ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಮೊದಲ ಹಂತ ಮುಗಿದ ಬೆನ್ನಲ್ಲೇ 43.80 ಲಕ್ಷ ಮತದಾರಿಗೆ ನೋಟಿಸ್‌ ನೀಡಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಿದ್ಧತೆ ನಡೆಸಿದೆ.

ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಮೊದಲ ಹಂತ ಮುಗಿದ ಬೆನ್ನಲ್ಲೇ 43.80 ಲಕ್ಷ ಮತದಾರಿಗೆ ನೋಟಿಸ್‌ ನೀಡಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ 5.54 ಕೋಟಿ ಮತದಾರರು ಇದ್ದಾರೆ. ಎಸ್‌ಐಆರ್‌ ವೇಳೆ 1.07 ಕೋಟಿ ಮತದಾರರನ್ನು ಎಎಸ್‌ಡಿಡಿಒ ಎಂದು ಗುರುತಿಸಲಾಗಿದೆ. ಅಂದರೆ, ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿರುವುದಿಲ್ಲ. ಉಳಿದ 4.46 ಕೋಟಿ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿದೆ. ಈ 4.46 ಕೋಟಿ ಮತದಾರರ ಪೈಕಿ ಮ್ಯಾಪಿಂಗ್‌ ಆಗದ 23.45 ಲಕ್ಷ ಮತದಾರರು ಮತ್ತು ದೋಷಪೂರಿತ ಮಾಹಿತಿ ಇರುವ (ಅನೋಮಲಿಸ್‌) 20.35 ಲಕ್ಷ ಮತದಾರರು ಸೇರಿ ಒಟ್ಟು 43.80 ಲಕ್ಷ ಮತದಾರರಿಗೆ ನೋಟಿಸ್‌ ನೀಡಲಾಗುತ್ತದೆ.

ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಈ 1.07 ಕೋಟಿ ಮತದಾರರ (ಎಎಸ್‌ಡಿಡಿಒ) ಪೈಕಿ ಗೈರು, ಸ್ಥಳಾಂತರಗೊಂಡಿರುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಹೊಸದಾಗಿ ಫಾರ್ಮ್‌ 6 ಸಲ್ಲಿಕೆ ಮಾಡಬೇಕು. ಇದರ ಜೊತೆಗೆ ಅ.1ಕ್ಕೆ 18 ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್‌ 6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಅ.27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟಗೊಳ್ಳಲಿದೆ.

ನೋಟಿಸ್ ಪ್ರಕ್ರಿಯೆ ಹೇಗೆ?:

ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಿದೆ. ಆ.24ರಿಂದ ಅ.22ರ ವರೆಗೆ ಕರಡು ಮತದಾರರ ಪಟ್ಟಿ ಸಂಬಂಧ ಕ್ಲೇಮು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆ.24ರಿಂದ ಅ.22 ರ ವರೆಗೆ ಈ 43.80 ಲಕ್ಷ ಮತದಾರರಿಗೆ ನೋಟಿಸ್‌ ನೀಡಲಾಗುತ್ತದೆ. ಸಂಬಂಧಿತ ಮತದಾರರ ನೋಂದಣಾಧಿಕಾರಿ(ಇಆರ್‌ಒ) ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ(ಎಇಆರ್‌ಒ) ಈ ನೋಟಿಸ್‌ ಜನರೇಟ್‌ ಮಾಡಲಿದ್ದಾರೆ. ಬಳಿಕ ಈ ನೋಟಿಸ್‌ಗಳನ್ನು ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತದಾರರಿಗೆ ಖುದ್ದು ನೀಡಲಿದ್ದಾರೆ. ಈ ವೇಳೆ ಮತದಾರ ನೋಟಿಸ್‌ ಸ್ವೀಕರಿಸುವ ಫೋಟೋ ತೆಗೆದು ಬಿಎಲ್‌ಒ ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಲಿದ್ದಾರೆ.

ಇಆರ್‌ಒ ವಿಚಾರಣೆ:

ಈ ನೋಟಿಸ್‌ನಲ್ಲಿ ವಿಚಾರಣೆ ದಿನಾಂಕ, ಸ್ಥಳ, ಸಮಯ ಇರುತ್ತದೆ. ಆ ದಿನ ಸಂಬಂಧಿತ ಇಆರ್‌ಒ ಗ್ರಾಪಂ ಕಾರ್ಯಾಲಯ ಅಥವಾ ಮತಗಟ್ಟೆಗೆ ಬರಲಿದ್ದಾರೆ. ಅಲ್ಲಿಗೆ ನೋಟಿಸ್‌ ಪಡೆದ ಮತದಾರ ನಿಗದಿತ ದಾಖಲೆಗಳೊಂದಿಗೆ ಖುದ್ದು ಹಾಜರಾಗಬೇಕು. ನಿಗದಿತ ದಾಖಲೆ ಸಲ್ಲಿಕೆ ಮಾಡಬೇಕು. ಈ ವೇಳೆ ಹಾಜರಿ ಪುಸ್ತಕದಲ್ಲಿ ಮತದಾರನ ಸಹಿ ಪಡೆಯಲಾಗುತ್ತದೆ. ಬಳಿಕ ಗ್ರೂಪ್‌ ಫೋಟೋ ಸಹ ತೆಗೆಯಲಾಗುತ್ತದೆ. ಬಳಿಕ ಅದನ್ನು ಇಆರ್‌ಒ ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಲಾಗುತ್ತದೆ. ಮತದಾರರು ಸಲ್ಲಿಸುವ ದಾಖಲೆಗಳನ್ನು ಇಆರ್‌ಒಗಳು ಜಿಲ್ಲಾ ಚುನಾವಣಾಧಿಕಾರಿಗೆ(ಡಿಇಒ) ಕಳುಹಿಸಲಿದ್ದಾರೆ. ಡಿಆರ್‌ಒ ಆ ದಾಖಲೆಗಳ ಅಸಲಿಯತ್ತು ಪರಿಶೀಲಿಸಿ ಮತ್ತೆ ಇಆರ್‌ಒಗೆ ಕಳುಹಿಸಲಿದ್ದಾರೆ. ಬಳಿಕ ಇಆರ್‌ಒ ಆ ಮತದಾರರನ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಿದ್ದಾರೆ.

ಒಂದು ವೇಳೆ ಮತದಾರರ ನೋಟಿಸ್‌ ಪಡೆದು ನಿಗದಿತ ದಿನಾಂಕ ವಿಚಾರಣೆಗೆ ಹಾಜರಾಗದ್ದರೆ, ಮತ್ತೊಂದು ದಿನಕ್ಕೆ ಮನವಿ ಮಾಡಿಕೊಳ್ಳಬಹುದು. ಇಆರ್‌ಒ ನೀಡುವ ಎರಡನೇ ದಿನಾಂಕದಂದು ಮತದಾರರ ತಪ್ಪದೇ ಹಾಜರಾಗಬೇಕು. ಮೂರನೇ ಅವಕಾಶ ಇರುವುದಿಲ್ಲ. ಎರಡನೇ ಬಾರಿಯೂ ಗೈರಾದರೆ ಅಂತಹ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ರದ್ದಾಗಲಿದೆ.

ಮೇಲ್ಮನವಿಗೆ ಅವಕಾಶ:

ಒಂದು ವೇಳೆ ಇಆರ್‌ಒ ಮೌಖಿಕ ಆದೇಶದ ಮೂಲಕ ಮತದಾರನ ಹೆಸರು ಡಿಲೀಟ್‌ ಮಾಡಿದರೆ, 15 ದಿನದೊಳಗೆ ಆ ಮತದಾರ ಡಿಇಒಗೆ ಮೇಲ್ಮನವಿ ಸಲ್ಲಿಸಬಹುದು. ಡಿಇಒ ಸಹ ಆ ಆದೇಶ ಎತ್ತಿ ಹಿಡಿದರೆ, 30 ದಿನದೊಳಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ(ಸಿಇಒ) ಮೇಲ್ಮನವಿ ಸಲ್ಲಿಸಬಹುದು. ಸಿಇಒ ಪರಿಶೀಲಿಸಿ ಅಂತಿಮ ಆದೇಶ ನೀಡಲಿದ್ದಾರೆ.

11 ಮಂದಿ ವಿದೇಶಿ ಪ್ರಜೆಗಳ ಬಳಿ

ಕರ್ನಾಟಕದ ಎಪಿಕ್‌ ಕಾರ್ಡ್‌ !

ಎಸ್‌ಐಆರ್‌ ಪ್ರಕ್ರಿಯೆ ನಡುವೆ 11 ಮಂದಿ ವಿದೇಶಿ ಪ್ರಜೆಗಳು ಕರ್ನಾಟಕ ಮತದಾರರ ಗುರುತಿನ ಚೀಟಿ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ.

ನೋಟಿಸ್‌ ಬಳಿಕ ಮುಂದೇನು?

- ಮ್ಯಾಪಿಂಗ್‌ ಆಗದ 23.45 ಲಕ್ಷ ಮತದಾರರು, ದೋಷಪೂರಿತ ಮಾಹಿತಿ ಇರುವ 20.35 ಲಕ್ಷ ಮತದಾರರಿಗೆ ನೋಟಿಸ್‌

- ನೋಟಿಸ್‌ನಲ್ಲಿ ವಿಚಾರಣೆ ದಿನಾಂಕ, ಸ್ಥಳ, ಸಮಯ ಇರುತ್ತದೆ. ಆ ದಿನ ಸಂಬಂಧಿತ ಇಆರ್‌ಒ ಗ್ರಾಪಂ ಕಾರ್ಯಾಲಯ ಅಥವಾ ಮತಗಟ್ಟೆಗೆ ಬರಲಿದ್ದಾರೆ.

- ಆ ಸಮಯದಲ್ಲಿ ನೋಟಿಸ್‌ ಪಡೆದ ಮತದಾರ ನಿಗದಿತ ದಾಖಲೆಗಳೊಂದಿಗೆ ಖುದ್ದು ಹಾಜರಾಗಬೇಕು. ನಿಗದಿತ ದಾಖಲೆ ಸಲ್ಲಿಸಬೇಕು

- ಈ ವೇಳೆ ಹಾಜರಿ ಪುಸ್ತಕದಲ್ಲಿ ಮತದಾರನ ಸಹಿ ಪಡೆದು, ಗ್ರೂಪ್‌ ಫೋಟೋ ತೆಗೆಯಲಾಗುತ್ತದೆ. ಬಳಿಕ ಇಆರ್‌ಒ ಆ್ಯಪ್‌ಗೆ ಅಪ್ಲೋಡ್‌ ಮಾಡಲಾಗುತ್ತದೆ.

- ಮತದಾರರ ದಾಖಲೆಗಳನ್ನು ಇಆರ್‌ಒಗಳು ಡಿಇಒಗೆ ಕಳುಹಿಸುತ್ತಾರೆ, ಡಿಆರ್‌ಒ ಆ ದಾಖಲೆ ಅಸಲಿಯತ್ತು ಪರಿಶೀಲಿಸಿ ಮತ್ತೆ ಇಆರ್‌ಒಗೆ ಕಳುಹಿಸುತ್ತಾರೆ.

- ಆ ಪ್ರಕ್ರಿಯೆ ನಡೆದ ಬಳಿಕ ಇಆರ್‌ಒ ಆ ಮತದಾರರನ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕೆಲಸ ಮಾಡಲಿದ್ದಾರೆ

- ಮತದಾರರ ನೋಟಿಸ್‌ ಪಡೆದು ನಿಗದಿತ ದಿನದಂದು ವಿಚಾರಣೆಗೆ ಹಾಜರಾಗದ್ದರೆ, ಮತ್ತೊಂದು ದಿನಕ್ಕೆ ಮನವಿ ಮಾಡಿಕೊಳ್ಳಬಹುದು.

- ಇಆರ್‌ಒ ನೀಡುವ 2ನೇ ದಿನಾಂಕದಂದು ಗೈರಾದರೆ ಮೂರನೇ ಅವಕಾಶ ಇರುವುದಿಲ್ಲ. ಕರಡು ಮತದಾರರ ಪಟ್ಟಿಯಿಂದ ಹೆಸರು ರದ್ದಾಗಲಿದೆ.