ಹನೂರು ಅರಣ್ಯ ವ್ಯಾಪ್ತಿಯಲ್ಲಿ ಶೂಟೌಟ್‌ ಘಟನೆ ಬಳಿಕ ಕೆಲ ದುಷ್ಕರ್ಮಿಗಳು ಇಲಾಖೆಯ ವಿವಿಧ ಬೇಟೆ ತಡೆ ಶಿಬಿರ, ವಸತಿ ಗೃಹಗಳನ್ನು ಬಹುತೇಕ ಧ್ವಂಸಗೊಳಿಸಿದ್ದಾರೆ. ಈ ಕೃತ್ಯಕ್ಕೆ ಜಿಲೆಟಿನ್‌ ಕಡ್ಡಿಗಳನ್ನು ಬಳಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಈ ಬಗ್ಗೆ ಪೊಲೀಸ್‌ ದೂರು ದಾಖಲಿಸಲಾಗಿದೆ

ಬೆಂಗಳೂರು : ಹನೂರು ಅರಣ್ಯ ವ್ಯಾಪ್ತಿಯಲ್ಲಿ ಶೂಟೌಟ್‌ ಘಟನೆ ಬಳಿಕ ಕೆಲ ದುಷ್ಕರ್ಮಿಗಳು ಇಲಾಖೆಯ ವಿವಿಧ ಬೇಟೆ ತಡೆ ಶಿಬಿರ, ವಸತಿ ಗೃಹಗಳನ್ನು ಬಹುತೇಕ ಧ್ವಂಸಗೊಳಿಸಿದ್ದಾರೆ. ಈ ಕೃತ್ಯಕ್ಕೆ ಜಿಲೆಟಿನ್‌ ಕಡ್ಡಿಗಳನ್ನು ಬಳಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಈ ಬಗ್ಗೆ ಪೊಲೀಸ್‌ ದೂರು ದಾಖಲಿಸಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

8 ಬೇಟೆ ತಡೆ ಶಿಬಿರಗಳು ಬಹುತೇಕ ದ್ವಂಸ

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಆ.15ರಂದು ಹನೂರು ಅರಣ್ಯದ ವನ್ಯಧಾಮ ವ್ಯಾಪ್ತಿಯಲ್ಲಿ ಅರಣ್ಯ ಅಧಿಕಾರಿಗಳಿಂದ ನಡೆದ ಬೇಟೆಗಾರರ ಶೂಟ್‌ಔಟ್‌ ಘಟನೆ ಬಳಿಕ ಕೆಲ ದುಷ್ಕರ್ಮಿಗಳ ದಾಳಿಯಿಂದ ಅರಣ್ಯ ಇಲಾಖೆಯ 8 ಬೇಟೆ ತಡೆ ಶಿಬಿರಗಳು ಬಹುತೇಕ ದ್ವಂಸಗೊಂಡಿವೆ.

9 ವಸತಿ ಗೃಹಗಳಿಗೆ ಹಾನಿ

9 ವಸತಿ ಗೃಹಗಳಿಗೆ ಹಾನಿಯಾಗಿದೆ. ಆ ಕಟ್ಟಡಗಳಲ್ಲಿದ್ದ ಪೀಠೋಪಕರಣ, ನಾಲ್ಕು ಚಕ್ರದ ಒಂದು ಇಲಾಖಾ ವಾಹನ, ಸಿಬ್ಬಂದಿಯ ನಾಲ್ಕು ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಈ ಕೃತ್ಯಕ್ಕೆ ಜಿಲೆಟಿನ್‌ ಕಟ್ಟಿಗಳನ್ನು ಬಳಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದ್ದು ಎರಡು ದಿನಗಳಲ್ಲಿ ವರದಿ ಬರಲಿದೆ. ನಂತರ ಘಟನೆಯ ಸತ್ಯಾಂಶಗಳ ಕುರಿತು ವಿವರವಾದ ಮಾಹಿತಿ ನೀಡುವುದಾಗಿ ಹೇಳಿದರು.