ಬೆಳೆಗಾರರ ನಿರಂತರ ಸಮಸ್ಯೆಯಾಗಿರುವ ಕಾಡಾನೆಗಳ ಹಾವಳಿ ತಡೆಗಟ್ಟಿ ರೈತರ ಆಸ್ತಿ ಹಾನಿ ಹಾಗೂ ಬೆಳೆಗಳಿಗೆ ರಕ್ಷಣೆ ಕೋರಿ ಸುಂಟಿಕೊಪ್ಪ ರೈತ ಸಂಘದ ವತಿಯಿಂದ ಕುಶಾಲನಗರ ವಲಯ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಕುಶಾಲನಗರ: ಬೆಳೆಗಾರರ ನಿರಂತರ ಸಮಸ್ಯೆಯಾಗಿರುವ ಕಾಡಾನೆಗಳ ಹಾವಳಿ ತಡೆಗಟ್ಟಿ ರೈತರ ಆಸ್ತಿ ಹಾನಿ ಹಾಗೂ ಬೆಳೆಗಳಿಗೆ ರಕ್ಷಣೆ ಕೋರಿ ಸುಂಟಿಕೊಪ್ಪ ರೈತ ಸಂಘದ ವತಿಯಿಂದ ಕುಶಾಲನಗರ ವಲಯ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಸುಂಟಿಕೊಪ್ಪ ಹೋಬಳಿಯ ಹೇರೂರು, ಕಲ್ಲೂರು, ನಾಕೂರು, ಶಿರಂಗಾಲ, ಕಂಬಿಬಾಣೆ, ಸುಂಟಿಕೊಪ್ಪ, ಕೊಡಗರಹಳ್ಳಿ ಹಾಗೂ ಕೆದಕಲ್ ಭಾಗಗಳ ರೈತರು ಪ್ರತಿಭಟನೆ ನಡೆಸಿ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು, ರೈತರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೋರಿ ಕಚೇರಿ ಮುಂದೆ ಧರಣಿ ನಡೆಸಿದರು.ಕುಶಾಲನಗರ ವಲಯ ಅರಣ್ಯ ಅಧಿಕಾರಿ ಆರ್ ರಕ್ಷಿತ್ ಅವರು ಸಮಾಧಾನಿಸಲು ಯತ್ನಿಸಿದರು ಯಾವುದೇ ಪ್ರಯೋಜನ ಕಾಣದೆ ನಂತರ ಸ್ಥಳಕ್ಕೆ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ ನೀಡಿ ಇಲಾಖೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಾಹುತ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.ಆದರೆ ಪ್ರತಿಭಟನಾಕಾರರು ಒಪ್ಪದೆ ತಾವು ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಂಜೆ ತನಕ ಅಧಿಕಾರಿಗಳು ಸ್ಥಳಕ್ಕೆ ಬರದೆ ಇದ್ದ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ರೈತ ಸಂಘದ ಪ್ರಮುಖರಾದ ಕ್ಲೈವ್ ಪೊನ್ನಪ್ಪ, ಪದಾಧಿಕಾರಿಗಳಾದ ಚಂದ್ರಶೇಖರ್ ಹೇರೂರು ಮಾತನಾಡಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕಾಡಾನೆ ನಾಡಿಗೆ ನುಗ್ಗಿ ಬೆಳೆಗೆ ಹಾನಿ ಉಂಟು ಮಾಡುತ್ತಿದೆ. ಸರ್ಕಾರ ಶಾಶ್ವತ ಕ್ರಮ ಕೈಗೊಳ್ಳಲು ವಿಫಲವಾಗುತ್ತಿದೆ ಎಂದು ಆರೋಪಿಸಿದರು.ಈ ಸಂದರ್ಭ ಮಾತನಾಡಿದ ಬಿಜೆಪಿ ಪ್ರಮುಖರಾದ ಬಿ ಬಿ ಭಾರತೀಶ್ ರೈತರ ಹೋರಾಟಕ್ಕೆ ಬಿಜೆಪಿ ಧ್ವನಿ ಸೇರಿಸುವ ಬಗ್ಗೆ ತಿಳಿಸಿದರು. ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತರ ಬದುಕಿಗೆ ರಕ್ಷಣೆ ನೀಡಲು ಕಾರ್ಯಯೋಜನೆ ರೂಪಿಸಬೇಕು ಎಂದು ಹೇಳಿದರು.ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡುವ ತನಕ ಪ್ರತಿಭಟನೆ ಮುಂದುವರಿಯುವುದಾಗಿ ರೈತ ಮುಖಂಡರು ತಿಳಿಸಿದರು.
ಸ್ಥಳಕ್ಕೆ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ ಮಂತರ್ ಗೌಡ ಅವರೊಂದಿಗೆ ಸಂಪರ್ಕಿಸಿ ಪ್ರತಿಭಟನೆಯ ಮಾಹಿತಿ ನೀಡಿದ್ದು ಸೆಪ್ಟೆಂಬರ್ ಒಂದರಂದು ಆನೆ ಮಾನವ ಸಂಘರ್ಷದ ಬಗ್ಗೆ ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಮತ್ತು ರೈತ ಪ್ರಮುಖರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಬಿಜೆಪಿ ತಾಲೂಕು ಅಧ್ಯಕ್ಷರಾದ ಗೌತಮ್ ಗೌಡ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ತಕ್ಷಣ ಅರಣ್ಯ ಅಧಿಕಾರಿಗಳು ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಲು ಶಾಶ್ವತ ಯೋಜನೆ ರೂಪಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ರೈತ ಸಂಘದ ಪ್ರಮುಖರಾದ ಅರುಣ್ ಚೆಂಗಪ್ಪ, ದಾಸಂಡ ರಮೇಶ್ ಚೆಂಗಪ್ಪ, ಕುಂಜಲಿನ ಮಂಜುನಾಥ್, ಅಯ್ಯಣ್ಣ ನಾಕೂರು, ವಸಂತ್ ಹಾರನ ಬೈಲ್, ಹಿತೇಶ್ ಕಾನ್ ಬೈಲ್, ಜಗನಾಥ್ ಮಂದೋಡಿ, ಪ್ರಶಾಂತ್ ಕಲ್ಲೂರು, ಕಿರಣ್ ಪ್ರಕಾಶ್ ಮತ್ತಿತರರು ಇದ್ದರು.