ಅಮ್ಮತ್ತಿ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಪುಂಡಾಟ ನಡೆಸುತ್ತಿದ್ದ ಗಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಮಡಿಕೇರಿ: ಅಮ್ಮತ್ತಿ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಪುಂಡಾಟ ನಡೆಸುತ್ತಿದ್ದ ಗಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಮಂಗಳವಾರ ಅಮ್ಮತ್ತಿ ಶಾಲೆ ಬಳಿಯಿಂದ ಆರಂಭಗೊಂಡು ಸಂಜೆ ಅಯ್ಯಪ್ಪ ದೇವರುಕಡುವಿನಲ್ಲಿ ಕೊನೆಗೊಂಡಿದ್ದ ಕಾರ್ಯಾಚರಣೆಯನ್ನು ಬುಧವಾರ ಅಮ್ಮತ್ತಿ ಕಾವಾಡಿ ವ್ಯಾಪ್ತಿಯಲ್ಲಿ ಚಲನವಲನ ಕಂಡುಬಂದ ಹಿನ್ನೆಲೆ ಅಲ್ಲಿಂದಲೇ ಪ್ರಾರಂಭಿಸಲಾಯಿತು. ಕಾವಾಡಿ ತೋಟವೊಂದರಲ್ಲಿದ್ದ ಮೂರು ಆನೆಗಳ ಪೈಕಿ ಗಂಡಾನೆಯೊಂದಕ್ಕೆ ಅರಿವಳಿಕೆ ಮದ್ದು ಹಾಕಲಾಯಿತು. ಅರಿವಳಿಕೆ ನೀಡಲಾಗಿದ್ದ ಆನೆಯನ್ನು ಕಾವಾಡಿಯಿಂದ ಚೆಂಬೆಬೆಳ್ಳೂರು ವ್ಯಾಪ್ತಿಯಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ ಅವರ ಮಾರ್ಗದರ್ಶನದಲ್ಲಿ ಡಿಎಫ್ಒ ವಿನುತಾ ಚೌಹಾಣ್, ಎಸಿಎಫ್ ತಹಸೀಲ್ ಬಾನು ನೇತೃತ್ವದಲ್ಲಿ ಅರಣ್ಯಾಧಿಕಾರಿಗಳಾದ ಶಿವರಾಂ, ಮನೋಜ್, ದೇವರಾಜ್, ಶಶಿ, ಪ್ರಶಾಂತ್, ಸುನಿಲ್ ಅವರ ಮುಂದಾಳತ್ವದಲ್ಲಿ ನಡೆದ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ವಿವಿಧ ಕಡೆಯಿಂದ ಆಗಮಿಸಿದ್ದ ಆರ್‌ಆರ್‌ಟಿ ಸಿಬ್ಬಂದಿ ಪಾಲ್ಗೊಂಡಿದ್ದರು.ಸುಮಾರು 33 ವರ್ಷದ ಗಂಡಾನೆಯನ್ನು ದುಬಾರೆ ಸಾಕಾನೆಗಳಾದ ಸುಗ್ರೀವ, ಪ್ರಶಾಂತ, ಧನಂಜಯ, ಅಜಯ, ಈಶ್ವರ, ಲಕ್ಷ್ಮಣ ಆನೆಗಳ ಸಹಾಯದಿಂದ ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು.
ಮಂಗಳವಾರ ಕೆಲ ಕಾರಣಾಂತರಗಳಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. ಆದರೆ ಬುಧವಾರ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ನಮ್ಮ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ. ದುಬಾರೆ ಸಾಕಾನೆಗಳು ಕೂಡ ಉತ್ತಮ ಸಾಥ್ ನೀಡಿದವು. ಗುರುವಾರ ತಾತ್ಕಾಲಿಕ ವಿರಾಮ ನೀಡಿ ಶುಕ್ರವಾರ ಮತ್ತೆ ಕಾರ್ಯಾಚರಣೆಯನ್ನು ಮುಂದುವರಿಸುವ ಮೂಲಕ ಮತ್ತೆರಡು ಆನೆಗಳನ್ನು ಕೂಡ ಸೆರೆ ಹಿಡಿಯಲಿದ್ದೇವೆ ಎಂದು ವಿನುತಾ ಚೌಹಾಣ್ ಮಾಹಿತಿ ನೀಡಿದರು.