೀತಿಯಲ್ಲಿ ಭಾರತದಲ್ಲೂ ಅರಾಜಕತೆ ಸೃಷ್ಟಿಸಬೇಕು ಎಂಬಂಥ ಆಶಯದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಅನೇಕ ನಾಯಕರಿಂದ ಇದೇ ರೀತಿಯ ಪೋಸ್ಟ್‌ಗಳು, ಹೇಳಿಕೆಗಳು ಹರಿದಾಡಿದವು.

ಸ್ವಪಕ್ಷ ನಾಯಕನನ್ನೇ ಪ್ರಶ್ನಿಸಲಾಗದ ದ್ವಂದ್ವ:

ವಿಚಿತ್ರವೆಂದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಬಿಜೆಪಿಗರ ಮಕ್ಕಳನ್ನು ‘ನೆಪೊ ಕಿಡ್ಸ್’ (ಶ್ರೀಮಂತರ ಮಕ್ಕಳು) ಎಂದು ಟೀಕಿಸಿ ನಡೆದ ಈ ಅಭಿಯಾನದಲ್ಲಿ ಸ್ವತಃ ರಾಹುಲ್ ಗಾಂಧಿಯ ಶ್ರೀಮಂತ ರಾಜಕೀಯ ಹಿನ್ನೆಲೆ ಬಗ್ಗೆ ಎಲ್ಲರೂ ಮೌನ ವಹಿಸಿದ್ದರು. ಮೋತಿಲಾಲ್ ನೆಹರು ಅವರಿಂದ ಆರಂಭಿಸಿ ರಾಹುಲ್ ಗಾಂಧಿಯವರ 5ನೇ ತಲೆಮಾರಿನವರೆಗೆ ನಡೆದುಬಂದ ಕೌಟುಂಬಿಕ ರಾಜಕಾರಣ, ಅವರ ಕುಟುಂಬದಲ್ಲಿ ಕ್ರೋಡೀಕೃತವಾಗಿರುವ ಸಂಪತ್ತು, ಅವರದೇ ಕುಟುಂಬ ಅಧಿಕಾರದಲ್ಲಿದ್ದಾಗ ನಡೆದ ಹಗರಣಗಳ ಕುರಿತು ಯಾವ ಕಾಂಗ್ರೆಸ್ ನಾಯಕನೂ ಪ್ರಶ್ನಿಸುವ ಧೈರ್ಯ ಮಾಡಲಿಲ್ಲ.

ಕಾಂಗ್ರೆಸಿಗರಿಂದ ಟೀಕೆಗೆ ಒಳಗಾದ ಪ್ರಧಾನಿ ಮೋದಿಯವರಾಗಲಿ, ಗೃಹ ಸಚಿವ ಅಮಿತ್ ಶಾ ಆಗಲಿ ಅಥವಾ ಯಾವ ಬಿಜೆಪಿ ರಾಷ್ಟ್ರೀಯ ನಾಯಕನೇ ಆಗಲಿ ಪ್ರಧಾನಿಯ ಮಕ್ಕಳೋ ಮೊಮ್ಮಕ್ಕಳೋ ಅಲ್ಲ, ಅವರೆಲ್ಲ ಸ್ವಂತ ಪರಿಶ್ರಮದಿಂದ ಮೇಲೆ ಬಂದವರು ಎಂಬುದನ್ನು ಟೀಕಾಕಾರರು ಉದ್ದೇಶಪೂರ್ವಕವಾಗಿ ಮರೆತಿದ್ದರು. ದೇಶದ ಹಾಲಿ ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಲ್ಲಿ ಶೇ.20ರಷ್ಟು ಮಂದಿ ರಾಜಕೀಯ ಕೌಟುಂಬಿಕ ಹಿನ್ನೆಲೆ ಹೊಂದಿದವರು. ಈ ಪೈಕಿ ಕಾಂಗ್ರೆಸ್‌ನಲ್ಲೇ ಅತಿ ಹೆಚ್ಚು (ಶೇ.32ರಷ್ಟು) ಮಂದಿ ಕೌಟುಂಬಿಕ ಹಿನ್ನೆಲೆ ಹೊಂದಿದ್ದಾರೆ, ಇದರಲ್ಲಿ ಬಿಜೆಪಿಗರ ಪಾಲು ಶೇ.18 ಎಂಬ ಎಡಿಆರ್‌ನ ಇತ್ತೀಚಿನ ವರದಿ ಉಲ್ಲೇಖನೀಯ.

ರಾಷ್ಟ್ರೀಯ ಅಂತ್ಯಕ್ಕೆ ನಡೆದ ಷಡ್ಯಂತ್ರ:

ನೇಪಾಳವನ್ನು ನೆಪವಾಗಿಟ್ಟುಗೊಂಡು ಭಾರತದಲ್ಲಿ ಸಂಘರ್ಷಕ್ಕೆ ಪ್ರಚೋದನೆ ನೀಡಿದ ಈ ಹೇಳಿಕೆಗಳನ್ನೆಲ್ಲ ಕೇವಲ ರಾಜಕೀಯ ಹೇಳಿಕೆಗಳೆಂದೋ ಅಥವಾ ರಾಜಕಾರಣಿಗಳ ನಿತ್ಯ ಕೆಸರೆರಚಾಟದ ಭಾಗವೆಂದೋ ನಿರ್ಲಕ್ಷಿಸುವಂತಿಲ್ಲ. ಇದರ ಹಿಂದೆ ಆಂತರಿಕ ಸ್ಥಿರತೆಯನ್ನು ಅಲುಗಾಡಿಸುವ ಷಡ್ಯಂತ್ರವಿರುವ ಬಗ್ಗೆಯೂ ಪ್ರಜ್ಞಾವಂತರು ಚಿಂತಿಸುವ ಅಗತ್ಯವಿದೆ. ಭಾರತ ಇಂದು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ಡಿಜಿಟಲ್ ಕ್ರಾಂತಿಯ ಕೇಂದ್ರ ಮತ್ತು ಜಾಗತಿಕ ದಕ್ಷಿಣದ ಗಟ್ಟಿ ಧ್ವನಿ. ಹೂಡಿಕೆದಾರರು, ಕೈಗಾರಿಕೆಗಳು, ಉದ್ಯಮಿಗಳು ಮತ್ತು ಜಾಗತಿಕ ಶಕ್ತಿಗಳು ಇಂದು ಭಾರತವನ್ನು ನಂಬುತ್ತಿವೆ. ಇದಕ್ಕೆಲ್ಲ ಕಾರಣ ದೇಶದಲ್ಲಿರುವ ರಾಜಕೀಯ ಸ್ಥಿರತೆ ಮತ್ತು ಸಮರ್ಥ ನಾಯಕತ್ವ. ಹಿಂಸಾತ್ಮಕ ದಂಗೆಯೇ ಸರ್ಕಾರದ ಬದಲಾವಣೆಗೆ ಸೂಕ್ತ ಮಾರ್ಗ ಎಂಬ ಕಾಂಗ್ರೆಸ್ ಕಲ್ಪನೆ ಭಾಗಶಃ ಯಶಸ್ವಿಯಾದರೂ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಇದರಿಂದಾಗುವ ಮೊದಲ ಮತ್ತು ತಕ್ಷಣದ ಅಪಾಯವೆಂದರೆ ಆರ್ಥಿಕತೆ ಹಳಿ ತಪ್ಪುವುದು. ಯಾವುದೇ ದೇಶದ ಆಂತರಿಕ ಸಂಘರ್ಷದ ಭೀತಿ ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸುತ್ತದೆ. ಷೇರು ಮಾರುಕಟ್ಟೆ, ವಿದೇಶಿ ಹೂಡಿಕೆಯ ಹರಿವು, ಉತ್ಪಾದನಾ ಸಾಮರ್ಥ್ಯ ನೆಲ ಕಚ್ಚುತ್ತವೆ. ಶ್ರೀಲಂಕಾ ಮತ್ತು ನೇಪಾಳ ದಂಗೆಗಳು ಆರ್ಥಿಕ ಪತನಕ್ಕೆ ಹೇಗೆ ಕಾರಣವಾದವು ಎಂಬ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ಎರಡನೆಯ ಅಪಾಯವೆಂದರೆ ನಾಗರಿಕ ಕಲಹ. ಭಾರತ ಅಪಾರ ವೈವಿಧ್ಯಗಳ ನೆಲೆ. ಭಾಷೆ, ಪ್ರಾದೇಶಿಕತೆ, ಜಾತಿ, ಧರ್ಮ, ಸಂಸ್ಕೃತಿ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ನಮ್ಮಲ್ಲಿ ವಿವಿಧತೆಯಿದೆ. ಆದರೆ ಇಲ್ಲಿನ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಈ ಸಂಕೀರ್ಣತೆಯನ್ನು ಒಟ್ಟಿಗೆ ಹಿಡಿದಿಡುವಲ್ಲಿ ಯಶಸ್ವಿಯಾಗಿವೆ. ಕಾಂಗ್ರೆಸ್‌ನ ಆಶಯದಂತೆ ಹಿಂಸಾತ್ಮಕ ದಂಗೆಯೇನಾದರೂ ಆರಂಭವಾದರೆ, ಅದು ನಾಗರಿಕ ಸಂಘರ್ಷಕ್ಕೆ ಕಾರಣವಾಗಬಹುದು. ಕುಂದುಕೊರತೆ ಹೊಂದಿರುವ ಯಾವುದೇ ಗುಂಪು ಹಿಂಸಾಚಾರವನ್ನೇ ಅಸ್ತ್ರವಾಗಿಸಿಕೊಂಡು ಮತ್ತೊಂದರ ವಿರುದ್ಧ ಸಮರ ಸಾರಬಹುದು. ಇದು ಅಂತ್ಯವಿಲ್ಲದ ದಂಗೆಗಳಿಗೆ ನಾಂದಿ ಹಾಡಬಹುದು.

ಮೂರನೆಯ ಮತ್ತು ಗಂಭೀರವಾದ ಅಪಾಯವೆಂದರೆ ರಾಷ್ಟ್ರೀಯ ಆತ್ಮಹತ್ಯೆ! ಪಾಕಿಸ್ತಾನದ ಜಿಹಾದಿ ದಂಗೆಗಳು ದೇಶವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಲೇ ಬಂದಿವೆ. ಕಾಂಗ್ರೆಸ್ ಅತ್ಯಂತ ವರ್ಣಮಯವಾಗಿ ಬಣ್ಣಿಸುತ್ತಿರುವ ನೇಪಾಳದ ದಂಗೆ ದೇಶದ ಆರ್ಥಿಕತೆಯನ್ನು ಶಾಶ್ವತವಾಗಿ ಗಾಯಗೊಳಿಸಿದೆ. ಶ್ರೀಲಂಕಾದ ಅಂತರ್ಯುದ್ಧ, ಮ್ಯಾನ್ಮಾರ್‌ನ ಸೇನಾ ದಮನ, ಬಾಂಗ್ಲಾದೇಶದ ಹಿಂಸಾತ್ಮಕ ಹೋರಾಟಗಳೆಲ್ಲ ದಂಗೆಯೊಂದು ದೇಶವನ್ನು ದಶಕಗಳ ಕಾಲ ಹೇಗೆ ಹಿಂದಕ್ಕೆ ತಳ್ಳಬಹುದು ಎಂಬುದಕ್ಕೆ ಉದಾಹರಣೆ. ಭಾರತ ಇಂದು ಈ ಎಲ್ಲ ಸವಾಲುಗಳನ್ನು ಮೀರಿ ನಿಂತು ಜಗತ್ತಿನ ಬಲಿಷ್ಠ ರಾಷ್ಟ್ರಗಳಿಗೆ ಪೈಪೋಟಿ ನೀಡುತ್ತಿದೆ. ದೇಶದಲ್ಲಿ ಇಂಥ ಕ್ರಾಂತಿಗಳಿಗೆ ಆಹ್ವಾನ ನೀಡುವುದು ರಾಷ್ಟ್ರೀಯ ಆತ್ಮಹತ್ಯೆಗಿಂತ ಭಿನ್ನವೇನಲ್ಲ.

ಭಾರತಕ್ಕೆ ಎಚ್ಚರಿಕೆಯ ಘಂಟೆ:

ಕಾಂಗ್ರೆಸ್‌ನ ಇಂಥ ವಿಕೃತ ಹಂಬಲಗಳ ಹಿಂದೆ ದೇಶದ ಮತದಾರರ ಮನಸ್ಸನ್ನು ಗೆಲ್ಲಲಾಗದ ಹತಾಶೆ ಎದ್ದು ಕಾಣುತ್ತಿದೆ. ಚುನಾವಣೆಗಳಲ್ಲಿ ಗೆಲ್ಲಲಾಗದ ಸಂಕಟಕ್ಕೆ ರಾಜಕೀಯ ವ್ಯವಸ್ಥೆಯನ್ನೇ ಅಸ್ಥಿರಗೊಳಿಸಲು ಕಾಂಗ್ರೆಸ್ ಯತ್ನಿಸುತ್ತಿರುವಂತಿದೆ. ರಾಹುಲ್ ಗಾಂಧಿಯವರ ಮತಗಳ್ಳತನದ ಆರೋಪವೂ ಇದರದ್ದೇ ಭಾಗ ಎಂಬುದನ್ನು ಮರೆಯುವಂತಿಲ್ಲ. ಭಾರತೀಯರು ದಶಕಗಳ ಕಾಲ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದ ಆಡಳಿತವನ್ನು ನೋಡಿಯೇ ಪ್ರಜಾಪ್ರಭುತ್ವ, ಪ್ರಗತಿ ಮತ್ತು ಸ್ಥಿರತೆಯ ನಾಯಕತ್ವವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತದ ‘ಜೆನ್‌ ಝೀ’ಗಳು ಇಂದು ತಮ್ಮ ಬೆರಳ ತುದಿಯಲ್ಲೇ ಅಭೂತಪೂರ್ವ ಅವಕಾಶಗಳನ್ನು ಹೊಂದಿದ್ದಾರೆ. ಸ್ಟಾಟ್‌ಅಪ್‌ಗಳಿಂದ ಹಿಡಿದು ಜಾಗತಿಕ ವೃತ್ತಿಗಳವರೆಗೆ ಲಕ್ಷಾಂತರ ಯುವಕರ ಕನಸು ಸಾಕಾರಗೊಳ್ಳುತ್ತಿದೆ. ಶಿಕ್ಷಣ, ಉದ್ಯೋಗ, ಆರ್ಥಿಕತೆ ಸೇರಿದಂತೆ ಎಲ್ಲ ವಲಯಗಳಲ್ಲೂ ಭಾರತ ಶರವೇಗದಲ್ಲಿ ಮುಂದೆ ಸಾಗುತ್ತಿದೆ. ಭಾರತವನ್ನು ತೃತೀಯ ಜಗತ್ತಿನ ದೇಶವೆಂದು ಹೀಗಳೆಯುತ್ತಿದ್ದ ರಾಷ್ಟ್ರಗಳೇ ಭಾರತವನ್ನಿಂದು ಅತ್ಯಂತ ಗೌರವ ಮತ್ತು ಬೆರಗುಗಣ್ಣುಗಳಿಂದ ನೋಡುತ್ತಿವೆ. ಕಾಂಗ್ರೆಸ್‌ನ ಬೀದಿ ಹೋರಾಟದ ಆಶಯವೇನಾದರೂ ಯಶಸ್ವಿಯಾದರೆ, ಭಾರತ ಕಷ್ಟಪಟ್ಟು ಸಂಪಾದಿಸಿದ ಜಾಗತಿಕ ವರ್ಚಸ್ಸು, ಯುವಪೀಳಿಗೆಯ ಉಜ್ವಲವಾದ ಭವಿಷ್ಯ ಮತ್ತು ನಾಗರಿಕರ ನೆಮ್ಮದಿಯ ಬದುಕು ನೆಲಸಮವಾಗುತ್ತವೆ. ಈ ಎಲ್ಲ ಕಾರಣಗಳಿಂದ ನೆರೆಯ ದೇಶದಲ್ಲಾದ ದಂಗೆ ಭಾರತಕ್ಕೆ ಎಚ್ಚರಿಕೆಯ ಘಂಟೆ. ಇದು ಭಾರತದ ಭವಿಷ್ಯದ ಕುರಿತು ಜೆನ್‌ ಝೀಗಳು ಗಂಭೀರವಾಗಿ ಯೋಚಿಸಬೇಕಾದ ನಿರ್ಣಾಯಕ ಕಾಲಘಟ್ಟವೂ ಹೌದು.

PREV
Read more Articles on

Recommended Stories

ಜಾತಿ ಗಣತಿ ‘ಹಸ್ತ’ ಭವಿಷ್ಯಕ್ಕೆ ಪೆಟ್ಟು: ಎಚ್‌ಡಿಕೆ
ಗಣತಿಯಲ್ಲಿ ‘ಮಾದಿಗ’ ಎಂದೇ ಬರೆಸಲು ಕರೆ