;Resize=(412,232))
ಚೆನ್ನೈ: ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯಲ್ಲಿ 1971ರ ಜನಗಣತಿಯನ್ನೇ ಮಾನದಂಡವಾಗಿ ಪರಿಗಣಿಸಬೇಕು, ಮುಂದಿನ 25 ವರ್ಷಗಳ ಕಾಲ ಲೋಕಸಭೆಯ ಒಟ್ಟು 543 ಸೀಟುಗಳ ಸಂಖ್ಯೆಯನ್ನು ಯಥಾವತ್ತಾಗಿ ಕಾಯ್ದುಕೊಳ್ಳಬೇಕು ಹಾಗೂ ಹಾಲಿ ಸೀಟುಗಳಲ್ಲೇ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ನಿರ್ಣಯ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಕ್ಷಿಣ ವಲಯ ಮಂಡಳಿಗೆ ಗುರುವಾರ ಮನವಿ ಮಾಡಿದ್ದಾರೆ.
ಗುರುವಾರ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ‘ದಕ್ಷಿಣದ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಸಾಧಿಸಿದ ಯಶಸ್ಸು, ರಾಜಕೀಯವಾಗಿ ಅವುಗಳ ಪ್ರಾತಿನಿಧ್ಯ ಮತ್ತು ಧ್ವನಿಯನ್ನು ಕ್ಷೀಣಿಸುವಂತೆ ಮಾಡಬಾರದು. ಯಾವುದೇ ದಕ್ಷಿಣದ ರಾಜ್ಯವು ಸಂಸತ್ ಸೀಟುಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಕೇಂದ್ರದ ಆಶ್ವಾಸನೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪ್ರಾತಿನಿಧ್ಯ ಎನ್ನುವುದು ಕೇವಲ ಅಂಕಿ-ಅಂಶವಲ್ಲ, ಅದು ನಮ್ಮ ಹಕ್ಕು ಮತ್ತು ರಾಜಕೀಯ ತೂಕ’ ಎಂದು ಪ್ರತಿಪಾದಿಸಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ಎತ್ತಿದ ಕ್ಷೇತ್ರ ಪುನರ್ವಿಂಗಡಣೆ ವಿಷಯಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಪುನರ್ವಿಂಗಡಣೆಯು ಕಾಂಗ್ರೆಸ್ ಎತ್ತಿರುವ ಒಂದು ರಾಜಕೀಯ ವಿಷಯ. ಇದನ್ನು ದಕ್ಷಿಣ ವಲಯ ಮಂಡಳಿಯ ಆಡಳಿತಾತ್ಮಕ ಚರ್ಚೆಯೊಂದಿಗೆ ಬೆರೆಸುವುದು ಬೇಡ’ ಎಂದು ಸ್ಪಷ್ಟಪಡಿಸಿದರು.