ವಿಧಾನಸಭೆ/ಪರಿಷತ್ : ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಬಿ.ನಾಗೇಂದ್ರ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಗುರುವಾರವೂ ವಿಧಾನಮಂಡಲದ ಉಭಯ ಸದನಗಳಲ್ಲಿ ದಿನವಿಡೀ ನಡೆಸಿದ ಘೋಷಣೆ, ಪ್ರತಿಭಟನೆ ನಡುವೆಯೇ ಪ್ರಶ್ನೋತ್ತರ, ಶೂನ್ಯವೇಳೆ, ಗಮನಸೆಳೆಯುವ ಸೂಚನೆ ಸೇರಿ ಎಲ್ಲ ಕಲಾಪಗಳನ್ನು ಎಂದಿನಂತೆ ನಡೆಸಲಾಯಿತು. ಗದ್ದಲದ ನಡುವೆಯೇ ತಲಾ ಮೂರು ವಿಧೇಯಕಗಳನ್ನು ಮಂಡಿಸಲಾಯಿತು.
ಪರಿಷತ್‌ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಸಲೀಂ ಅಹಮದ್ ಅವರು ಪ್ರತಿಪಕ್ಷಗಳು ಹಠ ಬಿಟ್ಟು ಪ್ರತಿಭಟನೆ ಹಿಂಪಡೆದು ಸಾರ್ವಜನಿಕ ಮಹತ್ವದ ಪ್ರಶ್ನೋತ್ತರ ಸೇರಿ ವಿವಿಧ ಕಲಾಪ ನಡೆಸಲು ಸಹಕರಿಸಬೇಕು. ಕಳೆದ ನಾಲ್ಕು ದಿನಗಳಿಂದ ಕಲಾಪ ಸರಿಯಾಗಿ ನಡೆಸಲು ಆಗುತ್ತಿಲ್ಲ. ರಾಜ್ಯದಲ್ಲಿ ಬರ ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಿ. ಸಾಹಿತ್ಯ ಸೇರಿ ವಿವಿಧ ಕ್ಷೇತ್ರದ ಜನ ಸದನ ಸುಗಮವಾಗಿ ನಡೆಸಲು ಮನವಿ ಮಾಡಿದ್ದಾರೆ. ಆದರೆ ನಿಮ್ಮ ಹಠಮಾರಿ ಧೋರಣೆಯಿಂದ ಸದನ ನಡೆಸಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜೀನಾಮೆ ಪಡೆಯಿರಿ-ಒತ್ತಾಯ:
ಇದಕ್ಕೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರ ಬಂದಿರುವ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂಬುದು ನಮ್ಮ ಸಣ್ಣ ಮನವಿ, ಇದಕ್ಕೆ ಸರ್ಕಾರ ಏಕೆ ಹಠ ಮಾಡುತ್ತಿದೆ. ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಪ್ರತಿಪಕ್ಷಗಳ ಸದಸ್ಯರು ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಸಿದ್ಧರಾಗಿದ್ದಾರೆ ಎಂದರು.
ಹಲವು ರಾಜ್ಯಗಳಲ್ಲಿ ಇರುವ ಸರ್ಕಾರಗಳಲ್ಲಿ ಕ್ರಿಮಿನಲ್‌ಗಳಿದ್ದಾರೆ
ಸಚಿವ ಕೃಷ್ಣ ಬೈರೇಗೌಡ ಅವರು ದೇಶದ ಹಲವು ರಾಜ್ಯಗಳಲ್ಲಿ ಇರುವ ಸರ್ಕಾರಗಳಲ್ಲಿ ಕ್ರಿಮಿನಲ್‌ಗಳಿದ್ದಾರೆ. ಅವರು ರಾಜೀನಾಮೆ ಕೊಟ್ಟಿದ್ದಾರೆಯೇ? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ನಮ್ಮ ತಟ್ಟೆಯಲ್ಲಿನ ನೊಣ ಹುಡುಕಿವಿರಾ? ಎಂದು ಕುಟುಕಿದರು.
ಸಚಿವರ ಈ ಮಾತಿನಿಂದ ಪ್ರತಿಪಕ್ಷಗಳ ಸದಸ್ಯರು ಇನ್ನಷ್ಟು ಜೋರಾಗಿ ಘೋಷಣೆ ಕೂಗತೊಡಗಿದರು. ಆಡಳಿತ ಪಕ್ಷಗಳ ಸದಸ್ಯರ ಜೊತೆ ಮಾತಿನ ಚಕಮಕಿ ನಡೆಯಿತು. ನಂತರ ವಿಪಕ್ಷಗಳ ಘೋಷಣೆಗಳ ನಡುವೆ ಸಭಾಪತಿಗಳು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು.
ಇನ್ನು ವಿಧಾನಸಭೆಯಲ್ಲೂ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತಿಭಟನೆ, ಘೋಷಣೆಗಳನ್ನು ಕೂಗಿದರು. ಇದರಿಂದ ಸುಗಮ ಕಲಾಪಕ್ಕೆ ಅಡ್ಡಿಯಾಯಿತು. ಇದರ ನಡುವೆಯೇ ಮೂರು ವಿಧೇಯಕಗಳನ್ನು ಮಂಡಿಸಲಾಯಿತು.
