ರಾಜ್ಯಾದ್ಯಂತ ಕೃತಕ ಪನ್ನೀರ್‌ ನಿಷೇಧ

Published : Aug 23, 2026, 10:50 AM IST
fake paneer

ಸಾರಾಂಶ

ರಾಜ್ಯದಲ್ಲಿ ಪನ್ನೀರ್‌ ಹೆಸರಿನಲ್ಲಿ ಮಾರಾಟವಾಗುತ್ತಿರುವ ಕೃತಕ ಅಥವಾ ನಕಲಿ ಪನ್ನೀರ್‌ (ಅನಲಾಗ್ ಪನ್ನೀರ್‌) ಉತ್ಪಾದನೆ, ದಾಸ್ತಾನು ಹಾಗೂ ಮಾರಾಟವನ್ನು 1 ವರ್ಷದ ಅವಧಿಗೆ ನಿಷೇಧಿಸಿ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆಯು ಆದೇಶ ಹೊರಡಿಸಿದೆ.

ಬೆಂಗಳೂರು : ರಾಜ್ಯದಲ್ಲಿ ಪನ್ನೀರ್‌ ಹೆಸರಿನಲ್ಲಿ ಮಾರಾಟವಾಗುತ್ತಿರುವ ಕೃತಕ ಅಥವಾ ನಕಲಿ ಪನ್ನೀರ್‌ (ಅನಲಾಗ್ ಪನ್ನೀರ್‌) ಉತ್ಪಾದನೆ, ದಾಸ್ತಾನು ಹಾಗೂ ಮಾರಾಟವನ್ನು 1 ವರ್ಷದ ಅವಧಿಗೆ ನಿಷೇಧಿಸಿ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆಯು ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಹಾಲಿನ ಉತ್ಪನ್ನದ ಬದಲಿಗೆ ಸಸ್ಯಜನ್ಯ ಎಣ್ಣೆ (ವೆಜೆಟೆಬಲ್‌ ಆಯಿಲ್) ಅಥವಾ ಸಸ್ಯಜನ್ಯ ಕೊಬ್ಬು ಬಳಸಿ ತಯಾರಿಸುವ ‘ಅನಲಾಗ್ ಪನ್ನೀರ್’ ಅನ್ನು ‘ಪನ್ನೀರ್’ ಹೆಸರಿನಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಉತ್ಪಾದನೆ, ದಾಸ್ತಾನು, ಮಾರಾಟ, ಪ್ಯಾಕ್‌ ಮಾಡುವುದು ಹಾಗೂ ಆಹಾರದಲ್ಲಿ ಬಳಸುವುದು, ಪ್ರದರ್ಶಿಸುವುದು ಸಹ ಕಾನೂನು ಬಾಹಿರವಾಗಲಿದೆ. ಆದೇಶ, ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯಾದ್ಯಂತ ಹಲವಾರು ಪನ್ನೀರ್‌ ಮಾದರಿಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿ ಪ್ರಯೋಗಾಲಯದ ಮೂಲಕ ಪರೀಕ್ಷಿಸಿದ್ದಾರೆ. ಪರೀಕ್ಷೆ ವೇಳೆ ಯಾವುದೇ ಕಲಬೆರೆಕೆ ಪತ್ತೆಯಾಗಿಲ್ಲ. ಸಸ್ಯಜನ್ಯ ಎಣ್ಣೆ, ಕೊಬ್ಬು ಅಥವಾ ಇತರೆ ನಿಷೇಧಿತ ಡೈರಿ ಉತ್ಪನ್ನಗಳಿಂದ ತಯಾರಿಸಿದ ಪನ್ನೀರ್‌ ಪತ್ತೆಯಾಗಿಲ್ಲ. ಆದರೂ ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯಿಂದ ಕೃತಕ ಪನ್ನೀರ್‌ನ ಉತ್ಪಾದನೆ, ದಾಸ್ತಾನು ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಕಟ್ಟುನಿಟ್ಟಿನ ಪರಿಶೀಲನೆ:

ರಾಜ್ಯಾದ್ಯಂತ ಈ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಯಾರಾದರೂ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಆಯುಕ್ತರು ಎಚ್ಚರಿಸಿದ್ದಾರೆ.

ಏನಿದು ‘ಅಸಲಿ ಪನ್ನೀರ್’ ‘ಅನಲಾಗ್ ಪನ್ನೀರ್’?

ಆಹಾರ ಸುರಕ್ಷತಾ ನಿಯಮಾವಳಿ ಪ್ರಕಾರ, ಪನ್ನೀರ್ ಎಂಬುದು ಕೇವಲ ಹಾಲಿನಿಂದ ಮಾತ್ರ ತಯಾರಾಗುವ ಶುದ್ಧ ಉತ್ಪನ್ನ. ಹಾಲಿನ ನೈಸರ್ಗಿಕ ಕೊಬ್ಬು ಇದರ ಪ್ರಮುಖ ಅಂಶ. ಅನಲಾಗ್ ಪನ್ನೀರ್ (ನಕಲು) ಎಂದರೆ ಹಾಲಿನ ಅಂಶ ಅಥವಾ ಹಾಲಿನ ಕೊಬ್ಬಿನ ಬದಲಿಗೆ ಸಂಪೂರ್ಣವಾಗಿ ಅಥವಾ ಭಾಗಶಃ ಸಸ್ಯಜನ್ಯ ಎಣ್ಣೆ (ವೆಜಿಟೇಬಲ್ ಆಯಿಲ್), ವನಸ್ಪತಿ ಅಥವಾ ಹಾಲಿನ ಉತ್ಪನ್ನವಲ್ಲದ ವಸ್ತುಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಈ ಉತ್ಪನ್ನವನ್ನು ‘ಅನಲಾಗ್ ಪನ್ನೀರ್’ ಎನ್ನಲಾಗುತ್ತದೆ. ಇದನ್ನು ಪನ್ನೀರ್ ಎಂದು ಗ್ರಾಹಕರಿಸಿ ನಂಬಿಸಿ ಮಾರಾಟ ಮಾಡುವ ದಂಧೆ ನೆರೆ ರಾಜ್ಯಗಳಲ್ಲಿ ಬೆಳಕಿಗೆ ಬಂದಿತ್ತು.

ಹೋಟೆಲ್ ಮತ್ತು ವ್ಯಾಪಾರಿಗಳಿಗೂ ನಿರ್ಬಂಧ:

ಯಾವುದೇ ಆಹಾರ ವ್ಯಾಪಾರ ಸಂಸ್ಥೆಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಅಥವಾ ಆಹಾರ ತಯಾರಕರು ಯಾವುದೇ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಈ ‘ಅನಲಾಗ್ ಅಥವಾ ನಾನ್-ಡೈರಿ ಪನ್ನೀರ್ ಬಳಕೆ ಮಾಡುವಂತಿಲ್ಲ. ಜತೆಗೆ ಸಂಗ್ರಹ, ಸರಬರಾಜು ಸಹ ಮಾಡುವಂತಿಲ್ಲ. ಒಂದು ವೇಳೆ ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಉತ್ಪನ್ನಗಳಿಗೆ ನಿಷೇಧ ಅನ್ವಯವಿಲ್ಲ:

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈಗಾಗಲೇ ನಿಗದಿಪಡಿಸಿರುವ ಗುಣಮಟ್ಟದ ಮಾನದಂಡಗಳನ್ನು ಪೂರೈಸಿರುವ ಫ್ರೋಜನ್ ಡೆಸರ್ಟ್, ಪ್ರೊಸೆಸ್ಡ್ ಚೀಸ್ ಮತ್ತು ಮಿಕ್ಸೆಡ್ ಫ್ಯಾಟ್ ಸ್ಪ್ರೆಡ್ ಮುಂತಾದ ನಿರ್ದಿಷ್ಟ ಲೇಬಲ್ ಹೊಂದಿರುವ ಇತರ ಆಹಾರ ಉತ್ಪನ್ನಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪಾಕ್‌ ಗ್ಯಾಂಗ್‌ಸ್ಟರ್ಸ್ ನಂಟು: ದೊಡ್ಡಬಳ್ಳಾಪುರ ವ್ಯಕ್ತಿ ಅರೆಸ್ಟ್‌
ನಕಲಿ ಔಷಧ ದಂಧೆ ಕಿಂಗ್‌ಪಿನ್‌ ಪ್ರಶಾಂತ್‌ ಅಜರ್‌ಬೈಜಾನಲ್ಲಿ ವಶ