ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಆತುರಾತುರವಾಗಿ ಜಾತಿ ಗಣತಿ ಮಾಡುತ್ತಿರುವುದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಇದರ ಪ್ರತಿಫಲವನ್ನು ಕಾಂಗ್ರೆಸ್ ಪಕ್ಷ ಅನುಭವಿಸಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಮೀಕ್ಷೆ ಕುರಿತು ಶನಿವಾರ ನಡೆದ ಒಕ್ಕಲಿಗ ಸಮುದಾಯದ ಜಾಗೃತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಮಾಡಿದ್ದೇವೆ. ಸರ್ಕಾರದಿಂದ ಸಮೀಕ್ಷೆಯಲ್ಲಿ ಅನ್ಯಾಯವಾದರೆ ಸ್ವಾಮೀಜಿಗಳ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದ್ದೇವೆ. ಇದು ಸಣ್ಣಮಟ್ಟದ ಸಭೆ ಅಷ್ಟೆ. ಈ ಸರ್ಕಾರ ಬೆಂಕಿ ಹಚ್ಚಲು ಏನು ಬೇಕೋ ಅದನ್ನು ಮಾಡಿದೆ. ಇದರ ಪ್ರತಿಫಲ ಮುಂದೆ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಈ ಸಭೆಯಲ್ಲಿ ಎಲ್ಲಾ ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಗಿದೆ. ಜಾತಿ ವಿಚಾರದಲ್ಲಿ ಒಕ್ಕಲಿಗರಿಗೆ ದೊಡ್ಡಮಟ್ಟದ ಪೆಟ್ಟು ಬಿದ್ದಿದೆ. ಬೆಂಗಳೂರಿನಲ್ಲಿ ಹೆಚ್ಚು ಭೂಮಿ ಕಳೆದುಕೊಂಡಿದ್ದು ಒಕ್ಕಲಿಗರ ಸಮಾಜ. ಡಿಸಿಎಂ ಡಿ.ಕೆ.ಶಿವಕುಮಾರ್ ಎಲ್ಲಾ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಏನಾಗಲಿದೆ ಎಂದು ಮುಂದೆ ನೋಡೋಣ ಎಂದು ಹೇಳಿದರು.
6 ದಿನದಲ್ಲಿ ವರದಿ ನೀಡಲು ಸಾಧ್ಯವೇ?:
ಈಗಾಗಲೇ ಕಾಂತರಾಜ್ ಆಯೋಗ, ಜಯಪ್ರಕಾಶ್ ಹೆಗ್ಡೆ ಆಯೋಗ ಆಯಿತು. ಈಗ ಮಧುಸೂಧನ್ ನಾಯ್ಕ್ ಆಯೋಗ ರಚಿಸಲಾಗಿದೆ. ಈ ಆಯೋಗ ರಚನೆ ವೇಳೆ ಏನೆಲ್ಲಾ ಮಾನದಂಡ ಅನುಸರಿಸಿದ್ದಾರೆ ಎಂಬುದನ್ನು ನೋಡಬೇಕು. ಸುಮ್ಮನೆ ಆಯೋಗ ರಚಿಸಲು ಸಾಧ್ಯವಿಲ್ಲ. ಸಮೀಕ್ಷೆಗೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಅದರಲ್ಲಿ 9 ದಿನ ನವರಾತ್ರಿ ಬರುತ್ತದೆ. ಉಳಿದ 6 ದಿನಗಳಲ್ಲಿ ಆಯೋಗ ಏನು ವರದಿ ಕೊಡಲು ಸಾಧ್ಯ? ಹಾಗಾದಲ್ಲಿ ಇವರು ಕಾಂತರಾಜ್ ವರದಿಯನ್ನೇ ಭಟ್ಟಿ ಇಳಿಸುತ್ತಾರಾ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದರು.
ಆಯೋಗದ ಮೂಲಕ ಬೆಂಕಿ ಹಚ್ಚುವ ಕೆಲಸ:
ಕ್ರಿಶ್ಚಿಯನ್ ಒಕ್ಕಲಿಗ ಜಾತಿ ಹೇಗೆ ತೆಗೆಯುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಮಯದ ಅಭಾವ ಇದೆ. ಈಗ ಏನಿದೆ ಅದನ್ನೇ ಮುಂದುವರೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೊಬ್ಬ ಮಂತ್ರಿ ಸಹ ಇದನ್ನೇ ತಿಳಿಸಿದ್ದಾರೆ. ಈಗಿನ ಆಯೋಗ ಉತ್ತಮ ಆಯೋಗ. ಒಳ್ಳೆಯ ನಿರೀಕ್ಷೆ ಇರಿಸಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ. ನಾನು ಆ ಮಂತ್ರಿಯನ್ನು ಕೇಳಲು ಬಯಸುವುದೇನೆಂದರೆ, ಇದು ಸತ್ಯದ ಆಯೋಗವೇ? ರಾಜ್ಯ ನೆಮ್ಮದಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಈ ಆಯೋಗ ಬೆಂಕಿ ಹಚ್ಚುವ ಕೆಲಸಕ್ಕೆ ಹೊರಟಿದೆ. ಸಿದ್ದರಾಮಯ್ಯ ಅವರು ಮುಂಜಾಗ್ರತಾ ಕ್ರಮವಾಗಿ ಯಾವುದೇ ಆಲೋಚನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚು ಭೂಮಿ ಕಳೆದುಕೊಂಡವರು ಒಕ್ಕಲಿಗರು:
ಇಲ್ಲಿ ಸಮಯ ಮುಂದೂಡುವುದು ಮುಖ್ಯವಲ್ಲ. ವಾಸ್ತವಾಂಶದ ಪರಿಹಾರವಾಗಿ ತೀರ್ಮಾನ ಕೈಗೊಳ್ಳಬೇಕು. ಬೆಂಗಳೂರು ನಗರಾಭಿವೃದ್ಧಿಗೆ ಬಗ್ಗೆ ಪದೇ ಪದೆ ಚರ್ಚೆ ಮಾಡುತ್ತೇವೆ. ನಗರದ ಅಭಿವೃದ್ಧಿಗೆ ಕಳೆದ 30 ವರ್ಷಗಳಲ್ಲಿ ಬಳಕೆಯಾಗಿರುವ ರೈತರ ಭೂಮಿ ಪೈಕಿ ಬಹುಪಾಲು ಕಳೆದುಕೊಂಡವರು ಒಕ್ಕಲಿಗರು. ಈಗಲೂ ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ರೈತರ ಭೂಮಿ ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸರ್ಕಾರದ ನಡೆ ನೋಡಿದರೆ, ಇದು ಕಾಂತರಾಜ್ ವರದಿಗಿಂತಲೂ ಕೆಟ್ಟದಾಗಿ ಇರಲಿದೆ. ಈ ಬಗ್ಗೆ ಯಾವುದೇ ಸಂಶಯವೂ ಬೇಡ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.