ಕೋಲಾರದಲ್ಲಿ ಬಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್‌ನಿಂದ ಕೌಂಟರ್ ಧರಣಿ । ರಾಜೀನಾಮೆ ಕೇಳುವ ನೈತಿಕತೆ ಇಲ್ಲ: ಅಂಬರೀಷ್
ಕನ್ನಡಪ್ರಭ ವಾರ್ತೆ ಕೋಲಾರಸಚಿವ ಬಿ.ನಾಗೇಂದ್ರ ರಾಜೀನಾಮೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿಯಿಂದ ನಡೆಯುತ್ತಿರುವ ಪ್ರತಿಭಟನೆಗೆ ವಿರುದ್ಧವಾಗಿ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದಿಂದ ಗುರುವಾರ ಸಚಿವ ನಾಗೇಂದ್ರ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಪ್ರತಿಭಟನೆ ನಡೆಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಅಂಬರೀಷ್, ಸಚಿವ ಬಿ.ನಾಗೇಂದ್ರರ ರಾಜೀನಾಮೆ ಬಿಜೆಪಿಯವರು ಕೇಳುತ್ತಿದ್ದು, ಭ್ರಷ್ಟಾಚಾರದ ಆರೋಪ ಬಂದ ಕೂಡಲೇ ಅವರೇ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದರು. ಆ ಬಳಿಕ ಎಸ್‌ಐಟಿ ತನಿಖೆಯಲ್ಲಿ ಅವರು ಅಪರಾಧಿಯಲ್ಲ. ಆರೋಪಿ ಎಂಬುದಾಗಿ ಕ್ಲೀನ್ ಚಿಟ್ ನೀಡಿದ ಬಳಿಕ ಇದೀಗ ಪುನಃ ಸಚಿವ ಸಂಪುಟದಲ್ಲಿ ಅವಕಾಶದಲ್ಲಿ ನೀಡಲಾಗಿದೆ. ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿ ಪಕ್ಷಕ್ಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.ಆಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಹಣ ಕದ್ದ ವಿಚಾರವಾಗಿ ಎಸ್‌ಐಟಿ ನೀಡಿದ ವರದಿ ಇವರಿಗೆ ಒಪ್ಪಿಗೆಯಾಗುತ್ತದೆ, ಆದರೆ ಇಲ್ಲಿನ ಎಸ್‌ಐಟಿ ವರದಿ ನೀಡಿದರೆ ಒಪ್ಪಿಗೆಯಾಗುವುದಿಲ್ಲವೇ? ಅವರಿಗೆ ಒಂದು ನ್ಯಾಯ ಕಾಂಗ್ರೆಸ್ ಪಕ್ಷಕ್ಕೆ ಒಂದು ನ್ಯಾಯವಾ ಇವರಿಗೆ ಪ್ರತಿಭಟನೆ ಮಾಡುವುದಕ್ಕೆ ಯಾವ ಅರ್ಥದಲ್ಲಿ ಹೇಳಬೇಕು ಎಂದು ಪ್ರಶ್ನೆ ಮಾಡಿದರು.
ಬಿಜೆಪಿಗರು ಸದಾ ದಲಿತರನ್ನೇ ದ್ವೇಷ ಮಾಡುತ್ತಾರೆ. ದಲಿತರ ವಿರುದ್ಧವೇ ಘೋಷಣೆ ಮಾಡುತ್ತಾರೆ. ದಲಿತ ಮಂತ್ರಿಗಳ ವಿರುದ್ಧ ಹೋರಾಟ ಮಾಡುತ್ತಾರೆ. ಬೇರೆ ಯಾರ ಮೇಲೂ ಮಾಡುವುದಿಲ್ಲ. ಬಿ.ವೈ.ವಿಜಯೇಂದ್ರ ಆರ್‌ಟಿಜಿಎಸ್ ಮುಖಾಂತರ ಕೋಟ್ಯಂತರ ರು. ಹಣ ಪಡೆದಿದ್ದರು. ಶಶಿಕಲಾ ಜೊಲ್ಲೆ ಕೋಟ್ಯಂತರ ರು. ಹಣ ಲೂಟಿ ಮಾಡಿದ್ದರು. ಜನಾರ್ದನ ರೆಡ್ಡಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದರು, ರಾಜ್ಯದ ಸಿಎಂಯಾಗಿದ್ದ ಯಡಿಯೂರಪ್ಪ ಯಾಕೆ ಜೈಲಿಗೆ ಹೋಗಿದ್ದು ಇದನ್ನು ಪ್ರಶೆ ಮಾಡಲಿ ಆದರೂ ಅವರನ್ನು ಉನ್ನತ ಸ್ಥಾನದಲ್ಲಿ ಇರಿಸಿಲ್ಲವೇ ಎಂದು ಕಿಡಿಕಾರಿದರು.
ರಾಮಲೀಲಾ ಮೈದಾನದಲ್ಲಿ ಖರ್ಗೆ ಹೋಗಿ ಭಾಷಣ ಮಾಡಿದ್ದಕ್ಕೆ ಬಿಜೆಪಿ ಪೋಷಿತ ಶ್ರೀರಾಮಸೇನೆ ಮುಖಂಡರು ಗೋಮೂತ್ರ ಸಿಂಪಡಿಸಿ, ಅಸ್ಪೃಶ್ಯ ವ್ಯಕ್ತಿ ಭಾಷಣ ಮಾಡಿದ್ದಾರೆಂದು ಸ್ವಚ್ಛಗೊಳಿಸಿದ್ದಾರೆ. ಈ ಘಟನೆ ನಡೆದು ತಿಂಗಳಾದರೂ ಬಿಜೆಪಿಯ ಯಾವ ನಾಯಕರೂ ಪ್ರಶ್ನೆ ಮಾಡದೇ ಇರುವುದನ್ನು ನೋಡಿದರೆ ಇನ್ನೂ ಸಹ ಅಸ್ಪೃಶ್ಯತೆ ಇಟ್ಟುಕೊಂಡಿದ್ದಾರೆಂಬುದು ಖಚಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳ ಮುಖಾಂತರ ಮೋದಿಗೆ ಮನವಿ ಮಾಡುತ್ತಿದ್ದು, ತಪ್ಪಿತಸ್ಥರನ್ನು ಗಡಿಪಾರು ಮಾಡದೇ ಇದ್ದರೆ ಅಸ್ಪೃಶ್ಯತೆ ಪಾಲನೆ ಮಾಡುತ್ತಿದ್ದೀರಿ ಎನ್ನುವುದು ಖಚಿತವಾಗುತ್ತದೆ ಎಂದು ಎಚ್ಚರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ, ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಅವಾಚ್ಯವಾಗಿ ಮಾತನಾಡಿದಾಗಲೂ ಧ್ವನಿ ಎತ್ತದ ಬಿಜೆಪಿಯವರು ನಿಜವಾದ ದಲಿತ ವಿರೋಧಿಗಳಾಗಿದ್ದು, ಸಚಿವ ನಾಗೇಂದ್ರ ಅವರಿಂದ ಭ್ರಷ್ಟಾಚಾರ ಆಗಿದ್ದರೆ, ಅವರು ತಪ್ಪು ಮಾಡಿದ್ದರೆ ಸಚಿವ ಸ್ಥಾನದಿಂದ ತೆಗೆದು ಬಿಸಾಡಲಿ ನಮ್ಮ ಅಭ್ಯಂತರವಿಲ್ಲ. ಆದರೆ, ವಿನಾಕಾರಣ ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿ ಇರುವ ಶೇ. ೭೦ರಷ್ಟು ಸಚಿವರು ಭ್ರಷ್ಟರೇ ಇದ್ದು, ಬೇರೆಯವರ ರಾಜೀನಾಮೆ ಕೇಳುವ ನೈತಿಕತೆ ನಿಮಗೆ ಇಲ್ಲ. ಮೀಸಲಾತಿ ಹೆಚ್ಚಳದಲ್ಲೂ ಅನ್ಯಾಯ ಮಾಡಿರುವ ನೀವು ದಲಿತರ ಪರ ಇದ್ದೀರಾ ಎಂದು ಕಿಡಿಕಾರಿ, ಯಾವುದೇ ಕಾರಣಕ್ಕೂ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಬಾರದೆಂದು ಆಗ್ರಹಿಸಿದರು.ಪ್ರತಿಭಟನೆ ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಮಾಲೂರು ವೆಂಕಟರಾಮ್, ಕುಡುವನಹಳ್ಳಿ ಆನಂದ್, ವ್ಯಾಪಲಪಲ್ಲಿ ನರೇಶ್, ಬೈರಂಡಹಳ್ಳಿ ನಾಗೇಶ್, ವಾಸು, ವಗಲಗೆರೆ ಅಂಜಿ, ನರಸಿಂಹ, ಗಡ್ಡೂರು ಪ್ರಕಾಶ್, ಬಂಗಾರಪೇಟೆ ನಾರಾಯಣಸ್ವಾಮಿ, ದೇವರಾಜ್, ಕಲ್ವಂಜಲಿ ರವೀಂದ್ರ, ಅನಿಲ್, ಹರಟಿ ಸಂಪತ್, ಸುಗಟೂರು ಕೃಷ್ಣಪ್ಪ, ಸಂಗೊಂಡಹಳ್ಳಿ ಪಿಳ್ಳಪ್ಪ, ಪವನ್, ಯಾರಂಘಟ್ಟ ಮಂಜು, ಕಾರ್ತಿಕ್, ವೆಂಕಟಾಚಲಪತಿ, ಶಶಿ, ಅರುಣ್, ವೆಂಕಟೇಶ್, ಈನೆಲಈಜಲ ವೆಂಕಟಾಚಲಪತಿ ಇದ್ದರು.