ಸಾಲು ಸಾಲು ಹಬ್ಬಗಳಿಗೂ ಮುನ್ನ ಕಹಿಯಾದ ಸಿಹಿ ಸಕ್ಕರೆ ದರ

Published : Aug 23, 2026, 07:19 AM IST
sugar price

ಸಾರಾಂಶ

ಸಗಟು ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆಯು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಗೌರಿ-ಗಣೇಶ, ದಸರಾ ಸೇರಿದಂತೆ ಪ್ರಮುಖ ಹಬ್ಬಗಳು ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಸಕ್ಕರೆ ದರ ಏರಿಕೆಯಾಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ಬೆಂಗಳೂರು : ಸಗಟು ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆಯು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಗೌರಿ-ಗಣೇಶ, ದಸರಾ ಸೇರಿದಂತೆ ಪ್ರಮುಖ ಹಬ್ಬಗಳು ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಸಕ್ಕರೆ ದರ ಏರಿಕೆಯಾಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ 5 ದಿನಗಳ ಹಿಂದೆ ಕೆಜಿ ಸಕ್ಕರೆ ಬೆಲೆಯು ₹52 ಇತ್ತು. ಅದು ಶನಿವಾರಕ್ಕೆ ₹64ಕ್ಕೆ ಏರಿಕೆಯಾಗಿದೆ. ಹಳೆಯ ದರದಲ್ಲಿ ಈ ಹಿಂದೆ ಸಕ್ಕರೆ ಖರೀದಿಸಿದವರು ಅದು ಖಾಲಿ ಆಗುವವರೆಗೂ ಕಡಿಮೆ ದರದಲ್ಲಿಯೇ ಮಾರಾಟ ಮಾಡಲಿದ್ದು, ಹೊಸ ದರದಲ್ಲಿ ಖರೀದಿಸಿದ ಸಕ್ಕರೆಯನ್ನು ಹೊಸ ದರದಲ್ಲಿ ಮಾರಾಟ ಮಾಡಲು ಆರಂಭಿಸಲಿದ್ದಾರೆ. ಆಗ ಗ್ರಾಹಕರಿಗೆ ಸಕ್ಕರೆ ದರ ಹೆಚ್ಚಳದ ಬಿಸಿ ತಟ್ಟಲಿದೆ ಎನ್ನುತ್ತಾರೆ ಸಂಜಯನಗರದ ಲಕ್ಷ್ಮಿ ಟ್ರೇಡರ್ ಮಾಲೀಕ ಸೂರ್ಯಾನಂದ.

ಸಗಟು ಬೆಲೆಗಿಂತ ಸಕ್ಕರೆಯ ರಿಟೇಲ್‌ ದರವು ಅಂದಾಜು ಶೇ.10ರಷ್ಟು ಜಾಸ್ತಿ ಇರುತ್ತದೆ. ಶನಿವಾರ ಸಗಟು ಮಾರುಕಟ್ಟೆಯಲ್ಲಿ ₹64ಕ್ಕೆ ಸಕ್ಕರೆ ಖರೀದಿಸಿದವರು ಅದನ್ನು ರಿಟೇಲ್‌ ಮಾರುಕಟ್ಟೆಯಲ್ಲಿ ₹70ಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.

 ಮಳೆ ಅಭಾವದ ಪ್ರಭಾವ: 

ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಮಳೆಯ ಅಭಾವದಿಂದ ಇಳುವರಿ ಕುಸಿತವಾಗಿದೆ. ಗಾಣಗಳಲ್ಲಿ ಬೆಲ್ಲದ ಉತ್ಪಾದನೆ ಇಳಿಮುಖವಾಗಿರುವುದರಿಂದ ಸಕ್ಕರೆ ದರವೂ ಹೆಚ್ಚಳವಾಗಿದೆ ಎನ್ನಲಾಗಿದೆ. ಕಳೆದ 6 ತಿಂಗಳಿಂದ ಮಳೆ ಇಲ್ಲದೆ ಕಬ್ಬಿಗೆ ನೀರಿನ ಪೂರೈಕೆಯಾಗಿಲ್ಲ. ಇದರಿಂದಾಗಿ ಕಬ್ಬಿನ ಗದ್ದೆಗಳು ಒಣಗಿ ನಿಂತಿವೆ. ಕಬ್ಬಿನ ಇಳುವರಿ ಅರ್ಧದಷ್ಟು ಕಡಿಮೆಯಾಗಿದೆ. ಪ್ರತಿದಿನ 10 ರಿಂದ 12 ಲಾರಿಯಷ್ಟು ಬೆಲ್ಲ ಮಾರುಕಟ್ಟೆಗೆ ಹೋಗುತಿತ್ತು. ಇದೀಗ ಅರ್ಧದಷ್ಟು ಕಡಿಮೆಯಾಗಿದೆ. ಬೆಲ್ಲದ ಮಾರುಕಟ್ಟೆ ಪ್ರಾರಂಭವಾದ ದಿನದಿಂದಲೂ ಇಷ್ಟೊಂದು ಪ್ರಮಾಣದ ದರ ಏರಿಕೆಯಾಗಿರಲಿಲ್ಲ. ಎಥೆನಾಲ್‌ ಬಳಕೆಯಲ್ಲಿ ಕಬ್ಬಿನ ಬಳಕೆ ಮತ್ತು ಕಬ್ಬಿನ ಕೊರತೆಯಿಂದ ಬೆಲ್ಲದ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ ಸಕ್ಕರೆ ದರವು ಹೆಚ್ಚಳವಾಗುತ್ತಿದೆ ಎಂದು ವರ್ತಕರು ತಿಳಿಸಿದ್ದಾರೆ.

ಕಬ್ಬು ಇಳುವರಿ ಶೇ.25-30ರಷ್ಟು ಕುಸಿತ

ಮಳೆ ಕೊರತೆ ಮತ್ತು ಬರದ ಕಾರಣದಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಮೈಸೂರು, ಮಂಡ್ಯ ಭಾಗಗಳಲ್ಲಿ ಶೇ.25ರಿಂದ 30ರಷ್ಟು ಕಬ್ಬಿನ ಇಳುವರಿ ಕಡಿಮೆಯಾಗಿದೆ. ಬೆಳಗಾವಿ ಭಾಗದಲ್ಲಿ ಕಬ್ಬಿಗೆ ಗೊಣ್ಣೆಹುಳ್ಳು ರೋಗ ಹೆಚ್ಚಾಗಿ ತಗಲಿದ್ದು ಕಬ್ಬಿನ ಬೆಳೆಗೆ ತೀವ್ರವಾಗಿ ಹಾನಿಗೊಳಗಾಗಿದೆ. ಕರ್ನಾಟಕವೂ ಸೇರಿದಂತೆ ಕಬ್ಬು ಉತ್ಪಾದಕ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಬರಗಾಲದ ಕಾರಣದಿಂದ ಕಬ್ಬು ಉತ್ಪಾದನೆ ಕುಸಿದಿದೆ ಎಂದು ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಸಕ್ಕರೆ, ಬೆಲ್ಲಕ್ಕೆ ಹೆಚ್ಚಿದ ಬೇಡಿಕೆ

ಕಾರ್ಖಾನೆಗಳ ಕಬ್ಬು ನುರಿಸುವ ಹಂಗಾಮು ಮುಕ್ತಾಯದ ವೇಳೆಗೆ ಸಕ್ಕರೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಪ್ರಸ್ತುತ ಸಾಲು ಸಾಲು ಹಬ್ಬಗಳು ಆರಂಭಗೊಳ್ಳಲಿದ್ದು ಮಾರುಕಟ್ಟೆಯಲ್ಲಿ ಸಿಹಿ ತಿನಿಸುಗಳು, ಐಸ್‌ಕ್ರೀಂ ಮತ್ತು ಬಿಸ್ಕತ್ತುಗಳ ತಯಾರಿಕೆಗೆ ಸಕ್ಕರೆ ಬೇಡಿಕೆ ಹೆಚ್ಚಾಗಲಿದೆ. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಿರುವುದರಿಂದ ಸಕ್ಕರೆ ಮತ್ತು ಬೆಲ್ಲದ ದರ ಏರಿಕೆಯಾಗಿದೆ ಎಂದು ವರ್ತಕರು ಹೇಳಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಕಲಿ ಔಷಧ ದಂಧೆ ಕಿಂಗ್‌ಪಿನ್‌ ಪ್ರಶಾಂತ್‌ ಅಜರ್‌ಬೈಜಾನಲ್ಲಿ ವಶ
ರಾಜ್ಯದ ಅಭಿವೃದ್ಧಿಗೆ ಅರಸು ಕೊಡುಗೆ ಅಪಾರ: ಡಾ.ಅನುರಾಧ